ಬೆಂಗಳೂರು ಹೊಸ ಪಾಲಿಕೆ: ಇ ಖಾತಾ & ಆಸ್ತಿ ತೆರಿಗೆ ಪಾವತಿ ಹೇಗೆ ?
ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬದಲಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದೆ. ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ಸಂಗ್ರಹ ಹಾಗೂ ಇ ಖಾತಾ ಪ್ರಕ್ರಿಯೆ ಹೇಗೆ ಎನ್ನುವ ವಿಚಾರಗಳಲ್ಲಿ ಜನರಿಗೆ ಗೊಂದಲ ಮೂಡಿದೆ. ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಕೆಲವೊಂದು ಪ್ರಮುಖ ಸೂಚನೆಗಳನ್ನು ಕೊಟ್ಟಿದ್ದಾರೆ.
ಅಲ್ಲದೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಎಲ್ಲಾ ವಿಭಾಗಗಳ ಕುರಿತು ಸಮಗ್ರ ಪರಿಚಯ ಹಾಗೂ ವಿಶೇಷವಾಗಿ 03 ವಿಷಯಗಳಾದ ರಸ್ತೆ ಗುಂಡಿ, ಬೀದಿ ದೀಪ ಹಾಗೂ ಕಸದ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡಬೇಕು ಎಂದಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 5 ನಗರ ಪಾಲಿಕೆಗಳ ಅಧಿಕಾರಿಗಳ ಜೊತೆ ಮಲ್ಲೇಶ್ವರಂನ ಐ.ಪಿ.ಪಿ ಕೇಂದ್ರದಲ್ಲಿ ಮೊದಲ ಸಭೆ ನಡೆಸಿದ ವೇಳೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಾಗರಿಕರಿಗೆ ಉತ್ತಮ ಆಡಳಿತ ಹಾಗೂ ಪರಿಣಾಮಕಾರಿಯಾಗಿ ಯೋಜನೆಗಳನ್ನು ಜಾರಿಗೊಳಿಸುವ ಸಲುವಾಗಿ ಜಿ.ಬಿ.ಎ ಜಾರಿಗೆ ತಂದು 5 ನಗರ ಪಾಲಿಕೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಹೊಸದಾಗಿ ನೇಮಕಗೊಂಡ ಎಲ್ಲಾ ಅಧಿಕಾರಿಗಳಿಗೂ ಎಲ್ಲಾ ರೀತಿಯ ಸಹಕಾರ ಮತ್ತು ಸೌಲಭ್ಯಗಳನ್ನು ನೀಡಲಾಗುವುದು ಎಂದಿದ್ದಾರೆ.

ನಗರದಲ್ಲಿ ಕಸದ ಸಮಸ್ಯೆ ನಿವಾರಣೆಗಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತವು 5 ನಗರ ಪಾಲಿಕೆಗಳ ಜೊತೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿದೆ. ಬೆಂಗಳೂರು ಅತೀ ಮುಖ್ಯವಾದ ಸ್ಥಳವಾಗಿದ್ದು, ಅದನ್ನು ನಾವೆಲ್ಲರೂ ಸೇರಿ ಮೇಲ್ದರ್ಜೆಗೆ ತಂದು ಜನ ಮೆಚ್ಚುವ ಕೆಲಸ ಮಾಡಬೇಕೆಂದು ತಿಳಿಸಿದರು. ಜಿ.ಬಿ.ಎ ಹಾಗೂ 5 ನಗರ ಪಾಲಿಕೆಗಳ ಸಮನ್ವಯದಿಂದ ಕೆಲಸ ಮಾಡಿ, ಇರುವ ಸಮಸ್ಯೆಗಳನ್ನು ಹಂತ-ಹಂತವಾಗಿ ನಿವಾರಣೆ ಮಾಡಬೇಕು ಎಂದು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮಾತನಾಡಿ, ಜಿ.ಬಿ.ಎ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ಹಾಗೂ ಇ-ಖಾತಾ ನೀಡುವ ಸಲುವಾಗಿ ಕಂದಾಯ ವಿಭಾಗದ ವಿಶೇಷ ಆಯುಕ್ತರು ಪ್ರತಿನಿತ್ಯ ನಡೆಸುವ ವರ್ಚ್ಯುವಲ್ ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರು ಪಾಲ್ಗೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ನೆವೆಂಬರ್ 1, 2025 ರಂದು ಎಲ್ಲಾ ನಗರ ಪಾಲಿಕೆಗಳ ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಈ ಪೈಕಿ ಎಲ್ಲರಿಗೂ ಅನುಕೂಲವಾಗುವಂತಹ ಉತ್ತಮ ಸ್ಥಳಗಳನ್ನು ಗುರುತಿಸಿ ಅಂತಿಮಗೊಳಿಸಿದೆ. ಈಗಾಗಲೇ ಯೋಜನಾ ವಿಭಾಗ, ಬೃಹತ್ ನೀರುಗಾಲುವೆ, ವರ್ಲ್ಡ್ ಬ್ಯಾಂಕ್ ಯೋಜನೆ ಕಾಮಗಾರಿಗಳನ್ನು ಆಯಾ ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಲಾಗಿದ್ದು, ಆಯಾ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಾಮಫಲಕಗಳನ್ನು ಅಳವಡಿಸಿ: ಸರ್ಕಾರದಿಂದ ಈಗಾಗಲೇ 5 ನಗರ ಪಾಲಿಕೆಗಳಿಗೆ ಗಡಿಗಳನ್ನು ಗುರುತಿಸಿದ್ದು, ನಾಗರಿಕರಿಗೆ ಯಾವ ನಗರ ಪಾಲಿಕೆಗೆ ಬರಲಿದ್ದೇವೆ ಎಂಬ ಗೊಂದಲಗಳಿವೆ. ಈ ಸಂಬಂಧ ಆಯಾ ನಗರ ಪಾಲಿಕೆಗಳಲ್ಲಿ ಕೂಡಲೇ ನಾಮಫಲಕಗಳನ್ನು ಅಳವಡಿಸಬೇಕು. ಪಾಲಿಕೆಗಳ ಗಡಿಗಳಲ್ಲಿ ಸರಿಯಾದ ರೀತಿಯಲ್ಲಿ ಗಡಿ ನಿಗದಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ಮಾತನಾಡಿ, ಜಿ.ಬಿ.ಎ. ವ್ಯಾಪ್ತಿಯಲ್ಲಿ ಈ ಸಾಲಿನಲ್ಲಿ ರೂ.6,700/- ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಈ ಪೈಕಿ ಈವರೆಗೆ ರೂ.3,217/- ಕೋಟಿ ಸಂಗ್ರಹಿಸಲಾಗಿದ್ದು, ರೂ.3,483/- ಕೋಟಿ ಸಂಗ್ರಹಿಸಬೇಕಿದೆ. ಅಲ್ಲದೇಸುಮಾರು 2.75 ಲಕ್ಷ ಆಸ್ತಿ ಸುಸ್ತಿದಾರರಿಂದ ರೂ.786 ಕೋಟಿ ತೆರಿಗೆ ಸಂಗ್ರಹಿಸಬೇಕಿದ್ದು, ಅವರೆಲ್ಲರಿಗೂ ಎಲೆಕ್ಟ್ರಾನಿಕ್ ಡಿಮಾಂಡ್ ನೋಟೀಸ್ ನಿಡಲಾಗಿದೆ. ಈ ಸಂಬಂಧ ಆಯಾ ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಹಾಗೂ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಂದ ತ್ವರಿತಗತಿಯಲ್ಲಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ನಗರದಲ್ಲಿ 25 ಲಕ್ಷ ಆಸ್ತಿಗಳಿದ್ದು, ಎಲ್ಲಾ ಆಸ್ತಿಗಳಿಗೂ ಆನ್ ಲೈನ್ ಮೂಲಕ ಡ್ರಾಫ್ಟ್ (ಕರಡು) ಇ-ಖಾತಾಗಳನ್ನು ಪಡೆಯಬಹುದಾಗಿದೆ. ಈವರಗೆ 7.5 ಲಕ್ಷ ಅಂತಿಮ ಇ-ಖಾತಾಗಳನ್ನು ವಿತರಣೆ ಮಾಡಲಾಗಿದೆ.
ಪಾಲಿಕೆ ತಿಳಿಯಲು ವೆಬ್‌ಸೈಟ್ & ಕ್ಯೂ. ಆರ್ ಕೋಡ್ ರಚನೆ: ಜಿ.ಬಿ.ಎ ವ್ಯಾಪ್ತಿಯಲ್ಲಿ 5 ನಗರ ಪಾಲಿಕೆಗಳನ್ನು ರಚಿಸಿದ್ದು, ಪ್ರಸ್ತುತ 198 ವಾರ್ಡ್ ಗಳನ್ನು ಈ 5 ಪಾಲಿಕೆಗಳಿಗೆ ವಿಂಗಡನೆ ಮಾಡಲಾಗಿದೆ. ಬೆಂಗಳೂರು ನಗರ ನಾಗರಿಕರಿಗೆ ಯಾವ ನಗರ ಪಾಲಿಕೆಗೆ ಬರುತ್ತೇವೆ ಎಂಬುದನ್ನು ತಿಳಿಯುವ ಸಲುವಾಗಿ ವೆಬ್‌ಸೈಟ್ ರಚಿಸಲಾಗಿದ್ದು, https://BBMP.gov.in/KnowYourNewCorporation ಈ ಲಿಂಕ್ ಗೆ ಭೇಟಿ ನೀಡಿ ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ (ಲಗತ್ತಿಸಿದೆ) ನಂತರ ವಾರ್ಡ್ ಸಂಖ್ಯೆ ಅಥವಾ ಹೆಸರು ನಮೂದಿಸಿದಲ್ಲಿ ನೀವು ಯಾವ ನಗರ ಪಾಲಿಕೆಯಲ್ಲಿದ್ದೇವೆ ಎಂಬುದನ್ನು ತಿಳಿಯಬಹುದು.












Click it and Unblock the Notifications