ಬೆಂಗಳೂರಿನ ಈ ಪ್ರದೇಶದ ಜಂಕ್ಷನ್‌ನಲ್ಲಿ ಟ್ರಾಫಿಕ್ ಐಲ್ಯಾಂಡ್ ಅಭಿವೃದ್ಧಿ
ಯಶವಂತಪುರ ಜಂಕ್ಷನ್‌ನಲ್ಲಿರುವ ಟ್ರಾಫಿಕ್ ಐಲ್ಯಾಂಡ್ ಅಭಿವೃದ್ಧಿ ಮಾಡಲು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಮೇಕ್ರಿ ವೃತ್ತದಿಂದ ಮಂಜುನಾಥ್ ಮೆಟ್ರೋ ಸ್ಟೇಷನ್ ವರೆಗೆ ದ್ವಿಚಕ್ರ ವಾಹನದ ಮೂಲಕ ವಿವಿಧ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿ, ಯಶವಂತಪುರ ಮೇಲ್ಸೇತುವೆಗೆ ಬಣ್ಣ ಹಚ್ಚುವುದು, ದೀಪಗಳ ಅಳವಡಿಕೆ ಹಾಗೂ ಸುತ್ತಮುತ್ತಲಿನ ಪ್ರದೇಶ ಸುಂದರೀಕರಣ ಮಾಡಲು ಸೂಚನೆ ನೀಡಿದ್ದಾರೆ.
ಮಿಡಿಯನ್‌ಗಳ ಸುಧಾರಣೆ ಮಾಡಿ: ರಸ್ತೆ ಮಧ್ಯೆ ಬರುವಂತಹ ಮಿಡಿಯನ್ ಭಾಗದಲ್ಲಿ ಶುಚಿತ್ವ ಕಾಪಾಡದೇ ಇರುವುದನ್ನು ಗಮನಿಸಿ ಎಲ್ಲಾ ಮೀಡಿಯನ್ ಗಳಲ್ಲಿ ಸ್ವಚ್ಛತೆ ಮಾಡಿ ಸುಧಾರಣೆ ಮತ್ತು ಸುಂದರೀಕರಣ ಮಾಡಲು ಸೂಚನೆ ಕೊಟ್ಟರು. ಅಲ್ಲದೇ ಬಸ್ ನಿಲ್ಲುವ ಸ್ಥಳದಲ್ಲಿ ರಸ್ತೆ ಬದಿ ಬಸ್ ತಂಗುದಾಣಗಳನ್ನು ನಿರ್ಮಿಸಿರುವ ಕಡೆ ಜನಸಾಮಾನ್ಯರ ಸೌಲಭ್ಯಕ್ಕಾಗಿ ನವೀಕರಣ ಮತ್ತು ಸರಿಯಾಗಿ ನಿರ್ವಹಣೆ ಮಾಡಲು ಸೂಚನೆ ನೀಡಿದ್ದಾರೆ.

ಬ್ಲ್ಯಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಿ: ಇನ್ನು ಈ ಭಾಗದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗ, ಖಾಲಿ ಸೇರಿದಂತೆ ಎಲ್ಲಾ ಕಡೆ ಕಸ ಸುರಿಯುವ ಸ್ಥಳ (ಬ್ಲ್ಯಾಕ್‌ಸ್ಪಾಟ್) ಗಳನ್ನು ಗುರುತಿಸಿ ತಕ್ಷಣ ತೆರವುಗೊಳಿಸಬೇಕು. ಅನಂತರ ಮತ್ತೆ ಆ ಜಾಗದಲ್ಲಿ ಬ್ಲಾಕ್ ಸ್ಪಾಟ್ ಆಗದಂತೆ ಆಗದಂತೆ ಕಟ್ಟುನಿಟ್ಟಿನ ನಿಗಾ ವಹಿಸಲು ಸೂಚನೆ ಕೊಟ್ಟಿದ್ದಾರೆ. ಇಲ್ಲಿನ ಶೋರೂಮ್‌ವೊಂದರ ಬಳಿ ಚರಂಡಿಯಲ್ಲಿ ಹೂಳೆತ್ತದೇ ಇರುವುದನ್ನು ಗಮನಿಸಿ, ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಎಲ್ಲಾ ಚರಂಡಿ/ಕಾಲುವೆಗಳಲ್ಲಿ ಸಂಪೂರ್ಣ ಹೂಳೆತ್ತುವ ಕಾರ್ಯಗಳನ್ನು ಕೈಗೊಳ್ಳಲು ತಿಳಿಸಿದ್ದಾರೆ.
ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕಾಗಿ ಎಲ್ಲಾ ಪಾದಚಾರಿ ಮಾರ್ಗದಲ್ಲಿ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಬೇಕು. ಮತ್ತೆ ಒತ್ತುವರಿ ಮಾಡದಂತೆ ಮೇಲ್ವಿಚಾರಣೆ ಮಾಡಬೇಕೆಂದು ಸೂಚನೆ ನೀಡಿದರು. ಅಲ್ಲದೇ ಯಶವಂತಪುರ ಮೆಟ್ರೋ ಬಳಿಯಿರುವ ಸೂಪರ್ ಮಾರ್ಕೆಟ್ ಸಮೀಪದ ರಸ್ತೆ ಅಗಲೀಕರಣ ಕಾರ್ಯಗಳನ್ನು ಪರಿಶೀಲಿಸಿ, ಅದಕ್ಕೆ ವೇಗ ನೀಡಿ ಕಾಮಗಾರಿ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹೇಳಿದ್ದಾರೆ.
ಪರಿಶೀಲನೆಯ ವೇಳೆ ರಸ್ತೆ ಪರಿಸ್ಥಿತಿ, ರಸ್ತೆ ಗುಂಡಿಗಳು, ಮಿಡಿಯನ್‌ಗಳ ಸ್ಥಿತಿ, ಬ್ಲ್ಯಾಕ್ ಸ್ಪಾಟ್‌ಗಳು, ಪಾದಚಾರಿ ಮಾರ್ಗ ಒತ್ತುವರಿ ಹಾಗೂ ಸಮಗ್ರ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ನೀಡಲಾಯಿತು. ಈ ಸಂದರ್ಭದಲ್ಲಿ ಅಪರ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಮುಖ್ಯ ಎಂಜಿನಿಯರರಾದ ಸ್ವಯಂಪ್ರಭಾ, ಕಾರ್ಯನಿರ್ವಾಹಕ ಎಂಜಿನಿಯರರು ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.












Click it and Unblock the Notifications