Breaking: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕಹಿ ಸುದ್ದಿ: ಟಿಕೆಟ್ ದರ ಮತ್ತೆ ಶೇ.5 ಹೆಚ್ಚಳ!
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಸಾರಿಗೆ ಬಳಕೆದಾರರ ಸಂಖ್ಯೆ ಈಗಷ್ಟೇ ಹೆಚ್ಚಾಗುತ್ತಿದೆ. ಹೊಸ ಮಾರ್ಗಗಳು ಸಾರ್ವಜನಿಕರಿಗೆ ಮುಕ್ತಗೊಳ್ಳಲಿವೆ ಎನ್ನುವಾಗಲೇ ಪ್ರಯಾಣಿಕರಿಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಈ ವರ್ಷದ ಮತ್ತೆ ದರ ಏರಿಕೆ ಮಾಡಲು ಮುಂದಾಗಿದೆ. 2026 ಫೆಬ್ರವರಿಯಿಂದ ಜಾರಿಗೆ ಬರುವಂತೆ ಪ್ರಯಾಣ ದರ ಪರಿಷ್ಕರಣೆಗೊಳ್ಳಲಿದೆ. ಈ ವಿಚಾರ ಪ್ರಯಾಣಿಕರಿಗೆ ಆಘಾತ ನೀಡಿದೆ.
ಕಳೆದ ವರ್ಷ ಶೇಕಡಾ 70ರಷ್ಟು ದರ ಏರಿಕೆ ಮಾಡಿದ್ದ ಬೆಂಗಳೂರು ನಮ್ಮ ಮೆಟ್ರೋ ಅಧಿಕಾರಿಗಳು, ಈ ವರ್ಷ ಮತ್ತೆ ಶೇಕಡಾ 5ರಷ್ಟು ದರ ಏರಿಕೆ ಮಾಡಲು ಮುಂದಾಗಿದೆ. ಈ ಮೂಲಕ ವಿವಿಧ ವಸ್ತುಗಳ ಬೆಲೆ ಹೆಚ್ಚಳಕ್ಕೆ ತತ್ತರಿಸಿರುವ ಸಾರ್ವಜನಿಕರಿಗೆ 2026 ಹೊಸ ವರ್ಷ ಮೊದಲ ಬೆಲೆ ಹೆಚ್ಚಳದ ಬರೆ ಬೀಳಲಿದೆ.

ಶುಲ್ಕ ನಿಗದಿ ಸಮಿತಿ ತಿಳಿಸಿದಂತೆ 2025ರಲ್ಲಿ ದಶಕದ ಬಳಿಕ ಶೇಕಡಾ 70ರಷ್ಟು ಟಿಕೆಟ್ ದರ ಹೆಚ್ಚಿಸಲಾಗಿತ್ತು. ಇದರಿಂದ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸಮಿತಿ ವರದಿಯಲ್ಲಿ ಈಗಾಗಲೇ ಶಿಫಾರಸು ಮಾಡಿದಂತೆ ವಾರ್ಷಿಕವಾಗಿ ಶೇ. 5ರಷ್ಟು ದರ ಹೆಚ್ಚಿಸಬೇಕೆಂದು ಸೂಚಿಸಿದೆ. ಅದರಂತೆ ಫೆಬ್ರವರಿಯಿಂದ ನಮ್ಮ ಮೆಟ್ರೋ ಪ್ರಯಾಣವು ಮತ್ತಷ್ಟು ದುಬಾರಿ ಆಗಲಿದೆ.
ಪ್ರಯಾಣಿಕರಿಂದ ವ್ಯಾಪಕ ಆಕ್ರೋಶ
ಮೆಟ್ರೋ ಟಿಕೆಟ್ ದರ ಹೆಚ್ಚಳವು ಬೆಂಗಳೂರಿಗರಿಗೆ ಮತ್ತೊಂದು ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ. ಇದೇ ವಿಚಾರವಾಗಿ ಸಾರ್ವಜನಿಕರು ಕಳೆದ ವರ್ಷ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಕ್ರಮೇಣ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಾರ್ವಜನಿಕ ಸಾರಿಗೆ ಬಸ್, ಟ್ಯಾಕ್ಸಿ, ಸ್ವಂತ ಬೈಕ್‌ಗಳ ಸಮೇತ ಪ್ರಯಾಣ ಆರಂಭಿಸಿದ್ದರು. ಇದು ಮೆಟ್ರೋಗೆ ಒಂದಷ್ಟು ಹಿನ್ನಡೆ ಆಗಿತ್ತು.
ಈ ಹಿಂದೆ ನಿರ್ವಹಣೆ ವೆಚ್ಚದ ಕಾರಣ ನೀಡಿ ಬಿಎಂಆರ್‌ಸಿಎಲ್ ದರ ಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.ಇದೀಗ ಸಮಿತಿ ಶಿಫಾರಸಿನ ಮೇರೆಗೆ ಪ್ರತಿ ವರ್ಷ ಶೇ.5ರಷ್ಟು ಪ್ರಯಾಣ ಬೆಲೆ ಹೆಚ್ಚಿಸಲು ಮುಂದಾಗಿದೆ. ಜನಸಾಮಾನ್ಯರು ನಿತ್ಯ ಬಳಸುವ ಮೆಟ್ರೋ ಕೈಗೆಟುಕುವ ದರದಲ್ಲಿ ಸಿಗಬೇಕು. ಪ್ರಿಮೀಯಂ ದರದಲ್ಲಿ ಸಿಗುವಂತಾದರೆ ಹೇಗೆ? ಎಂದು ನಾಗರಿಕರು ಪ್ರಶ್ನಿಸಲು ಆರಂಭಿಸಿದ್ದಾರೆ. ಕೆಲವು ತಿಂಗಳು ಹಿಂದಷ್ಟೇ ಪ್ರಯಾಣ ದರ ಏರಿಕೆ ಎದುರಿಸಿದ್ದ ಪ್ರಯಾಣಿರಿಕಗೆ ಇದು ಮತ್ತೊಂದು ಬರೆ ಆಗಲಿದೆ ಎಂದು ದೂರುತ್ತಿದ್ದಾರೆ.
ಮೆಟ್ರೋ ರೈಲ್ವೇಸ್ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002 ರ ಸೆಕ್ಷನ್ 33 ರ ಅಡಿಯಲ್ಲಿ ಕಾನೂನು ಬದ್ಧವಾಗಿರುವ ಎಫ್‌ಎಫ್‌ಸಿಯು ಶಿಫಾರಸು ಮಾಡಿತ್ತು. ಅದರನ್ವಯ ಕಳೆದ ವರ್ಷ ಹೆಚ್ಚಳ ಮಾಡಲಾಗಿತ್ತು. ಈ ಬಾರಿಯು ಏರಿಕೆ ಸರಿಯಲ್ಲ. ಈಗಾಗಲೇ ಶೇಕಡಾ 32ರಷ್ಟು ಅಧಿಕ ಹಣ ಪಾವತಿಸಲಾಗುತ್ತಿದೆ. ಈ ವಿಚಾರದಲ್ಲಿ ಜನಪ್ರತಿನಿಧಿಗಳು ನಾಗರಿಕರ ಪರವಾಗಿ ಧ್ವನಿ ಎತ್ತಬೇಕು ಎಂದು ಪ್ರಯಾಣಿಕರೊಬ್ಬರು ಆಗ್ರಹಿಸಿದರು.
ಪ್ರಯಾಣಿಕರ ಸಂಖ್ಯೆ ಇಳಿಕೆ, ಟ್ರಾಫೀಕ್ ಏರಿಕೆ ಸಾಧ್ಯತೆ
ಮೆಟ್ರೋ ಟಿಕೆಟ್ ದರ ಹೆಚ್ಚಾಗುತ್ತಿದ್ದಂತೆ ಜನರು ಮೆಟ್ರೋ ಸಾರಿಗೆಯಿಂದ ವಿಮುಖರಾಗುವ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮೆಟ್ರೋ ಮಾರ್ಗ ತೆರೆದ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಆಗಿತ್ತು. ಸದ್ಯ ದೈನಂದಿನ ಪ್ರಯಾಣಿಕರ ಸಂಖ್ಯೆ ಹತ್ತು ಲಕ್ಷದಷ್ಟಿದೆ. ಈ ದರ ಏರಿಕೆ ನಿರ್ಧಾರವು ಜನರು ಮತ್ತೆ ಬಿಎಂಟಿಸಿ, ಸ್ವಂತ ವಾಹನಗಳನ್ನು ಬಳಸಲು ಉತ್ತೇಜಿಸಬಹುದು. ಇದರಿಂದ ಬೆಂಗಳೂರಿನಲ್ಲಿ ಮತ್ತೆ ಟ್ರಾಫಿಕ್ ದಟ್ಟಣೆ ಕಂಡು ಬರುವ ನಿರೀಕ್ಷೆ ಇದೆ. ಈ ಮೂಲಕ ಬೆಂಗಳೂರು ಮೆಟ್ರೋ ಸಾರಿಗೆಯ ಮೂಲ ಉದ್ದೇಶವೇ ಕಣ್ಮರೆಯಾಗಲಿದೆ.












Click it and Unblock the Notifications