Cyber fraud: ಗಿಫ್ಟ್ ಆಗಿ ಬಂದ ಮೊಬೈಲ್‌ಗೆ ಸಿಮ್ ಹಾಕಿದ್ದಷ್ಟೇ, ₹2.8 ಕೋಟಿ ಉಡೀಸ್
ಸೈಬರ್ ವಂಚಕರು ಇದೀಗ ವಂಚನೆಯನ್ನೇ ವೃತ್ತಿ ಮಾಡಿಕೊಂಡು ಎಲ್ಲೆಡೆ ರಣಹದ್ದುಗಳಂತೆ ಕಣ್ಣಿಟ್ಟಿದ್ದಾರೆ. ಸ್ವಲ್ಪ ಯಾಮಾರಿದ್ರೂ ನಮಗೆ ಗೊತ್ತಿಲ್ಲದಂತೆ ನಾವೇ ಬೀದಿಗೆ ಬರೋದು ಗ್ಯಾರಂಟಿ. ಒಂದು ಸಣ್ಣ ಲಿಂಕ್ ಕ್ಲಿಕ್ ಮಾಡಿದ್ರೂ ನಮ್ಮತ್ರ ಇರೋ ಹಣ ಸೆಕೆಂಡಿನಲ್ಲೇ ಉಡಾಯಿಸಿಬಿಡ್ತಾರೆ ಸೈಬರ್ ಕಳ್ಳರು. ಇದೀಗ ಅವರು ಹೊಸ ಮಾರ್ಗದ ಮೂಲಕ ವಂಚನೆಗೆ ಇಳಿದಿರುವುದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಸೈಬರ್ ವಂಚಕರು ಇದೀಗ ಉಡುಗೊರೆಗಳ ನೆಪದಲ್ಲಿ ಕೋಟಿ ಕೋಟಿ ಗುಳುಂ ಮಾಡುವ ಮಾರ್ಗ ಕಂಡುಕೊಂಡಿದ್ದಾರೆ. ಜನರ ಭಾವನೆಗಳೊಂದಿಗೆ ಆಟವಾಡುತ್ತಾ ಹಣ ಪೀಕಲು ಮುಂದಾಗಿದ್ದಾರೆ. ಇಂತದ್ದೇ ಪ್ರಕರಣ ಇದೀಗ ಬೆಂಗಳೂರಿಗೆ ನಡೆದಿದೆ. ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ಮೊಬೈಲ್ ಫೋನ್ ಉಡುಗೊರೆ ನೀಡಿ, ಬರೋಬ್ಬರಿ 2.8 ಕೋಟಿ ರೂಪಾಯಿ ದೋಚಿದ್ದಾರೆ ಎನ್ನಲಾಗಿದೆ.

ಹೌದು ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ಕ್ರೆಡಿಟ್ ಕಾರ್ಡ್ ವಿಚಾರದಲ್ಲಿ ನಂಬಿಸಿ ಮೊಬೈಲ್ ಫೋನ್ ಅನ್ನು ಗಿಫ್ಟ್ ಆಗಿ ಕಳಿಸಿಕೊಟ್ಟಿದ್ದಾರೆ. ಇನ್ನು ಮೊಬೈಲ್ ಬಂದು ಖುಷಿಯಲ್ಲಿ ಆತ ಜಸ್ಟ್ ಮೊಬೈಲ್‌ಗೆ ಸಿಮ್ ಹಾಕಿದ್ದರು. ಕೂಡಲೇ ಇವರ ಖಾತೆಯಲ್ಲಿದ್ದ ₹2.8 ಕೋಟಿ ರೂಪಾಯಿ ಕಡಿತವಾಗಿದೆ. ಇದರಿಂದ ಆ ವ್ಯಕ್ತಿ ಬೆಚ್ಚಿವಿಬಿದ್ದು ದಿಕ್ಕುತೋಚದಂತಾಗಿದ್ದಾರೆ. ಈ ಘಟನೆಯ ಬೆಂಗಳೂರಿನ ವೈಟ್‌ಫೀಲ್ಡ್ ಸಿಇಎನ್ ಠಾಣೆ ವ್ಯಾಪ್ತಿಯಲ್ಲಿ ಬಯಲಿಗೆ ಬಂದಿದೆ.
ಉದ್ಯೋಗಿಗೆ ಕರೆ ಮಾಡಿದ್ದ ವಂಚಕರು ತಮ್ಮನ್ನು ಖಾಸಗಿ ಬ್ಯಾಂಕ್‌ವೊಂದರ ಪ್ರತಿನಿಧಿ ಎಂಬುದಾಗಿ ಪರಿಚಯಿಸಿಕೊಂಡಿದ್ದರು. ನಿಮಗೆ ಕ್ರೆಡಿಟ್ ಕಾರ್ಡ್ ಮಂಜೂರಾಗಿದೆ. ಜೊತೆಗೆ ಮೊಬೈಲ್ ಕೂಡ ಉಚಿತವಾಗಿ ಬಂದಿದೆ ಎಂದು ಅವರ ವಿಳಾಸಕ್ಕೆ ಗಿಫ್ಟ್ ಕಳಿಸಿಕೊಟ್ಟಿದ್ದರು. ಈ ವೇಳೆ ಸಿಮ್ ಹಾಕಿದ ಕೂಡಲೇ ಕೋಟಿಗಟ್ಟಲೆ ಹಣ ಖಾತೆಯಿಂದ ಕಡಿತವಾದ ಬೆನ್ನಲ್ಲೇ ಆತ ನೇರವಾಗಿ ಪೊಲೀಸರ ಬಳಿ ಬಂದು ದೂರು ಕೊಟ್ಟಿದ್ದ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವೈಟ್‌ಫೀಲ್ಡ್ ಸಿಇಎನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಸದ್ಯ ಪೊಲೀಸರು ವಂಚಕರು ಗಿಫ್ಟ್ ಆಗಿ ಕಳಿಸಿಕೊಟ್ಟಿದ್ದ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದು, ಈ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಂತ್ರಸ್ತ ವ್ಯಕ್ತಿಯ ಖಾತೆಯಿಂದ ಯಾವ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂಬುದರ ಬಗ್ಗೆಯೂ ಅವರು ವಿವರ ಪಡೆಯುತ್ತಿದ್ದಾರೆ.
ಯಾಮಾರಿಸಿದ್ದು ಹೇಗೆ?: ಕಳೆದ ನವೆಂಬರ್‌ನಲ್ಲಿ ಬೆಂಗಳೂರಿನ ಟೆಕ್ಕಿಗೆ ವಂಚಕರು ಫೋನ್ ಮಾಡಿದ್ದರು. ನಿಮ್ಮ ರಿವಾರ್ಡ್ ಪಾಯಿಂಟ್ಸ್ ಚೆನ್ನಾಗಿರುವ ಕಾರಣ ಕ್ರೆಡಿಟ್ ಕಾರ್ಡ್ ಆಫರ್ ಮಾಡ್ತೀದ್ದೀವಿ ಎಂದಿದ್ದರು. ಈ ವೇಳೆ ಹೊಸ ಸಿಮ್ ಖರೀದಿಸಿದ್ದ ಟೆಕ್ಕಿ ಆ ನಂಬರ್ ಅನ್ನು ವಂಚಕರೊಂದಿಗೆ ಹಂಚಿಕೊಂಡಿದ್ದರು. ನಂತರ ಡಿಸೆಂಬರ್‌ನಲ್ಲಿ ಟೆಕ್ಕಿ ಅಡ್ರೆಸ್‌ಗೆ ಹೊಸ ಮೊಬೈಲ್ ಫೋನ್ ಅನ್ನು ಗಿಫ್ಟ್ ಆಗಿ ಕಳಿಸಿಕೊಟ್ಟಿದ್ದರು.

ಈ ಮೊಬೈಲ್‌ನಲ್ಲಿ ವಂಚಕರು ಮೊದಲೇ ತಮಗೆ ಬೇಕಾದಂತೆ ಸೆಟ್ಟಿಂಗ್ ಮಾಡಿ, ಕೆಲ ಅಪ್ಲಿಕೇಷನ್‌ಗಳನ್ನು ಕೂಡ ಇನ್‌ಸ್ಟಾಲ್ ಮಾಡಿಟ್ಟಿದ್ದರು. ಆದರೆ, ಹೊಸ ಮೊಬೈಲ್ ಕೈಸೇರಿದ ಖುಷಿಯಲ್ಲಿ ಟೆಕ್ಕಿ ಸಿಮ್ ಹಾಕಿದ್ದರು. ಇದಾದ ಒಂದು ವಾರದ ಬಳಿಕ ಅವರ ಎಫ್‌ಡಿ ಖಾತೆಯಿಂದ ಹಣ ಕಟ್ ಆಗಿರುವುದು ಇವರ ಗಮನಕ್ಕೆ ಬಂದಿತ್ತು. ಕೂಡಲೇ ಅವರು ಬ್ಯಾಂಕ್ ಬಳಿ ಹೋಗಿ ಕೇಳಿದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಇನ್ನು ಈ ರೀತಿಯ ಫೋನ್ ಕರೆಗಳು ಹಾಗೂ ಉಡುಗೊರೆಗಳು ಬಂದಾಗ ಜಾಗೃತೆಯಿಂದ ಇರಿ. ಯಾವ ಕಾರಣಕ್ಕೂ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಂಡು ಮೋಸ ಹೋಗದಿರಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications