Bengaluru-Mysuru expressway: ಎಂಟ್ರಿ, ಎಕ್ಸಿಟ್‌ಗಳಿಗೆ ಪ್ರತ್ಯೇಕ ಟೋಲ್‌ಬೂತ್-ವಾಹನ ಸವಾರರಿಗಾಗುವ ಪ್ರಯೋಜನೆಗಳೇನು?
ಬೆಂಗಳೂರು, ಜನವರಿ, 15: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಿತ್ತು. ಇದೀಗ ಈ ಎಕ್ಸ್‌ಪ್ರೆಸ್ ವೇನಲ್ಲಿ ಇನ್ಮುಂದೆ ಪ್ರಯಾಣಿಕರು ಸಂಚರಿಸಿದ ದೂರಕ್ಕಷ್ಟೇ ಟೋಲ್ ಪಾವತಿಸುವ ವ್ಯವಸ್ಥೆ ಜಾರಿಗೆ ತರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಎಂಟ್ರಿ ಎಕ್ಸಿಟ್‌ಗಳಿಗೆ ಪ್ರತ್ಯೇಕ ಟೋಲ್‌ಬೂತ್ ಅಳವಡಿಸಲು ನಿರ್ಧಾರ ಮಾಡಿದೆ. ಹಾಗಾದರೆ ಇದರಿಂದ ಏನೆಲ್ಲಾ ಪ್ರಯೋಜನೆಗಳಾಗಲಿವೆ ಎಂದು ಇಲ್ಲಿ ತಿಳಿಯಿರಿ.
ಈ ಹೊಸ ಟೋಲ್ ನಿಯಮ ಜಾರಿ ಆದರೆ ಪ್ರಯಾಣಿಕರು ರಸ್ತೆಯಲ್ಲಿ ಪ್ರಯಾಣಿಸಿದಷ್ಟು ದೂರ ಮಾತ್ರ ಟೋಲ್ ಶುಲ್ಕ ಪಾವತಿಸಬಹುದು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಾಧಿಕಾರ 688 ಕೋಟಿ ರೂಪಾಯಿನಲ್ಲಿ ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆದಿದೆ. ಎಂಟ್ರಿ ಎಕ್ಸಿಟ್‌ಗಳನ್ನು ಕ್ಲೋಸ್ಡ್ ಟೋಲ್‌ಗಳಾಗಿ ಪರಿವರ್ತಿಸುವ ಕಾಮಗಾರಿಯೂ ಈ ಟೆಂಡರ್‌ನಲ್ಲಿ ಒಳಗೊಂಡಿದೆ ಎಂದು ಪ್ರಧಿಕಾರದ ಮೂಲಗಳು ತಿಳಿಸಿವೆ. ಇದು ಜಾರಿಯಾದರೆ ಸ್ವಲ್ಪ ದೂರ ಪ್ರಯಾಣಿಸಿದರೂ ಪೂರ್ಣ ಟೋಲ್ ಪಾವತಿಸುವುದು ತಪ್ಪಲಿದೆ.

ಬೆಂಗಳೂರು-ಮೈಸೂರು ನಡುವಿನ ದಶಪಥ ರಸ್ತೆಯ ಪೈಕಿ 6 ಪಥಗಳ ಆಯಕ್ಸೆಸ್ ಕಂಟ್ರೋಲ್ ಹೈವೇ ನೀಲನಕ್ಷೆ ತಯಾರಿಸುವ ಸಮಯದಲ್ಲಿ ಎನ್‌ಎಚ್‌ಎಐ ಅಧಿಕಾರಿಗಳು ರಸ್ತೆ ಹಾದು ಹೋಗುವ ಪ್ರಮುಖ ನಗರಗಳಿಗೆ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳನ್ನು ಗುರುತಿಸಿಲ್ಲ.
ಪ್ರಮುಖ ಪಟ್ಟಣಗಳಿಗೆ ತಾತ್ಕಾಲಿಕ ಎಂಟ್ರಿ, ಎಕ್ಸಿಟ್ ನಿರ್ಮಿಸಿದ್ದರೂ ಅವೈಜ್ಞಾನಿಕ ಆಗಿದೆ. ಇದರಿಂದ ಸಾಕಷ್ಟು ಅಪಘಾತಗಳು ಆಗುತ್ತಿವೆ. ಆದ್ದರಿಂದ ಹೊಸದಾಗಿ ಎಂಟ್ರಿ ಮತ್ತು ಎಕ್ಸಿಟ್‌ಗಳನ್ನು ನಿರ್ಮಾಣ ಮಾಡುವ ಕಾಮಗಾರಿ ಕೈಗೊಳ್ಳಲಿದೆ.
ಪ್ರಾಧಿಕಾರದಲ್ಲಿ ಎಂಟ್ರಿ ಮತ್ತು ಎಕ್ಸಿಟ್ ಅನ್ನು ಇದೀಗ ನೀಡಿರುವಂತೆ ನೇರವಾಗಿ ನೀಡಲು ಸಾಧ್ಯ ಇಲ್ಲ. ಐಆರ್‌ಸಿ ನಿಯಮಾವಳಿಯ ಪ್ರಕಾರ, ಆಯಕ್ಸೆಸ್ ಕಂಟ್ರೋಲ್ ಹೈವೇಗೆ ಎಂಟ್ರಿ ಪಡೆಯುವ ವಾಹನಗಳು ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುತ್ತಿರುವ ವಾಹನಗಳಿಗೆ ಅಡಚಣೆ ಆಗಬಾರದು.
ಸುರಕ್ಷಿತವಾಗಿ ಹೆದ್ದಾರಿಗೆ ಎಂಟ್ರಿ ಪಡೆಯಬೇಕು. ಇದಕ್ಕೆ ವರ್ತುಲ ಆಕಾರದ ಎಂಟ್ರಿ ಮತ್ತು ಎಕ್ಸಿಟ್‌ಗಳನ್ನು ನಿರ್ಮಿಸಬೇಕು. ಇದಕ್ಕೆ ಹೊಸ ಕಾಮಗಾರಿಯನ್ನು ಆರಂಭಿಸುವುದರ ಜೊತೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನೂ ಕೈಗೊಳ್ಳಬೇಕಿದೆ. ಇದಕ್ಕಾಗಿ ಹೆದ್ದಾರಿ ಪ್ರಾಧಿಕಾರ ನೀಲನಕ್ಷೆ ಸಿದ್ಧಪಡಿಸಿದೆ. ಕಾಮಗಾರಿಗೆ ಇದೀಗ ಟೆಂಡರ್ ಕರೆಯಲಾಗಿದೆ.
ಎಕ್ಸ್‌ಪ್ರೆಸ್‌ನಲ್ಲಿ 118 ಕಿಲೋ ಮೀಟರ್ ದೂರ 90 ನಿಮಿಷಗಳಲ್ಲಿ ಕ್ರಮಿಸುವ ವಾಹನಗಳು, ಬೆಂಗಳೂರು ನೈಸ್ ರಸ್ತೆ ಜಂಕ್ಷನ್ ಹಾಗೂ ಮೈಸೂರಿನ ಮಣಿಪಾಲ್ ಆಸ್ಪತ್ರೆ ವೃತ್ತದಲ್ಲಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇದಕ್ಕೆ ಕಾರಣ ರಸ್ತೆ ಕಿರಿದಾಗಿರುವುದು. ಆದ್ದರಿಂದ ನೂತನ ಕಾಮಗಾರಿಯಲ್ಲಿ ಎರಡೂ ಕಡೆ ರಸ್ತೆ ಅಗಲೀಕರಣ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ.
ಎಕ್ಸ್‌ಪ್ರೆಸ್‌ವೇನ ಎಂಟ್ರಿ ಎಕ್ಸಿಟ್‌ಗಳ ಬಳಿಕ ಟೋಲ್ ಪ್ಲಾಜಾ ನಿರ್ಮಾಣ ಹಾಗೂ ರಸ್ತೆ ಅಗಲೀಕರಣಕ್ಕೆ ಬೇಕಿರುವ ಅಗತ್ಯ ಇರುವ ಭೂಮಿ ಗುರುತಿಸಿ ನೀಲನಕ್ಷೆ ಸಿದ್ಧಪಡಿಸಿರುವ ಎನ್‌ಎಚ್‌ಎಐ 500 ಕೋಟಿ ರೂಪಾಯಿ ಹಣ ನಿಗದಿಪಡಿಸಿದೆ. ರಾಷ್ಟ್ರೀಯ ಹೆದ್ದಾರಿ 275 ಬೆಂಗಳೂರಿನಿಂದ ಮೈಸೂರಿನವರೆಗೆ 118 ಕಿಲೋ ಮೀಟರ್‌ನಷ್ಟು 6 ಪಥಗಳ ಎಕ್ಸ್‌ಪ್ರೆಸ್‌ವೇಗೆ ಟೋಲ್ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ.
ಬೆಂಗಳೂರಿನ ಪಂಚಮುಖಿ ಗಣಪತಿ ದೇವಾಲಯದಿಂದ ನಿಡಘಟ್ಟದವರೆಗೆ ಮೊದಲ ಹಂತದ ಎಕ್ಸ್‌ಪ್ರೆಸ್ ವೇ 56 ಕಿಲೋ ಮೀಟರ್ ದೂರ ಇದ್ದು, ಈ ರಸ್ತೆಗೆ ವಾಹನದ ಮಾದರಿಯನ್ನು ಆಧರಿಸಿ 165-1,080 ರೂಪಾಯಿವರೆಗೆ ಶುಲ್ಕ ಸಂಗ್ರಹಿಸಲಾಗುತ್ತಿದೆ.
ಬೆಂಗಳೂರಿನಿಂದ ಮೈಸೂರು ಕಡೆ ಹೋಗುವವರು ಕಣಮಿಣಕಿ ಬಳಿ ಬೆಂಗಳೂರಿಗೆ ಹೋಗುವವರು ಬಿಡದಿಯ ಶೇಷಗಿರಿ ಹಳ್ಳಿ ಬಳಿ ಟೋಲ್ ಶುಲ್ಕ ಪಾವತಿಸಬೇಕು. ಬೆಂಗಳೂರಿನಿಂದ ಹೊರಟವರು, ಬಿಡದಿ, ನಿಡಘಟ್ಟಕ್ಕೆ ಪ್ರಯಾಣಿಸಲು 165-1,080 ರೂಪಾಯಿವರೆಗೆ ಶುಲ್ಕವನ್ನು ಪಾವತಿ ಮಾಡಬೇಕು.
ಇನ್ನು ನಿಡಘಟ್ಟದಿಂದ ಮೈಸೂರು ವರೆಗೆ 62 ಕಿ.ಮೀ. ಉದ್ದ ರಸ್ತೆ ಇದ್ದು, ಇಲ್ಲಿಗೆ ಶ್ರೀರಂಗಪಟ್ಟಣದ ಗಣಂಗೂರು ಬಳಿ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕವನ್ನು ಪಾವತಿಸಬೇಕಿದೆ. ಇಲ್ಲಿ ಟೋಲ್ ಶುಲ್ಕ 155-1,005 ರೂಪಾಯಿವರೆಗೆ ಇದೆ. ಈಗ ಹೊಸದಾಗಿ ಎಂಟ್ರಿ ಎಕ್ಸಿಟ್‌ಗಳಲ್ಲಿ ಟೋಲ್ ಬೂತ್‌ಗಳನ್ನು ಅಳವಡಿಸುವುದರಿಂದ ಪ್ರಯಾಣಿಕರು ಯಾವ ಟೋಲ್‌ನಿಂದ ಯಾವ ಟೋಲ್‌ಗೆ ಸಂಚರಿಸುತ್ತಾರೆಯೋ ಅಷ್ಟು ಮಾತ್ರ ಹಣ ಪಾವತಿ ಮಾಡಬೇಕು.
ಫಾಸ್ಟ್ ಟ್ಯಾಗ್ ಮೂಲಕ ಟೋಲ್ ಬಳಿ ಸ್ಕ್ಯಾನ್ ಆಗಿ, ಸಂಚರಿಸಿದಷ್ಟು ದೂರಕ್ಕೆ ಮಾತ್ರ ಶುಲ್ಕ ಕಡಿತ ಆಗುತ್ತದೆ. ಇನ್ನು ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳು ಟೋಲ್ ಪ್ಲಾಜಾದಲ್ಲಿ ಎಂಟ್ರಿ ಪಡೆಯುವಾಗಲೇ ಶುಲ್ಕ ಪಾವತಿ ಮಾಡಿ ಪ್ರವೇಶಿಸಬೇಕಾಗುತ್ತದೆ.
ಯಾವಾಗ ಕಾಮಗಾರಿ ಆರಂಭ: ಹೆದ್ದಾರಿ ಪ್ರಾಧಿಕಾರ ಹೊಸ ಕಾಮಗಾರಿಗಳಿಗೆ ಕರೆದಿರುವ ಟೆಂಡರ್ ಫೆಬ್ರವರಿ 19ಕ್ಕೆ ಮುಗಿಯಲಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ 6 ತಿಂಗಳೊಳಗೆ ಕಾಮಗಾರಿ ಆರಂಭವಾಗಿ ಪೂರ್ಣ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೆದ್ದಾರಿ 275ರಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳ ವಿವರ
* ನೈಸ್ ರಸ್ತೆ ಜಂಕ್ಷನ್ ಸಮೀಪ ಪಂಚಮುಖೀ ಗಣಪತಿ ದೇಗುಲದಿಂದ, ಎಲಿವೇಟೆಡ್ ರಸ್ತೆವರೆಗಿನ ರಸ್ತೆ ಅಗಲೀಕರಣ, ಮೈಸೂರಿನ ಮಣಿಪಾಲ್ ಆಸ್ಪತ್ರೆ ವೃತ್ತದಲ್ಲಿ ರಸ್ತೆ ಅಭಿವೃದ್ಧಿ.
* ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ನಗರಗಳ ಎಂಟ್ರಿ ಮತ್ತು ಎಕ್ಸಿಟ್‌ಗಳನ್ನು ಓಪನ್‌ನಿಂದ ಕ್ಲೋಸ್ಡ್ ಟೋಲ್ ಆಗಿ ಪರಿವರ್ತನೆ.
* ಡಿವೈಡರ್ ಹಾರಿ ಮತ್ತೂಂದು ಬದಿಯ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮೆಟಲ್ ಬೀಮ್ ಅಳವಡಿಕೆ, ಅಗತ್ಯವಿರುವ ಕಡೆ ವಿದ್ಯುತ್ ದೀಪ ಅಳವಡಿಕೆ
* ಶಿಂಷಾ ನದಿ ಬಳಿ ನನೆಗುದಿಗೆ ಬಿದ್ದಿರುವ ಸರ್ವೀಸ್ ರಸ್ತೆ ನಿರ್ಮಾಣ, ಬಸ್ ಬೇ ಮತ್ತು ಶೆಲ್ಟರ್‌ಗಳು ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ, ಕೆಲವೆಡೆ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣ.
* ತುರ್ತು ನಿರ್ಗಮನಕ್ಕೆ ಅಗತ್ಯ ಇರುವ ಕಡೆ ಸ್ಲೈಡಿಂಗ್ ಗೇಟ್‌ಗಳ ನಿರ್ಮಾಣ
ರಸ್ತೆ ಅವ್ಯವಸ್ಥೆ ಬಗ್ಗೆ ಸಾಕಷ್ಟು ದೂರು ಬಂದಿದ್ದು, ಅಗತ್ಯ ಕಾಮಗಾರಿಗಳಿಗೆ ಸರ್ಕಾರ 688 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಭೂಸ್ವಾಧೀನಕ್ಕೂ 500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಕಡಿಮೆ ದೂರು ಪ್ರಯಾಣಿಸುವ ಪ್ರಯಾಣಿಕರು ಹೆಚ್ಚು ಶುಲ್ಕ ಪಾವತಿಸುವುದು ತಪ್ಪಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.












Click it and Unblock the Notifications