ಬೆಂಗಳೂರು ಪೊಲೀಸರು ಎಷ್ಟು ನಿಮಿಷದಲ್ಲಿ ಸಮಸ್ಯೆಗೆ ಸ್ಪಂದಿಸುತ್ತಾರೆ? ಸತ್ಯ ಹೇಳಿದ ಹೋಂ ಮಿನಿಸ್ಟರ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸರ ಸ್ಪಂದನೆ ಬಗ್ಗೆ ಸಾರ್ವಜನಿಕರಿಂದ ದೂರು ಮೊದಲಿನಿಂದಲೂ ಇದೆ. ಏನೇ ಘಟನೆ ಆದ್ರೂ ಎಲ್ಲಾ ಆದ್ಮೇಲೆ ಪೊಲೀಸರು ಬರ್ತಾರೆ ಅನ್ನೋ ಮಾತು ಕೂಡ ಇದೆ. ಆದರೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪೊಲೀಸ್ ಕಾರ್ಯವೈಖರಿಯನ್ನು ಶ್ಲಾಘಿಸಿದ್ದು, ಲಂಡನ್ ಮೆಟ್ರೊ ಪೊಲೀಸರು 7 ನಿಮಿಷಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಇದನ್ನು ಗಮನಿಸಿ ನಾವು ಹೊಯ್ಸಳ ಪೊಲೀಸ್ ವ್ಯವಸ್ಥೆ ಪರಿಚಯಿಸಿದೆವು. ಈ ಹಿಂದೆ ಜನರನ್ನು ಸ್ಪಂದಿಸಲು 25 ನಿಮಿಷ ಆಗ್ತಿತ್ತು, ಈಗ ಬೆಂಗಳೂರು ನಗರ ಪೊಲೀಸರು 9 ನಿಮಿಷಗಳಲ್ಲೇ ಸ್ಥಳದಲ್ಲಿರುತ್ತಾರೆ ಎಂದಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮಾಂಡ್ ಸೆಂಟರ್ ವ್ಯವಸ್ಥೆ, ದೇಶದಲ್ಲಿ ಎಲ್ಲೂ ಇಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ, ಸಾರ್ವಜನಿಕರ ಆಸ್ತಿ ರಕ್ಷಣೆ, ನಾವೆಲ್ಲ ಶಾಂತಿಯುತ ಬದುಕು ನಡೆಸಲು, ಕರ್ನಾಟಕ ಸುಭಿಕ್ಷವಾಗಿ ಮತ್ತು ಶಾಂತಿಯಿಂದ ಇದೆ ಎಂದು ಹೇಳಲು ಪೊಲೀಸ್ ಕಾನ್‌ಸ್ಟೇಬಲ್‌ಗಳೇ ಕಾರಣ ಎಂದು ಕೊಂಡಾಡಿದ್ದಾರೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ಕಾರಾಗೃಹ ಅಕಾಡೆಮಿಯ ಕಟ್ಟಡ ಉದ್ಘಾಟಿಸಲಾಗಿದೆ. ಇಷ್ಟು ದೊಡ್ಡ ಕೆಎಸ್ಆರ್‌ಪಿ ಸಮುದಾಯ ಭವನವನ್ನು ನಿರ್ಮಿಸಿಲ್ಲ. ಇದರ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ 40 ಕೋಟಿ ರೂಪಾಯಿ ನೀಡಿದೆ. ಶೇಷಾದ್ರಿಪುರ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ನಮ್ಮ ಇಲಾಖೆ ಮಾನವ ಸಂಪನ್ಮೂಲಗಳ ಇಲಾಖೆ. ನಮ್ಮ ಇಲಾಖೆಯಲ್ಲಿ ದೊಡ್ಡ ಯೋಜನೆಗಳಿಲ್ಲ. ಆದರೆ, ಪೊಲೀಸರೇ ನಮ್ಮ ಇಲಾಖೆಯ ಸಂಪತ್ತು ಎಂದಿದ್ದಾರೆ.

ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್‌ನಲ್ಲಿ 10 ಲಕ್ಷ ಕೋಟಿ ರೂಪಾಯಿ ಹೂಡಿಕೆ ಹರಿದು ಬಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವ್ಥೆ ಕೆಟ್ಟಿದ್ದರೆ, ಇಷ್ಟೊಂದು ಹೂಡಿಕೆ ಬರುತ್ತಿರಲಿಲ್ಲ. ರಾಜ್ಯಕ್ಕೆ ಬಂಡಾವಾಳ ಹೂಡಿಕೆ ಬರುವಲ್ಲಿ, ನಿಮ್ಮ ಉತ್ತಮ ಕಾರ್ಯವೈಖರಿಯಿಂದ ಸಾಧ್ಯವಾಗಿದೆ. ಸಿಎಂ ಬಜೆಟ್ ಸಿದ್ಧಪಡಿಸುವಾಗ ಪೊಲೀಸ್ ಇಲಾಖೆಯ ಅನೇಕ ಬೇಡಿಕೆಗಳನ್ನು ಅವರ ಮುಂದಿಟ್ಟು ಸಾವಿರಾರು ಕೋಟಿ ರೂ. ಕೇಳುತ್ತೇನೆ. ಪೊಲೀಸ್ ವಸತಿ ಗೃಹ ಯೋಜನೆ, ಹೊಸ ವಾಹನಗಳ ಖರೀದಿ ಸೇರಿದಂತೆ ವಿವಿಧ ಕಾರ್ಯಗಳಿಗೆ 900 ಕೋಟಿ ರೂ. ಹೆಚ್ಚು ಹಣ ಕೊಟ್ಟಿದ್ದಾರೆ. ಪೊಲೀಸ್ ಇಲಾಖೆಗೆ ಎಂದಿಗೂ ನಿರಾಸೆ ಮಾಡಿಲ್ಲ ಎಂದಿದ್ದಾರೆ.
ಮೊದಲು ಸೈಬರ್ ಕ್ರೈಂ ಠಾಣೆ ನಮ್ಮಲ್ಲೇ!
ಹೊಸದಾಗಿ ಎರಡು ಪೊಲೀಸ್ ಬೆಟಾಲಿಯನ್ ಸ್ಥಾಪನೆ, 100 ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣಕ್ಕೆ ಹಣ ಒದಗಿಸಿದ್ದಾರೆ. ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು, ಆಧುನಿಕ ಬದಲಾವಣೆ ತರಲು ಎಲ್ಲ ರೀತಿಯ ಸಹಕಾರ ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಂ ಪೊಲೀಸ್ ಠಾಣೆ ಸ್ಥಾಪಿಸಿದ್ದು ಕರ್ನಾಟಕ ಪೊಲೀಸ್. ಸೈಬರ್ ಅಪರಾಧಗಳನ್ನು ತಡೆಗಟ್ಟುವ ಶಕ್ತಿ ಕರ್ನಾಟಕ ಪೊಲೀಸರಿಗೆ ಇದೆ. ರಾಜ್ಯದಲ್ಲಿ ಕೊಲೆ ಸೇರಿದಂತೆ ಎಲ್ಲ ರೀತಿಯ ಅಪರಾಧಗಳು ಕಡಿಮೆಯಾಗಿವೆ. ಸುಳ್ಳು ಸುದ್ದಿ, ಪ್ರಚೋಧನಾತ್ಮಕ ಭಾಷಣ ತಡೆಗಟ್ಟಲು ಕಾನೂನು ತರುತ್ತಿದ್ದೇವೆ ಎಂದಿದ್ದಾರೆ.
ಪೇದೆಗಳಿಗೆ ಹೊಸ ಕ್ಯಾಪ್
ಅನೇಕ ಪೊಲೀಸ್ ಪೇದೆಗಳು ಕ್ಯಾಪ್ ಬದಲಾವಣೆ ಬಗ್ಗೆ ಮನವಿ ಬಂದಿತ್ತು. ಮಳೆ ಸಂದರ್ಭದಲ್ಲಿ ಸಮಸ್ಯೆಯಾಗುತ್ತಿತ್ತು. ಸಿಎಂ ಅವರು ಪೀಕ್ ಕ್ಯಾಪ್‌ಗಳನ್ನು ಆಯ್ಕೆ ಮಾಡಿದ್ದಾರೆ. ಸದ್ಯದಲ್ಲೆ ಪರಿಚಯಿಸುತ್ತೇವೆ. ಪೊಲೀಸ್ ಸಿಬ್ಬಂದಿಗಳ ಹಿತದೃಷ್ಟಿಯಿಂದ ಆರೋಗ್ಯ ತಪಾಸಣಾ ವೆಚ್ಚವನ್ನು 1,500 ರೂ.ಗಳಿಗೆ ಹೆಚ್ಚಿಸಲಾಗಿದೆ. ಎಂದರು. ಡ್ರಗ್ಸ್ ದೊಡ್ಡ ಪ್ರಮಾಣದಲ್ಲಿ ಸರಬರಾಜು ಆಗುತ್ತಿದೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದಾರೆ. ನಮ್ಮ ಸರ್ಕಾರವು ಡ್ರಗ್ಸ್ ವಿರುದ್ಧ ಸಮರ ಸಾರಿದೆ. ಸಾವಿರಾರು ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆಹಚ್ಚಿ ನಾಶಪಡಿಸಲಾಗಿದೆ ಎಂದಿದ್ದಾರೆ.












Click it and Unblock the Notifications