Bengaluru-Mysuru Expressway: ಇಂದಿನಿಂದ ಎರಡು ಟೋಲ್ : ಕಾರು ಏಕಮುಖ ಸಂಚಾರಕ್ಕೆ 320 ರೂಪಾಯಿ
ಅಪಘಾತಗಳಿಂದ ಭಾರಿ ಟೀಕೆಗೆ ಒಳಗಾಗಿರುವ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಇಂದಿನಿಂದ ಟೋಲ್ ಶುಲ್ಕ ಇನ್ನಷ್ಟು ದುಬಾರಿಯಾಗಲಿದೆ. ಈ ಮೊದಲು ಒಂದು ಟೋಲ್ ಮಾತ್ರ ಇತ್ತು, ಜುಲೈ 1ರಿಂದ ಮತ್ತೊಂದು ಟೋಲ್ ಸಂಗ್ರಹ ಆರಂಭವಾಗಲಿದೆ.
ನೀವು ಬೆಂಗಳೂರಿನಿಂದ ಮೈಸೂರಿಗೆ ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿನಲ್ಲಿ ಪ್ರಯಾಣಿಸಿದರೆ ಏಕಮುಖ ಸಂಚಾರಕ್ಕೆ 320 ರೂಪಾಯಿ ನೀಡಬೇಕಾಗುತ್ತದೆ. ಅದೇ ದಿನ ನೀವು ವಾಪಸ್ ಬರುವಿರಿ ಎಂದಾದರೆ 485 ರೂಪಾಯಿ ತೆರಬೇಕು. ಇದು ಎರಡು ಟೋಲ್‌ಗಳಿಗೆ ನೀವು ಕಟ್ಟಬೇಕಾದ ಮೊತ್ತವಾಗಿದೆ.

ಮೈಸೂರು ಮತ್ತು ನಿಡಘಟ್ಟ ನಡುವೆ ಗಣಂಗೂರು ಬಳಿ ಟೋಲ್ ಸಂಗ್ರಹಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದ್ದು, ಇಂದಿನಿಂದ ಟೋಲ್ ಆರಂಭವಾಗಲಿದೆ. ಇದರಿಂದಲೇ ಟೋಲ್ ದರ ದುಪ್ಪಟ್ಟಾಗಲಿದೆ. ಈಗಿರುವ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಕಾರುಗಳು ಏಕಮುಖ ಸಾರಿಗೆಗೆ 165 ರೂಪಾಯಿ ನೀಡಬೇಕಾಗಿದೆ.
ಗಣಂಗೂರುನಲ್ಲಿ ಹೊಸ ಟೋಲ್ ದರ ಹೀಗಿದೆ
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ವಿವಿಧ ವಾಹನಗಳ ಟೋಲ್ ದರಗಳು.
ಕಾರು, ಎಸ್‌ಯುವಿ, ವ್ಯಾನ್: ಏಕಮುಖ ಸಂಚಾರಕ್ಕೆ 155 ರೂಪಾಯಿ, 24 ಗಂಟೆಯೊಳಗೆ ಹಿಂದಿರುಗುವ ಪ್ರಯಾಣಕ್ಕೆ 235 ರೂಪಾಯಿ.
ಎಲ್‌ಸಿವಿ/ಎಲ್‌ಜಿವಿ/ಮಿನಿ ಬಸ್: ಏಕಮುಖ ಪ್ರಯಾಣಕ್ಕೆ 235 ರೂಪಾಯಿ ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು 375 ರೂಪಾಯಿ.
ಎರಡು ಆಕ್ಸಲ್ ಟ್ರಕ್, ಬಸ್: ಏಕಮುಖ ಪ್ರಯಾಣಕ್ಕೆ 525 ರೂಪಾಯಿ ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು 790 ರೂಪಾಯಿ.
ಮೂರು ಆಕ್ಸಲ್‌ಗಳ ವಾಣಿಜ್ಯ ವಾಹನ: ಏಕಮುಖ ಪ್ರಯಾಣಕ್ಕೆ 575 ರೂಪಾಯಿ ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು 860 ರೂಪಾಯಿ.
4-6 ಆಕ್ಸಲ್‌ಗಳ ಭಾರಿ ಗಾತ್ರದ ವಾಹನ, ಜೆಸಿಬಿ: ಏಕಮುಖ ಪ್ರಯಾಣಕ್ಕೆ 825 ರೂಪಾಯಿ ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು 1240 ರೂಪಾಯಿ.
7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳು: ಏಕಮುಖ ಪ್ರಯಾಣಕ್ಕೆ 1005 ರೂಪಾಯಿ ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು 1510 ರೂಪಾಯಿ.
ಟೋಲ್ ಪ್ಲಾಜಾದಿಂದ 20 ಕಿಮೀ ವ್ಯಾಪ್ತಿಯೊಳಗೆ ಪ್ರಯಾಣಿಸುವ ವಾಣಿಜ್ಯೇತರ ವಾಹನಗಳಿಗೆ 330 ರೂಪಾಯಿ ಬೆಲೆಯ ಮಾಸಿಕ ಪಾಸ್ ಅನ್ನು ಎನ್‌ಹೆಚ್‌ಎಐ ನೀಡಲಿದೆ.
ಬೆಂಗಳೂರು-ನಿಡಘಟ್ಟ ಟೋಲ್ ದರ ವಿವರ
ಕಾರ್, ವ್ಯಾನ್, ಜೀಪ್‌ಗಳು: ಏಕಮುಖ ಸಂಚಾರಕ್ಕೆ165 ರೂಪಾಯಿ
ಲಘು ವಾಹನಗಳು, ಮಿನಿ ಬಸ್: ಏಕಮುಖ ಸಂಚಾರಕ್ಕೆ 270 ರೂಪಾಯಿ
ಟ್ರಕ್, ಬಸ್, 2 ಆಕ್ಸೆಲ್ ವಾಹನ: ಏಕಮುಖ ಸಂಚಾರಕ್ಕೆ 565 ರೂಪಾಯಿ
3 ಆಕ್ಸೆಲ್ ವಾಣಿಜ್ಯ ವಾಹನ: ಏಕಮುಖ ಸಂಚಾರಕ್ಕೆ 615 ರೂಪಾಯಿ
4-6 ಆಕ್ಸಲ್‌ಗಳ ಭಾರಿ ವಾಹನ: ಏಕಮುಖ ಸಂಚಾರಕ್ಕೆ 885 ರೂಪಾಯಿ
7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನ: ಏಕಮುಖ ಸಂಚಾರಕ್ಕೆ 1080 ರೂಪಾಯಿ
ದುಬಾರಿಯಾದ ಮೈಸೂರು-ಬೆಂಗಳೂರು ಪ್ರಯಾಣ
ಹೊಸ ಟೋಲ್ ಆರಂಭದ ನಂತರ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಇನ್ನಷ್ಟು ದುಬಾರಿಯಾಗಲಿದೆ. ಸಾರ್ವಜನಿಕ ಮತ್ತು ಖಾಸಗಿ ಬಸ್‌ಗಳು ಕೂಡ ಟಿಕೆಟ್ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಕಾರು, ವಾಣಿಜ್ಯ ವಾಹನಗಳ ಬಾಡಿಗೆ ಕೂಡ ಹೆಚ್ಚಾಗಲಿದೆ.
ಮಾರ್ಚ್ ತಿಂಗಳಿನಲ್ಲಿ ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೊಂಡಿದ್ದು ಇದುವರೆಗೂ 500ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 60 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇತ್ತೀಚೆಗಷ್ಟೇ ಹಲವು ಕನ್ನಡ ಪರ ಸಂಘಟನೆಗಳು ಟೋಲ್ ದರ ಇಳಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು.












Click it and Unblock the Notifications