ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ 3 ದಿನ ಸೀಲ್ ಡೌನ್
ಬೆಂಗಳೂರು, ಜೂನ್ 26 : ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಕಚೇರಿಯಲ್ಲಿ ಕೆಲಸ ಮಾಡುವ ಓರ್ವ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ.
ಶುಕ್ರವಾರ ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಪರವಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ಹೇಮಂತ್ ನಿಂಬಾಳ್ಕರ್ ಆದೇಶ ಹೊರಡಿಸಿದ್ದಾರೆ. ಮೂರು ದಿನಗಳ ಕಾಲ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಯಾವ ಸಿಬ್ಬಂದಿಯೂ ಕೆಲಸ ನಿರ್ವಹಣೆ ಮಾಡುವುದಿಲ್ಲ.

ಜೂನ್ 27 ರಿಂದ 29ರ ತನಕ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಚೇರಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿರುತ್ತದೆ. ಆದ್ದರಿಂದ, ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿಗಳು ಮನೆಯಿಂದ/ಉಪ ವಿಭಾಗದ ಕಚೇರಿಯಿಂದ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ.
ಮೂರು ದಿನಗಳ ಅವಧಿಯಲ್ಲಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿನ ನಗರ ನಿಯಂತ್ರಣ ಕೋಣೆಯಲ್ಲಿ ನಿಯಮಿತ ಸಿಬ್ಬಂದಿಗಳನ್ನು ಒಳಗೊಂಡಂತೆ ಕಾರ್ಯ ನಿರ್ವಹಣೆ ಮಾಡಲಿದ್ದು, ಇದನ್ನು ಹೊರತುಪಡಿಸಿ ಕಚೇರಿಯಲ್ಲಿ ಯಾವುದೇ ಕೆಲಸ ನಿರ್ವಹಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೆಂಗಳೂರು ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿ ಸಿಬ್ಭಂದಿಗಳ ಗಂಟಲು ದ್ರವದ ಪರೀಕ್ಷೆ ಮಾಡಲಾಗಿತ್ತು. ಇದರ ವರದಿ ಶುಕ್ರವಾರ ಬಂದಿದೆ. ಒಬ್ಬ ಸಿಬ್ಬಂದಿಗೆ ಸೋಂಕು ಖಚಿತವಾಗಿದ್ದು, ಅವರ ಜೊತೆ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.
ಶುಕ್ರವಾರ ಬೆಂಗಳೂರಿನ 6 ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ಸಿ. ಟಿ. ಮಾರ್ಕೆಟ್ ಠಾಣೆಯ ನಾಲ್ವರು, ಚಾಮರಾಜಪೇಟೆ ಠಾಣೆಯ ಇಬ್ಬರು ಸಿಬ್ಬಂದಿಗೆ ಸೋಂಕು ತಗುಲಿದೆ.












Click it and Unblock the Notifications