Bengaluru: ಸಾಕು ಪ್ರಾಣಿಗಳೊಂದಿಗೆ ಮಾಲ್‌ನಲ್ಲಿ ಶಾಪಿಂಗ್ ಮಾಡುವ ಅವಕಾಶ!
ಬೆಂಗಳೂರು ಅಕ್ಟೋಬರ್ 11: ಬೆಂಗಳೂರಿನ ಮಾಲ್‌ವೊಂದರಲ್ಲಿ ಸಾಕು ಪ್ರಾಣಿಗಳೊಂದಿಗೆ ಶಾಪಿಂಗ್ ಮಾಡುವ ಅವಕಾಶ ನೀಡಲಾಗಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ಮಾಲೀಕರು ತಮ್ಮ ಸಾಕು ಪ್ರಾಣಿಗಳನ್ನು ಪಾರ್ಕ್, ವಾಕಿಂಗ್, ಜಾಗಿಂಗ್, ನೆಚ್ಚಿನ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಾರೆ. ಹೆಚ್ಚಾಗಿ ಬಿಡುವಿನ ಸಮಯದಲ್ಲಿ ಅವುಗಳೊಂದಿಗೆ ಕಾಲ ಕಳೆಯುತ್ತಾರೆ. ಮಾಲೀಕರು ತಮ್ಮ ಬಿಡುವಿನ ಸಮಯವನ್ನು ಸಾಕು ಪ್ರಾಣಿಗಳೊಂದಿಗೆ ಕಳೆಯುವುದರ ಜೊತೆಗೆ ಸದ್ಯ ಶಾಪಿಂಗ್ ಕೂಡ ಮಾಡಬಹುದು.
ಹೌದು... ಬನ್ನೇರುಘಟ್ಟ ರಸ್ತೆಯಲ್ಲಿರುವ ವೆಗಾ ಸಿಟಿ ಮಾಲ್ ಜೂನ್ 2023 ರಲ್ಲಿ ಪ್ರಾರಂಭವಾಯಿತು. ಈ ಮಾಲ್ ಸಾಕುಪ್ರಾಣಿಗಳೊಂದಿಗೆ ಶಾಪಿಂಗ್ ಮಾಡಲು ಗ್ರಾಹಕರನ್ನು ಸ್ವಾಗತಿಸುತ್ತದೆ. ಈ ಮಾಲ್‌ನಲ್ಲಿ ಪೆಟ್ ಟ್ರಾಲಿಗಳನ್ನು ಒದಗಿಸಲಾಗುತ್ತದೆ. ಇದರೊಂದಿಗೆ ಗ್ರಾಹಕರು ಸುಲಭವಾಗಿ ಶಾಪಿಂಗ್ ಮಾಡಲು ಅನುವು ಮಾಡಿಕೊಡಲಾಗಿದೆ. ಇದರಿಂದಾಗಿ ಪ್ರಾಣಿಪ್ರಿಯ ಗ್ರಾಹಕರು ದಿಲ್ ಖುಷ್ ಆಗಿದ್ದಾರೆ.

ಮನೆಯಲ್ಲೊಂದು ಸಾಕು ಪ್ರಾಣಿ ಇದ್ದರೆ ಅದು ಆರೋಗ್ಯ, ಮಾನಸಿಕ ನೆಮ್ಮದಿ ಎಲ್ಲವನ್ನು ಸುಧಾರಿಸುತ್ತದೆ. ಮನೆಯ ನಾಯಿಯ ಜೊತೆಗೆ ದಿನಾಲೂ ಬೆಳಗ್ಗೆ ಸಂಜೆ ವಾಕ್ ಹೋದರೆ ದೇಹಕ್ಕೆ ಉತ್ತಮ ವ್ಯಾಯಾಮ ಆಗುತ್ತದೆ ಜೊತೆಗೆ ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಿ ಓಡಾಟಕ್ಕೆ ಹೊಸ ಹುರುಪು ತರುತ್ತದೆ. ಹೀಗೆ ಸಾಕುಪ್ರಾಣಿಗಳಿಂದಾಗುವ ಹಲವಾರು ಪ್ರಯೋಜನಗಳನ್ನು ತಿಳಿದ ಪ್ರತಿಯೊಬ್ಬರೂ ನಾಯಿ ಬೆಕ್ಕುಗಳನ್ನು ಸಾಕುತ್ತಾರೆ. ಇವುಗಳೊಂದಿಗೆ ಸಾಧ್ಯವಾದಷ್ಟು ಕಾಲ ಕಳೆಯುತ್ತಾರೆ. ಇಂತಹವರ ಸಂಖ್ಯೆ ಸಿಲಿಕಾನ್ ಸಿಟಿಯಲ್ಲಿ ಅಧಿಕವಾಗಿದೆ. ಇಂತವನ್ನು ಸೆಳೆಯಲು ಸದ್ಯ ಮಾಲ್‌ಗಳು ಯೋಚನೆ ಮಾಡುತ್ತಿವೆ.
ಅದುವೇ ಸಾಕು ಪ್ರಾಣಿಗಳೊಂದಿಗೆ ಮಾಲ್‌ನಲ್ಲಿ ಶಾಪಿಂಗ್ ಮಾಡುವ ಅವಕಾಶ ನೀಡುವುದು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ಮಾಲ್ ಬಳಿಕ ಬ್ರಿಗೇಡ್ ಗ್ರೂಪ್ ಮತ್ತು ಫೋರಂ ಮಾಲ್ ಅಧಿಕಾರಿಗಳು ತಮ್ಮ ಮಾಲ್‌ಗಳಲ್ಲಿ ಸಾಕುಪ್ರಾಣಿಗಳನ್ನು ಅನುಮತಿಸಲು ಯೋಜಿಸುತ್ತಿದ್ದಾರೆ. ಹಲವು ಮಾಲ್‌ಗಳು ಈಗಾಗಲೇ ಸಾಕು ಪ್ರಾಣಿಯೊಂದಿಗೆ ಗ್ರಾಹಕರಿಗೆ ಶಾಪಿಂಗ್‌ಗೆ ಅವಕಾಶ ಕಲ್ಪಿಸುವ ಬಗ್ಗೆ ಯೋಜನೆ ಮಾಡುತ್ತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವೆಗಾ ಸಿಟಿ ಮಾಲ್‌ನ ಮ್ಯಾನೇಜರ್ ಅಜಿತ್ ಖೇಮ್ಕಾ- "ಸಾಕು ಪ್ರಾಣಿಯೊಂದಿಗೆ ಶಾಪಿಂಗ್‌ಗೆ ಅವಕಾಶ ನೀಡಿರುವುದಕ್ಕೆ ನಮ್ಮ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾಸಿಕವಾಗಿ 200-300 ಮಾಲೀಕರು ತಮ್ಮ ಸಾಕುಪ್ರಾಣಿಗಳೊಂದಿಗೆ ಬರುವುದನ್ನು ನಾವು ನೋಡುತ್ತೇವೆ. ವಾರಾಂತ್ಯದಲ್ಲಿ ಈ ಸಂಖ್ಯೆ ಹೆಚ್ಚಾಗಿರುತ್ತದೆ'' ಎಂದು ಹೇಳಿದರು.

ಗ್ರಾಹಕರ ಆದ್ಯತೆಗಳನ್ನು ಗುರುತಿಸಿ, ಫೋರಂ ಮಾಲ್‌ನ ಉಪಾಧ್ಯಕ್ಷ ಮನೋಜ್ ಸಿಂಗ್, ಪೆಟ್-ಫ್ರೆಂಡ್ಲಿ ಜಾಗಗಳನ್ನು ನಾವು ಕೂಡ ಸೃಷ್ಟಿಸಲು ಯೋಚಿಸುತ್ತಿದ್ದೇವೆ ಎಂದಿದ್ದಾರೆ. ಇತ್ತೀಚಿನ ಶಾಪಿಂಗ್ ಸೆಂಟರ್‌ಗಳ ಈವೆಂಟ್‌ನಲ್ಲಿ ಮಾತನಾಡಿದ ಅವರು, "ಪ್ರಗತಿಪರ ಮಾಲ್ ಡೆವಲಪರ್‌ಗಳು ಸಾಕುಪ್ರಾಣಿಗಳೊಂದಿಗೆ ಮಾಲೀಕರು ಶಾಪಿಂಗ್ ಮಾಡಲು ಸಾಕುಪ್ರಾಣಿ-ಸ್ನೇಹಿ ಸ್ಥಳಗಳ ರಚನೆಯ ಬಗ್ಗೆ ಯೋಚನೆ ಮಾಡಬೇಕು. ನಮ್ಮ ಗ್ರಾಹಕರು ಹೆಚ್ಚಾಗಿ ಸಾಕುಪ್ರಾಣಿ ಮಾಲೀಕರಾಗಿದ್ದಾರೆ. ಹೀಗಾಗಿ ನಮ್ಮ ಗ್ರಾಹರನ್ನು ಸೆಳೆಯಲು ನಾವು ಸಾಕುಪ್ರಾಣಿಗಳನ್ನು ಸಹ ಅನುಮತಿಸಬೇಕಾಗಿದೆ'' ಎಂದರು.
ಬ್ರಿಗೇಡ್ ಗ್ರೂಪ್‌ನ ಜಂಟಿ ಎಂಡಿ ನಿರುಪಾ ಶಂಕರ್ ಮಾತನಾಡಿ ಬದಲಾಗುತ್ತಿರುವ ಗ್ರಾಹಕರ ಅಗತ್ಯಗಳಿಗೆ ಹೊಂದಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. "ಮಾಲ್‌ಗಳಂತಹ ಸಾರ್ವಜನಿಕ ಸ್ಥಳಗಳು ಬದಲಾಗುತ್ತಿರುವ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ನಿರಂತರವಾಗಿ ವಿಕಸನಗೊಳ್ಳಬೇಕು. ಮಾಲ್‌ಗಳಿಗೆ ಸಾಕುಪ್ರಾಣಿಗಳನ್ನು ತರಲು ಜನರಿಗೆ ಅನುಮತಿ ನೀಡುವ ಸಮಯ ಬಂದಿದೆ"ಎಂದು ಹೇಳಿದರು.
ವೃತ್ತಿಪರರಾದ ಗ್ರಾಹ ಶಾಂತನು ಮುಖರ್ಜಿ, ಸಾಕುಪ್ರಾಣಿಗಳು ಹೇಗೆ ಜನರ ಜೀವನಕ್ಕೆ ಅವಿಭಾಜ್ಯವಾಗಿವೆ ಎಂಬುದನ್ನು ಹೇಳಿದರು. "ಮಾಲ್‌ಗಳಲ್ಲಿ ಸಾಕುಪ್ರಾಣಿಗಳನ್ನು ಅನುಮತಿಸುವುದು ಶಾಪಿಂಗ್ ಅನುಭವವನ್ನು ಹೆಚ್ಚಿಸುವುದಿಲ್ಲ, ಆದರೆ ಅವರ ಗ್ರಾಹಕರ ಬದಲಾಗುತ್ತಿರುವ ಜೀವನಶೈಲಿ ಆಯ್ಕೆಗಳನ್ನು ಪ್ರತಿಬಿಂಬಿಸುತ್ತದೆ" ಎಂದು ಅವರು ಹೇಳಿದರು.

ಸಾಕುಪ್ರಾಣಿಯೊಂದಿಗೆ ಶಾಪಿಂಗ್
ಸಾಕುಪ್ರಾಣಿಯೊಂದಿಗೆ ಶಾಪಿಂಗ್ ಮಾಡಲು ಬಯಸಿದರೆ ಅದರ ಮಾಲೀಕರಿಗೆ ಕೆಲವು ಸಲಹೆಗಳು ಇಲ್ಲಿವೆ. ಆಗಾಗ್ಗೆ ವಿರಾಮಗಳನ್ನು ತೆಗೆದುಕೊಳ್ಳಲು, ಸಾಕುಪ್ರಾಣಿ ಸ್ನೇಹಿ ವಸತಿಗಳಲ್ಲಿ ನಿಲ್ಲಿ. ವ್ಯಾಕ್ಸಿನೇಷನ್ ಕಾರ್ಡ್‌ಗಳು ಮತ್ತು ಮನೆಯಲ್ಲಿ ತಯಾರಿಸಿದ ಆಹಾರವನ್ನು ಒಯ್ಯಲು ಮತ್ತು ಅಸ್ವಸ್ಥತೆ, ನಿಮ್ಮ ಸಾಕುಪ್ರಾಣಿಗಳ ನಡವಳಿಕೆಯನ್ನು ಮೇಲ್ವಿಚಾರಣೆ ಮಾಡುವುದನ್ನು ಮರೆಯದಿರಿ.












Click it and Unblock the Notifications