New Year 2026 | ಬೆಂಗಳೂರು ಸಂಚಾರ ಸಲಹೆ; 50 ಮೇಲ್ಸೇತುವೆ, ಮೆಟ್ರೋ ನಿಲ್ದಾಣ, ಪ್ರಮುಖ ರಸ್ತೆಗಳು ಬಂದ್
ಬೆಂಗಳೂರು: ಹೊಸ ವರ್ಷಕ್ಕೆ ಎರಡು ದಿನಗಳು ಮಾತ್ರವೇ ಬಾಕಿ ಉಳಿದಿದೆ. ಬೆಂಗಳೂರಿನಲ್ಲಿ ಈ ವರ್ಷವು ಅತ್ಯಧಿಕ ಜನ ಸೇರಲಿದ್ದು, ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಹಿನ್ನೆಲೆ ನಗರ ಪೊಲೀಸರು ಡಿಸೆಂಬರ್ 31ರಂದು ಸಂಜೆಯಿಂದಲೇ ಹಲವು ಕ್ರಮ ಜಾರಿಗೊಳಿಸಿದ್ದಾರೆ. ವಿವಿಧೆಡೆ ರಸ್ತೆಗಳು, ಮೇಲ್ಸೇತುವೆ-ಜಂಕ್ಷನ್‌ಗಳಲ್ಲಿ ಸಂಚಾರ ನಿರ್ಬಂಧಿಸಿದ್ದಾರೆ. ನಗರದ ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಸಹ ಬಂದ್ ಮಾಡಲಾಗಿದೆ.
ಬೆಂಗಳೂರು ನಗರ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಡಿಸೆಂಬರ್ 31 ರಂದು ಸಂಜೆ 4 ಗಂಟೆಯಿಂದ 2026ರ ಜನವರಿ 1ರಂದು ಬೆಳಗಿನ ಜಾವ 3 ಗಂಟೆಯ ವರೆಗೆ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ವಾಹನಗಳು ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳು ಹೊರತುಪಡಿಸಿ ಉಳಿದೆಲ್ಲ ನಾಗರಿಕ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಸಂಭ್ರಮಾಚರಣೆ ಜೋರಾಗಿರುವ ಕಾರಣ ತಾತ್ಕಾಲಿಕವಾಗಿ 50 ಮೇಲ್ಸೇತುವೆಗಳ ಮೇಲಿನ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ನಿಯಮ ಬುಧವಾರ (ಡಿ.31) ರಾತ್ರಿ 9.30ರಿಂದ ಅನ್ವಯಿಸಲಿದೆ.

ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ: ಇಲ್ಲಿ ಗಮನಿಸಿ
ಸಾರ್ವಜನಿಕರ ಭದ್ರತಾ ದೃಷ್ಟಿಯಿಂದ ಬೆಂಗಳೂರಿನಲ್ಲಿ 20,000 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ವಿವಿಧೆಡೆ ವಾಚ್ ಟವರ್ ಸ್ಥಾಪಿಸಲಾಗಿದೆ. ಸುರಕ್ಷಿತ ವಲಯ ಗುರುತಿಸಲು ಹೀಟ್ ಮ್ಯಾಪ್ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ಕೇಂದ್ರಗಳನ್ನು ಸ್ಥಾಪಿಸಿದ್ದು, ದೂರು ಬರುತ್ತಿದ್ದಂತೆ ಸಿಬ್ಬಂದಿ ಸ್ಪಂದಿಸಲಿದ್ದಾರೆ. ಬಿಎಂಟಿಸಿ ಬಸ್ ಹಾಗೂ ನಮ್ಮ ಮೆಟ್ರೋ ಸೇವೆಗಳ ಅವಧಿ ಈಗಾಗಲೇ ಹೆಚ್ಚಿಸಿ ಮಾಹಿತಿ ನೀಡಲಾಗಿದೆ.
ಈಗಾಗಲೇ ನಗರ ಪೊಲೀಸರು ಕೆಲವೆಡೆ ವಾಹನ ಪರಿಶೀಲನೆ ನಡೆಸಿದ್ದಾರೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು 166 ಕಡೆಗಳಲ್ಲಿ ಡ್ರಂಕ್ ಡ್ರೈವ್ ವಾಹನ ತಪಾಸಣೆ ನಡೆಸಲಿದ್ದಾರೆ. ಕುಡಿದು ಗಾಡಿ ಓಡಿಸಿದರೆ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕರೆಲ್ಲರು ಜವಾಬ್ದಾರಿಯಿಂದ ಹೊಸ ವರ್ಷ ಆಚರಿಸುವಂತೆ ಪೊಲೀಸರು ಕರೆ ನೀಡಿದ್ದಾರೆ.
ನಮ್ಮ ಮೆಟ್ರೋ ನಿಲ್ದಾಣ ಬಂದ್
ಡಿಸೆಂಬರ್ 31ರ ತಡರಾತ್ರಿವರೆಗೂ ನಮ್ಮ ಮೆಟ್ರೋ ಸೇವೆ ವಿಸ್ತರಿಸಲಾಗಿದೆ. ರಾತ್ರಿ 2.45 ಗಂಟೆವರೆಗೆ ಮೆಟ್ರೋ ಸೇವೆ ಸಿಗಲಿದೆ. ಎಂಜಿ ರಸ್ತೆ, ಚರ್ಚ್‌ಸ್ಟ್ರೀಟ್ ರಸ್ತೆ ಭಾಗದಲ್ಲಿ ಹೆಚ್ಚಿನ ಜನದಟ್ಟಣೆ ಇರುವ ಕಾರಣ ಅಂದು ರಾತ್ರಿ 10 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಬಂದ್ ಮಾಡಲಾಗಿದೆ.
ಡಿ.31ರ ರಾತ್ರಿ 8ರಿಂದ ಬೆಳಗ್ಗೆ 3ರವರೆಗೆ ಸಂಚಾರ ನಿಷೇಧಿತ ರಸ್ತೆಗಳು
* ಎಂ.ಜಿ.ರಸ್ತೆ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ.
* ಬ್ರಿಗೇಡ್ ರಸ್ತೆಯಲ್ಲಿ, ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಅಪೇರಾ ಜಂಕ್ಷನ್‌ವರೆಗೆ
* ಚರ್ಚ್ ಸ್ಟ್ರೀಟ್‌ರಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ.
* ರೆಸಿಡೆನ್ಸಿ ರಸ್ತೆ, ಆಶೀರ್ವಾದಮ್ ಜಂಕ್ಷನ್ ನಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ.
* ಮ್ಯೂಸಿಯಂ ರಸ್ತೆಯಲ್ಲಿ ಎಂ.ಜಿ.ರಸ್ತೆ ಜಂಕ್ಷನ್ ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ) ವೃತ್ತದ ವರೆಗೆ.
* ರೆಸ್ಟ್ ಹೌಸ್ ರಸ್ತೆಯಲ್ಲಿ ಮ್ಯೂಸಿಯಂ ರಸ್ತೆ ಜಂಕ್ಷನ್‌ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್‌ವರೆಗೆ
* ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ ರಸ್ತೆ ಜಂಕ್ಷನ್‌ವರೆಗೆ (ಶಂಕರ್ ನಾಗ್ ಚಿತ್ರಮಂದಿರವರೆಗೆ) ವಾಹನಗಳ ಪ್ರವೇಶ ನಿಷೇಧಿಸಲಾಗಿದೆ.
ಡಿ.31ರ ಸಂಜೆ 4 ರಿಂದ ಜ.1ಬೆಳಗ್ಗೆ 3ವರೆಗೆ ಪಾರ್ಕಿಂಗ್ ನಿಷೇಧಿತ ರಸ್ತೆಗಳು
* ಎಂ.ಜಿ ರಸ್ತೆಯಲ್ಲಿ, ಅನಿಲ್ ಕುಂಬ್ಳೆ ವೃತದಿಂದ ಟ್ರಿನಿಟಿ ವೃತ್ತದ ವರೆಗೆ.
* ಬ್ರಿಗೇಡ್ ರಸ್ತೆಯಲ್ಲಿ, ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಓಲ್ಡ ಪಿ.ಎಸ್ ಜಂಕ್ಷನ್‌ವರೆಗೆ.
* ಚರ್ಚ್ ಸ್ಟ್ರೀಟ್‌ನಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಸೆಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್‌ವರೆಗೆ.
* ರೆಸ್ಟ್ ಹೌಸ್ ರಸ್ತೆಯಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ
* ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ ರಸ್ತೆ ಜಂಕ್ಷನ್‌ನಿಂದ ಎಸ್.ಬಿ.ಐ ವೃತ್ತದ ವರೆಗೆ.
* ರೆಸಿಡೆನ್ಸಿ ರಸ್ತೆ, ಆಶೀರ್ವಾದಮ್ ಜಂಕ್ಷನ್ ನಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ.
* ಈ ರಸ್ತೆಗಳಲ್ಲಿ ಕರ್ತವ್ಯ ನಿರತ ವಾಹನಗಳು, ಪೊಲೀಸರ ವಾಹನಗಳಿಗೆ ಪಾರ್ಕಿಂಗ್ ಗೆ ಅವಕಾಶ ಇರುತ್ತದೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಅವರು 2026ರ ಹೊಸ ವರ್ಷಾಚರಣೆಗೆ ಸಂಬಂಧಿಸಿದ ಸಮಗ್ರ ಭದ್ರತಾ ವ್ಯವಸ್ಥೆಗಳನ್ನು ವಿವರಿಸಿದರು. ಇದರಲ್ಲಿ ಹೆಚ್ಚಿಸಿದ ನಿಗಾ ವ್ಯವಸ್ಥೆ, ಮಹಿಳಾ ಸುರಕ್ಷತಾ ಕ್ರಮಗಳು, ವಿಸ್ತರಿತ ಸಾರ್ವಜನಿಕ ಸಾರಿಗೆ, ಉಲ್ಲಂಘನೆಗಳ ವಿರುದ್ಧ… pic.twitter.com/cDiRgYenNN
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) December 29, 2025
55,330 ಜನರ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ
ಹೊಸ ವರ್ಷದ ಪ್ರಯುಕ್ತ ಡಿಸೆಂಬರ್ 22ರಿಂದ 28ರವರೆಗೆ ಸಂಚಾರ ಪೂರ್ವ ವಿಭಾಗದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವ ಚಾಲಕರು & ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಒಟ್ಟು 55,330 ಜನರನ್ನು ತಪಾಸಣೆಗೊಳಪಡಿಸಿದ್ದು, 684 ಮಂದಿ ಮದ್ಯಪಾನ ಮಾಡಿರುವುದು ಧೃಡಪಟ್ಟಿದೆ. ಸದರಿ ಅವರ ಡ್ರೈವಿಂಗ್ ಲೈಸೆನ್‌ಗಳನ್ನು ಅಮಾನತಿಗೆ ಸೂಚಿಸಲಾಗಿದೆ. ಈ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ಜನವರಿ 1ರವರೆಗೂ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುರಕ್ಷಿತವಾಗಿ ಮನೆ ತಲುಪಿ
ಅಮೂಲ್ಯ ನೆನಪುಗಳು ಉಳಿಯಲಿ! ಫುಟ್ ಪಾತ್ ಮೇಲೆ ಮದ್ಯಪಾನದ ನಂತರ ಉಂಟಾದ ಸಮಸ್ಯೆಗಳಿಂದಲ್ಲ. ಹೊಸ ವರ್ಷದಂದು ಜವಾಬ್ದಾರಿಯುತವಾಗಿ ಮದ್ಯಪಾನ ಮಾಡಿ. ನಿಮ್ಮನ್ನು ಸುರಕ್ಷಿತವಾಗಿಡಲು ಪೊಲೀಸರು ಕರ್ತವ್ಯದಲ್ಲಿದ್ದಾರೆ. ಸಹಾಯಕ್ಕಾಗಿ ನಮ್ಮ ಕರೆಗೆ ಸಹಕರಿಸಿ. ನಿಮ್ಮ ಪ್ರಯಾಣವನ್ನು ಮೊದಲೇ ಯೋಜಿಸಿ. ಸುರಕ್ಷಿತವಾಗಿ ನಿಮ್ಮ ಮನೆ ತಲುಪಿ ಎಂದು ನಗರ ಪೊಲೀಸರು ಕೋರಿದ್ದಾರೆ.
ಬೆಂಗಳೂರು ನಗರ ಪೊಲೀಸ್ ನ ಆಗ್ನೇಯ ವಿಭಾಗದಲ್ಲಿ ಹೊಸ ವರ್ಷದ ಸಿದ್ಧತೆಗಳು ಭರದಿಂದ ಸಾಗಿವೆ. ಡಿಸಿಪಿ ಸಾರಾ ಫಾತಿಮಾ, ಐಪಿಎಸ್ ನೇತೃತ್ವದಲ್ಲಿ, ಸುರಕ್ಷತಾ ಕ್ರಮಗಳನ್ನು ಬಲಪಡಿಸಲಾಗುತ್ತಿದೆ. ಅವರು ಜನರನ್ನುದ್ದೇಶಿಸಿ ಜವಾಬ್ದಾರಿಯುತ ಆಚರಣೆಯ ಬಗ್ಗೆ ಕರೆ ನೀಡಿದ್ದಾರೆ. ವರ್ಷಾಚರಣೆಯ ಸಮಯದಲ್ಲಿ ಯಾವುದೇ ತುರ್ತು ಸಮಯದಲ್ಲಿ ಮಹಿಳಾ ಸುರಕ್ಷತೆಗೆ ಗಮನ ಹರಿಸಲಾಗಿದೆ. ಸಂಚಾರ ನಿಯಮ ಪಾಲಿಸಬೇಕು. ಜವಾಬ್ದಾರಿಯುತವಾಗಿ ವರ್ತಿಸುವಂತೆ ಹೇಳಿದ್ದಾರೆ.












Click it and Unblock the Notifications