ಮದುವೆಯಾಗಲು ಪತ್ನಿಯ ಸಹೋದರಿಯನ್ನೇ ಅಪಹರಿಸಿ ಜೈಲು ಸೇರಿದ ಭೂಪ!
ಬೆಂಗಳೂರು, ಜ. 24: ಪತ್ನಿಯ ಸಹೋದರಿಯನ್ನು ಅಪಹರಿಸಿದ್ದ ವ್ಯಕ್ತಿ ಮತ್ತು ಆತನ ಇಬ್ಬರು ಸಹಚರರನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದೇವರಾಜ್ ಬಂಧಿತ ಆರೋಪಿ. ಈತನಿಗೆ ಮೊದಲೇ ಮದುವೆಯಾಗಿತ್ತು. ಪತ್ನಿ ಜತೆ ಸಂಸಾರ ಮಾಡುತ್ತಿದ್ದ. ಅಕ್ಕನನ್ನು ಮದುವೆಯಾಗಿದ್ದ ಆಸಾಮಿ, ತಂಗಿಯ ಮೇಲೂ ಕಣ್ಣು ಹಾಕಿದ್ದ. ಮದುವೆಯಾಗುವಂತೆ ಹಿಂದೆ ಬಿದ್ದಿದ್ದ. ಇದಕ್ಕೆ ನಿರಾಕರಿಸಿದ್ದ ನಾದಿನಿ ಕೆಲಸ ಮುಗಿಸಿಕೊಂಡು ಮನೆಗೆ ಬರುವ ವೇಳೆ ಕಾರಿನಲ್ಲಿ ಬಂದ ದೇವರಾಜ್ ಮತ್ತು ಆತನ ಸಹಚರರು ರಾಯಲ್ ಮಾರ್ಟ್ ಬಳಿ ಅಪಹರಣ ಮಾಡಿದ್ದಾರೆ. ಜ. 22 ರಂದು ಅಪಹರಿಸಿದ್ದು, ಅಕೆಯನ್ನು ಸಕಲೇಶಪುರ ಕಡೆಗೆ ಕರೆದೊಯ್ದಿದ್ದಾನೆ.
ಈ ಸಂಬಂಧ ಯುವತಿ ಪೋಷಕರು ನೀಡಿದ ದೂರಿನ ಮೇಲೆ ಕಾರ್ಯಾಚರಣೆ ನಡೆಸಿದ ಕೊಡಿಗೇಹಳ್ಳಿ ಪೊಲೀಸರು ಅಪಹರಣಕಾರ ಭಾವ ದೇವರಾಜ್ ಮತ್ತು ಆತನ ಇಬ್ಬರು ಸಹಚರರನ್ನು ಸಕಲೇಶ್ವರದಲ್ಲಿ ಬಂಧಿಸಿದ್ದಾರೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಪೂರ್ವ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ, ಶನಿವಾರ ರಾತ್ರಿ 10.30 ರ ಸುಮಾರಿನಲ್ಲಿ ಯುವತಿಯನ್ನು ಅಪಹರಿಸಿ ಕಾರಿನಲ್ಲಿ ತೆರಳಿದ್ದರು. ಮೂವರನ್ನು ಬಂಧಿಸಿ ಯುವತಿಯನ್ನು ರಕ್ಷಿಸಿದ್ದೇವೆ. ಅಪಹರಣಕ್ಕೆ ಒಳಗಾಗಿರುವ ಯುವತಿಯ ಅಕ್ಕನನ್ನೇ ಆರೋಪಿ ಮದುವೆಯಾಗಿದ್ದಾನೆ. ಈಕೆಯನ್ನು ಇಷ್ಟ ಪಟ್ಟಿದ್ದ. ಆಕೆ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಅಪಹರಣ ಮಾಡಿದ್ದ. ತುಮಕೂರು ಮೂಲದ ದೇವರಾಜ್ ಕಾರಿನಲ್ಲಿ ಸಕಲೇಶ್ವರದಲ್ಲಿ ಸುತ್ತಾಡುವಾಗ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.












Click it and Unblock the Notifications