ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಬೈಲ್ ಕಳ್ಳತನ: ಜಾರ್ಖಂಡ್ ಮೂಲದ ಕಳ್ಳರ ಜಾಲ ಬೇಧಿಸಿದ ಬೆಂಗಳೂರು ಪೊಲೀಸರು
ಬೆಂಗಳೂರು: ಸಿಲಿಕಾನ್ ಸಿಟಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಐಪಿಎಲ್ ಪಂದ್ಯದ ವೇಳೆ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಮೊಬೈಲ್ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್ ಅನ್ನು ಕಬ್ಬನ್ ಪಾರ್ಕ್ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ. ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ಸಂದರ್ಭದಲ್ಲಿ ಸಕ್ರಿಯವಾಗಿದ್ದ ಈ ಜಾಲದ ಒಟ್ಟು 13 ಮಂದಿಯನ್ನು ಬಂಧಿಸಲಾಗಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ 70 ಕಳವು ಮಾಡಿದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ?
ಕಳೆದ ಮಾರ್ಚ್ 28ರಂದು ಕ್ರೀಡಾಂಗಣದ ಒಳಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಜನಸಂದಣಿ ಇತ್ತು. ಈ ದಟ್ಟಣೆಯ ಲಾಭ ಪಡೆದ ಖದೀಮರು, ಸದ್ದಿಲ್ಲದೆ ಪ್ರೇಕ್ಷಕರ ಜೇಬಿನಿಂದ ಬೆಲೆಬಾಳುವ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಲಪಟಾಯಿಸಿದ್ದರು. ಪಂದ್ಯ ಮುಗಿದ ನಂತರ ಸಾಲು ಸಾಲಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಕೇಂದ್ರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಮಾರ್ಚ್ 31ರಂದು ಮೊದಲ ಹಂತದಲ್ಲಿ ಒಬ್ಬ ವಯಸ್ಕ ಮತ್ತು ಮೂವರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಿದಾಗ 21 ಫೋನ್‌ಗಳು ಪತ್ತೆಯಾದವು. ಇದೇ ಬೆನ್ನುಹತ್ತಿದ ಪೊಲೀಸರಿಗೆ ಏಪ್ರಿಲ್ 2ರಂದು ಮತ್ತೆ ಆರು ಮಂದಿ ಅಪ್ರಾಪ್ತರು ಸಿಕ್ಕಿಬಿದ್ದಿದ್ದು, ಅವರನ್ನು ಬಾಲಾಪರಾಧಿಗಳ ವೀಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಗಳಾದ ಸೋಹನ್ ಕುಮಾರ್, ಸಂಜೀತ್ ಕುಮಾರ್, ಈಶಲ್ ಕುಮಾರ್ ಮತ್ತು ಶುಭಂ ಕುಮಾರ್ ಎಲ್ಲರೂ ಜಾರ್ಖಂಡ್ ಮೂಲದವರಾಗಿದ್ದಾರೆ. ಏಪ್ರಿಲ್ 3 ರಂದು ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನದ ಬೃಹತ್ ಜಾಲ ಬೆಳಕಿಗೆ ಬಂದಿದ್ದು, ಹೆಚ್ಚುವರಿಯಾಗಿ 54 ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆಯಾಗಿ ಪೊಲೀಸರು 75 ಹ್ಯಾಂಡ್‌ಸೆಟ್‌ಗಳನ್ನು ವಶಪಡಿಸಿಕೊಂಡಿದ್ದು, ಇದರಲ್ಲಿ 70 ಫೋನ್‌ಗಳು ಸಾರ್ವಜನಿಕರಿಂದ ಕಳ್ಳತನ ಮಾಡಿದ್ದಾಗಿವೆ. ಉಳಿದ 5 ಫೋನ್‌ಗಳನ್ನು ಕೃತ್ಯ ಎಸಗಲು ಆರೋಪಿಗಳೇ ಬಳಸುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಟೇಡಿಯಂ ಪ್ರವೇಶಿಸಿದ್ದು ಹೇಗೆ?
ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಮಾತನಾಡಿ, ಈ ಗ್ಯಾಂಗ್ ಹೊರರಾಜ್ಯದಿಂದ ಬೆಂಗಳೂರಿಗೆ ಬಂದು ಕೇವಲ ಜನದಟ್ಟಣೆ ಇರುವ ಕ್ರೀಡಾಂಗಣದಂತಹ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿತ್ತು. ಅವರು ಕ್ರೀಡಾಂಗಣದ ಒಳಗೆ ಹೇಗೆ ಪ್ರವೇಶ ಪಡೆದರು ಮತ್ತು ಈ ಜಾಲದ ಹಿಂದೆ ಇನ್ಯಾರೆಲ್ಲಾ ಇದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಮಾರ್ಚ್ 28ರ ಪಂದ್ಯದ ನಂತರ ಸುಮಾರು 20ಕ್ಕೂ ಹೆಚ್ಚು ದೂರುಗಳು ಏಕಕಾಲಕ್ಕೆ ದಾಖಲಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಕಬ್ಬನ್ ಪಾರ್ಕ್ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಗುರುತಿಸಿ, ತಾಂತ್ರಿಕ ತನಿಖೆಯ ಮೂಲಕ ಈ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಶಪಡಿಸಿಕೊಳ್ಳಲಾದ 70 ಫೋನ್‌ಗಳ ಮಾಲೀಕರನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಐಎಂಇಐ (IMEI) ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಮೂಲ ಮಾಲೀಕರನ್ನು ಸಂಪರ್ಕಿಸಲಿದ್ದಾರೆ. ದೂರು ನೀಡಿದವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.












Click it and Unblock the Notifications