ಮಕ್ಕಳೇ ಹುಷಾರ್! ಇನ್ಮುಂದೆ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿದರೆ ಬೀಳುತ್ತೆ ಕ್ರಿಮಿನಲ್ ಕೇಸ್
ಬೆಂಗಳೂರು, ಜನವರಿ 08: ವಯಸ್ಸಾದ ತಂದೆ-ತಾಯಿ ಮನೆಯಲ್ಲಿ ಕಿರಿಕಿರಿ..ನನ್ನ ಹೆಂಡತಿ ಮಕ್ಕಳಿಗೆ ಅಪ್ಪ-ಅಮ್ಮ ಹೊಂದಾಣಿಕೆ ಆಗುತ್ತಿಲ್ಲ..ನನ್ನ ಪತಿಗೆ ನನ್ನ ಪೋಷಕರು ಇಷ್ಟವಾಗುತ್ತಿಲ್ಲ..ಈ ರೀತಿಯ ಕಾರಣಗಳನ್ನು ಕೊಟ್ಟು ಪೋಷಕರನ್ನು ವೃದ್ಧಾಶ್ರಮಗಳಿಗೆ ಸೇರಿಸಿರುವ, ಸೇರಿಸಲು ಯೋಚಿಸಿರುವ ಮಕ್ಕಳೇ ಹುಷಾರ್..! ಇನ್ನುಮುಂದೆ ಪೋಷಕರನ್ನು ಸುಖಾಸುಮ್ಮನೆ ವೃದ್ಧಾಶ್ರಮಕ್ಕೆ ಬಿಡುವ ಮಕ್ಕಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಲಿದೆ.
ಬೆಂಗಳೂರಿನಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜೊತೆಗೆ ವೃದ್ಧಾಶ್ರಮಗಳಲ್ಲಿ ದಾಖಲಾಗುವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮಹತ್ವದ ಹೆಜ್ಜೆ ಇಟ್ಟಿದ್ದು, ಇಳಿ ವಯಸ್ಸಿನ ತಂದೆ-ತಾಯಿಗಳಿಗೆ ನೆರವಾಗಬೇಕಾದ ಮಕ್ಕಳ ಬೇಜವ್ದಾರಿತನಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.

ತಮ್ಮ ಒತ್ತಡದ ಜೀವನದಲ್ಲಿ ವಯಸ್ಸಾದ ತಂದೆ-ತಾಯಿಗಳನ್ನು ನೋಡಿಕೊಳ್ಳಲಾಗದೇ ಇರುವ ಮಕ್ಕಳು ವೃದ್ಧಾಶ್ರಮಗಳಿಗೆ ದಾಖಲು ಮಾಡಿ ತಿಂಗಳಿಗೆ ಇಂತಿಷ್ಟು ಎಂದು ಹಣ ಕೊಡುತ್ತಿದ್ದಾರೆ. ಇನ್ನೂ ಕೆಲವರು ತಂದೆ-ತಾಯಿಯನ್ನು ನಡು ರಸ್ತೆಯಲ್ಲೇ ಬಿಟ್ಟು ಪರಾರಿಯಾಗುತ್ತಿದ್ದಾರೆ. ಇಂತಹ ವಯಸ್ಸಾದ ಪೋಷಕರು ಅನಾಥಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಸೇರುತ್ತಿದ್ದು, ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇಂತಹ ಅಸಹಾಯಕ ಪೋಷಕರ ನೆರವಿಗೆ ಬೆಂಗಳೂರು ಪೊಲೀಸರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ಸೂಚನೆ ಮೇರೆಗೆ ಬೆಂಗಳೂರು ಪೊಲೀಸರು ಇನ್ನು ಮುಂದೆ ಪೋಷಕರನ್ನು ವೃದ್ಧಾಶ್ರಮಕ್ಕೆ ಹಾಕುವ ಮಕ್ಕಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳ ಮೇಲೆ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕೇಸ್ ದಾಖಲು ಮಾಡುವಂತೆ ಪೊಲೀಸ್ ಕಮೀಷನರ್ ಬಿ. ದಯಾನಂದ್ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
2024ರ ಜನವರಿಯಿಂದಲೇ ಬೆಂಗಳೂರು ಪೊಲೀಸರು ಈ ಮಹತ್ವದ ಕಾರ್ಯ ಆರಂಭಿಸಿದ್ದಾರೆ. ಬೆಂಗಳೂರಿನ ವೃದ್ಧಾಶ್ರಮಗಳಿಗೆ ಭೇಟಿ ನೀಡಲಿರುವ ಬೆಂಗಳೂರು ಪೊಲೀಸರು, ಖುದ್ದು ಪೋಷಕರನ್ನು ಭೇಟಿಯಾಗಿ ಮಾತನಾಡಲಿದ್ದಾರೆ. ಮಕ್ಕಳಿದ್ದು, ಅವರು ಆರ್ಥಿಕವಾಗಿ ಶಕ್ತರಾಗಿದ್ದು ಕೂಡ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿರುವ ಮಕ್ಕಳನ್ನು ಪೊಲೀಸರು ಪತ್ತೆಹಚ್ಚಲಿದ್ದಾರೆ.

ಬಳಿಕ ಅವರನ್ನು ಸಂಪರ್ಕಿಸಿ ಪೋಷಕರನ್ನು ವಾಪಾಸ್ ಮನೆಗೆ ಕರೆದೊಯ್ಯುವಂತೆ ಸೂಚನೆ ನೀಡಲಿದ್ದಾರೆ. ಒಂದು ವೇಳೆ ಪೊಲೀಸರ ಮಾತಿಗೆ ಸಮ್ಮತಿಸದೇ ಡೊಂಟ್ ಕೇರ್ ಎಂದ ಮಕ್ಕಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಲಿದೆ. ಈ ಮೂಲಕ ಬೆಂಗಳೂರು ಪೊಲೀಸರು ವಯಸ್ಸಾದ ತಂದೆ-ತಾಯಿಗಳು ಮಕ್ಕಳು ಮೊಮ್ಮಕ್ಕಳೊಂದಿಗೆ ಇರುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸುಖಾಸುಮ್ಮನೆ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿರುವ ಅಥವಾ ಸೇರಿಸಲು ಮುಂದಾಗಿರುವ ಮಕ್ಕಳು ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ.
ರಾತ್ರಿಯ ವೇಳೆ ಕಾರಿನಲ್ಲಿ ಬಂದು ಹೆತ್ತ ತಾಯಿಯನ್ನು ಬಿಟ್ಟು ಹೋದ ಮಗಳು-ಅಳಿಯ
ಬೆಂಗಳೂರು: ರಾತ್ರಿಯ ವೇಳೆ ಕಾರಿನಲ್ಲಿ ಬಂದು ಹೆತ್ತ ತಾಯಿಯನ್ನು ನಡುರಸ್ತೆಯಲ್ಲಿ ಮಗಳೊಬ್ಬಳು ಬಿಟ್ಟು ಹೋದ ಮನಕಲಕುವ ಘಟನೆ ಇತ್ತೀಚಿಗೆ ಬೆಂಗಳೂರಿನ ಆನೇಕಲ್‌ನಲ್ಲಿ ನಡೆದಿತ್ತು. ಸುಮಾರು 80 ವರ್ಷದ ವೃದ್ಧೆಯನ್ನು ಕಾರಿನಲ್ಲಿ ಬಂದ ಮಗಳು ಹಾಗೂ ಅಳಿಯ ಆನೇಕಲ್‌ನ ಸರ್ಜಾಪುರದ ವಿ.ಕಲ್ಲಹಳ್ಳಿಯ ದೇವಸ್ಥಾನದ ಬಳಿ ಬಿಟ್ಟು ಪರಾರಿಯಾಗಿದ್ದರು. ಈ ಘಟನೆ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ರಾತ್ರಿಯಿಂದ ಬೆಳಗಾಗುವವರೆಗೂ ದೇವಸ್ಥಾನದ ಬಳಿ ಚಳಿಯಿಂದ ನಲುಗಿ ಹೋಗಿದ್ದ ವೃದ್ಧೆಯನ್ನು ಸ್ಥಳೀಯರು ರಕ್ಷಣೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.












Click it and Unblock the Notifications