ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಮತ್ತೆ ಶುರು
ಬೆಂಗಳೂರು, ಸೆಪ್ಟೆಂಬರ್ 1: ಕೊರೊನಾ ನಿಯಂತ್ರಿಸುವ ದೃಷ್ಟಿಯಿಂದ ಕಳೆದ ಐದಾರು ತಿಂಗಳಿಂದ ಮುಚ್ಚಲಾಗಿದ್ದ ಕೆಆರ್ ಮಾರುಕಟ್ಟೆಯಲ್ಲಿ ಮತ್ತೆ ವ್ಯಾಪಾರ ಶುರುವಾಗಿದೆ.
Recommended Video
ಸೋಮವಾರ ರಾತ್ರಿಯಿಂದಲೇ ವ್ಯಾಪಾರ, ಚಟುವಟಿಕೆ ಮತ್ತೆ ಬಿರುಸು ಪಡೆದುಕೊಂಡಿದೆ. ಬೆಂಗಳೂರಿನ ಸುತ್ತಮುತ್ತಲ ಭಾಗಗಳಿಂದ ರೈತರು ತಾವು ಬೆಳೆದ ತರಕಾರಿ, ಸೊಪ್ಪು ಹಾಗೂ ಹೂವುಗಳನ್ನು ಹೊತ್ತು ಮಾರುಕಟ್ಟೆಗೆ ಆಗಮಿಸಿದ್ದರು.
ಸಗಟು ವ್ಯಾಪಾರಿಗಳಿಗೂ ಎಂದಿನಂತೇ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಮೊದಲ ಹಂತದಲ್ಲಿ ಮಾರುಕಟ್ಟೆಗಳ ಮಳಿಗೆಗಳಲ್ಲಿ ಮಾತ್ರ ವ್ಯಾಪಾರವಹಿವಾಟಿಗೆ ಅವಕಾಶ ನೀಡಲಾಗಿತ್ತು. ಬೀದಿ, ರಸ್ತೆ ಬದಿ ವ್ಯಾಪಾರ ಮಾಡದಂತೆ ಸೂಚಿಸಿದ್ದು, ವ್ಯಾಪಾರಿಗಳು ಇದಕ್ಕೆ ಒಪ್ಪಿಗೆ ನೀಡಿದ್ದಾರೆ.

ಇನ್ನೂ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್ ಅಳವಡಿಕೆ ಸೇರಿದಂತೆ ನಿಯಮ ಪಾಲನೆ ಮೇಲೆ ನಿಗಾ ವಹಿಸಲು 15 ಮಂದಿ ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ.
ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ಐದು ತಿಂಗಳಿನಿಂದ ಮಾರುಕಟ್ಟೆ ಮುಚ್ಚಿದ್ದರಿಂದ ಈ ಅವಧಿಯಲ್ಲಿ ವ್ಯಾಪಾರ-ವಹಿವಾಟು ನಡೆದಿರಲಿಲ್ಲ. ಹಾಗಾಗಿ ಈ ಅವಧಿಗೆ ಮಳಿಗೆಗಳ ವ್ಯಾಪಾರಿಗಳಿಂದ ಬಾಡಿಗೆ ಪಡೆಯುವ ಅಥವಾ ರಿಯಾಯ್ತಿ ನೀಡುವ ಬಗ್ಗೆ ಈವರೆಗೆ ಯಾವುದೇ ತೀರ್ಮಾನವಾಗಿಲ್ಲ.
ಸ್ಮಾರ್ಟ್ ಸಿಟಿ ಯೋಜನೆಯಡಿ ಮೂರು ಕೋಟಿ ರೂ. ವೆಚ್ಚದಲ್ಲಿ ಕೆಆರ್ ಮಾರುಕಟ್ಟೆ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಮಾರುಕಟ್ಟೆ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಗೊಳಿಸಲಾಗುವುದು.
ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ತಡೆಯುವ ನಿಟ್ಟಿನಲ್ಲಿ ಅಗ್ನಿ ನಿರೋಧಕ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ. ಮಾರುಕಟ್ಟೆಯ ಜಂಕ್ಷನ್ ಸಹ ಅಭಿವೃದ್ಧಿಪಡಿಸುವ ಚರ್ಚೆಗಳು ನಡೆದಿವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.












Click it and Unblock the Notifications