ಹೈಟೆಕ್ ಬೆಂಗಳೂರು ಬಿಸಿನೆಸ್ ಕಾರಿಡಾರ್: 65ಮೀ ವಿಸ್ತರಣೆ, ಮೆಟ್ರೋ-ಸೈಕಲ್ ಟ್ರ್ಯಾಕ್‌ಗಳೂ ಲಭ್ಯ; ವಿನ್ಯಾಸ ವಿವರ
ಬೆಂಗಳೂರು: ರಾಜಧಾನಿಯ ಬಹುನಿರೀಕ್ಷೆಯ 'ಬೆಂಗಳೂರು ಇಂಡಿಸ್ಟ್ರೀಯಲ್ ಕಾರಿಡಾರ್' (ಪೆರಿಫೆರಲ್ ರಿಂಗ್ ರಸ್ತೆ-PRR) ಯೋಜನೆಯನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ಇದರ ಮೊದಲ ಹಂತದ 20 ಕಿಲೋ ಮೀಟರ್ ಯೋಜೆಗೆ ಇತ್ತೀಚೆಗೆ ಟೆಂಡರ್ ಕರೆಯಲಾಗಿದೆ. ಇದೀಗ ಇದರ ಅಂದಾಜು ವೆಚ್ಚ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಅದಕ್ಕೆ ಉತ್ತರ ಸಿಕ್ಕಿದೆ. ಜೊತೆಗೆ ಯೋಜನೆಯಲ್ಲಿ ಏನೆಲ್ಲ ವಿಸ್ತರಣೆ ಆಗಿದೆ. ಒಟ್ಟು ಮೊದಲ ಹಂತದ ಪ್ಯಾಕೇಜ್ ವಿನ್ಯಾಸ ಸಂಪೂರ್ಣ ಮಾಹಿತಿ ಮುಂದಿದೆ.
ಈ ಹಿಂದೆ ಪೆರಿಫೆರಲ್ ರಿಂಗ್ ರಸ್ತೆ (PRR) ಎಂದು ಕರೆಯಲಾಗುತ್ತಿದ್ದ ಬೆಂಗಳೂರು ಕೈಗಾರಿಕಾ ಕಾರಿಡಾರ್ (BBC) ಯೋಜನೆ ಜಾರಿಗೊಳಿಸಲು 3348 ಕೋಟಿ ರೂ. ವೆಚ್ಚದ ಟೆಂಡರ್ ಆಹ್ವಾನಿಸಲಾಗಿದೆ. ಮೊದಲ ಹಂತದಲ್ಲಿ ತುಮಕೂರು ರಸ್ತೆ-ಬಳ್ಳಾರಿ ರಸ್ತೆವರೆಗೆ ರಿಂಗ್ ರಸ್ತೆ ನಿರ್ಮಾಣಗೊಳ್ಳಲಿದೆ. ಈ ಕುರಿತು ಮಹತ್ವದ ಮಾಹಿತಿಯನ್ನು ಬಿಬಿಸಿಎಲ್ ಗುರುವಾರ ತಿಳಿಸಿದ್ದು, ಪಿಆರ್‍ಆರ್ ಯೋಜನೆಯ ಮೂರು ಹಂತಗಳ ವಿವರ ಮೊದಲಿಗೆ ತಿಳಿಯೋಣ.

* ಯೋಜನಾ ನಿರ್ವಹಣೆ ಮತ್ತು ಆರ್ಥಿಕ ಭದ್ರತೆ
ಪಿಆರ್ ಆರ್-1 ಯೋಜನೆಯ ಒಟ್ಟು ಅಂದಾಜು ವೆಚ್ಚ 10,500 ಕೋಟಿ ರೂ.ಗೂ ಅಧಿಕ. ಇಷ್ಟು ಬೃಹತ್ ಯೋಜನೆಯನ್ನು ಒಬ್ಬನೇ ಗುತ್ತಿಗೆದಾರನಿಗೆ ವಹಿಸುವುದರಿಂದ ಪ್ರಾಯೋಗಿಕವಾಗಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಗುತ್ತಿಗೆದಾರರ ಆರ್ಥಿಕ ಸಾಮರ್ಥ್ಯ ಅಥವಾ ನಿರ್ವಹಣಾ ದೋಷಗಳಿಂದ ರಸ್ತೆ ನಿರ್ಮಾಣ ಅರ್ಧಕ್ಕೆ ನಿಂತರೆ ಇಡೀ ಪ್ರಾಜೆಕ್ಟ್ ವಿಳಂಬವಾಗುವ ಅಪಾಯವಿರುತ್ತದೆ. ಪ್ಯಾಕೇಜ್‌ಗಳ ಹಂಚಿಕೆಯಿಂದ ಈ ಅಪಾಯವನ್ನು ತಗ್ಗಿಸಲಾಗಿದೆ.
* ಏಕಕಾಲಕ್ಕೆ ಕಾಮಗಾರಿ ಮತ್ತು ಸಮಯದ ಉಳಿತಾಯ
ಯೋಜನೆಯನ್ನು ಮೂರು ಪ್ಯಾಕೇಜ್‌ಗಳಾಗಿ ವಿಂಗಡಿಸುವುದರಿಂದ ಮೂರು ವಿಭಿನ್ನ ಏಜೆನ್ಸಿಗಳು ಒಂದೇ ಸಮಯದಲ್ಲಿ ಕೆಲಸ ಆರಂಭಿಸಬಹುದು. ಇದರಿಂದ ಕಾಮಗಾರಿಯು ವೇಗವಾಗಿ ಸಾಗುವುದಲ್ಲದೆ, ಒಂದು ಪ್ಯಾಕೇಜ್‌ನಲ್ಲಿ ಎದುರಾಗಬಹುದಾದ ಸಣ್ಣಪುಟ್ಟ ಅಡೆತಡೆಗಳು ಇಡೀ ಯೋಜನೆಯ ಮೇಲೆ ಪರಿಣಾಮ ಬೀರುವುದಿಲ್ಲ.
* ಹಂತ-ಹಂತವಾಗಿ ಸಂಚಾರಕ್ಕೆ ಮುಕ್ತ (ಸ್ವತಂತ್ರ ಕಾರಿಡಾರ್‌ಗಳು)
ಪ್ರತಿ ಪ್ಯಾಕೇಜ್ ಅನ್ನು ಒಂದು ಸ್ವತಂತ್ರ ಮಾರ್ಗದಂತೆ ವಿನ್ಯಾಸಗೊಳಿಸಲಾಗಿದೆ. ಅಂದರೆ, ಉಳಿದ ಪ್ಯಾಕೇಜ್‌ಗಳು ಪೂರ್ಣಗೊಳ್ಳುವವರೆಗೆ ಕಾಯದೆ, ಸಿದ್ಧವಾದ ಕಾರಿಡಾರ್‌ನ್ನು ತಕ್ಷಣವೇ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬಹುದು.
ಉದಾಹರಣೆಗೆ ಪ್ಯಾಕೇಜ್-1 ನೆಲಮಂಗಲದ ಬಳಿಯ ತುಮಕೂರು ರಸ್ತೆಯನ್ನು ಏರ್‌ಪೋರ್ಟ್ ರಸ್ತೆಗೆ ನೇರವಾಗಿ ಸಂಪರ್ಕಿಸುತ್ತದೆ. ಇದು ಪೂರ್ಣಗೊಂಡ ಕೂಡಲೇ ಸ್ವತಂತ್ರವಾಗಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಪ್ಯಾಕೇಜ್-2 ಇದು ಪೂರ್ಣಗೊಂಡಾಗ ಏರ್‌ಪೋರ್ಟ್ ರಸ್ತೆಯಿಂದ ವೈಟ್‌ಫೀಲ್ಡ್ ಜಂಕ್ಷನ್‌ವರೆಗೆ ಸಂಪರ್ಕ ದೊರೆಯುತ್ತದೆ. ಇದರಿಂದ ತುಮಕೂರು ರಸ್ತೆಯಿಂದ ಹಳೆ ಮದ್ರಾಸ್ ರಸ್ತೆ ಮತ್ತು ವೈಟ್‌ಫೀಲ್ಡ್ ಭಾಗಕ್ಕೆ ಸುಗಮ ಹಾದಿ ನಿರ್ಮಾಣವಾಗುತ್ತದೆ ಎಂದು ಬಿಬಿಸಿ ಮಾಹಿತಿ ನೀಡಿದೆ.
ಒಟ್ಟಾರೆಯಾಗಿ, ಈ ಯೋಜನೆಯು ವಿಳಂಬವಾಗದಂತೆ ನೋಡಿಕೊಳ್ಳಲು ಮತ್ತು ಸಾರ್ವಜನಿಕರಿಗೆ ಹಂತ-ಹಂತವಾಗಿ ಇದರ ಲಾಭ ಸಿಗುವಂತೆ ಮಾಡಲು ಈ ಮೂರು ಪ್ಯಾಕೇಜ್‌ಗಳ ಮಾದರಿಯನ್ನು ಅನುಸರಿಸಲಾಗುತ್ತಿದೆ.
ಹಂತ 1ರ ವಿನ್ಯಾಸ: ಅದರಲ್ಲಿನ ಪ್ರಮುಖ ಸುಧಾರಣೆಗಳ ಪಟ್ಟಿ ಇಲ್ಲಿದೆ
ಸದರಿ ಯೋಜನೆಯ ಮೊದಲ ಹಂತದ ಪ್ಯಾಕೇಜ್‌ಗಾಗಿ ಟೆಂಡರ್ ಆಹ್ವಾನಿಸುವ ಜೊತೆಗೆ ಈ ರಸ್ತೆಯ 10 ವರ್ಷಗಳ ನಿರ್ವಹಣೆಗಾಗಿ 248 ಕೋಟಿ ರೂ. ಮೊತ್ತದ ಟೆಂಡರ್ ಸಹ ಆಹ್ವಾನಿಸಿದೆ. 2023-24ರ ಅಂದಾಜು ವೆಚ್ಚಕ್ಕೆ ಹೋಲಿಸಿದರೆ ಇದು ದುಬಾರಿ ಎನಿಸಿದರೂ, ಈ ಏರಿಕೆಯು ಕೇವಲ ಹಣದುಬ್ಬರದಿಂದ ಆಗಿದ್ದಲ್ಲ. ಬದಲಾಗಿ, ಬಿಬಿಸಿ ಯೋಜನೆಯ ಹೊಸ ವಿನ್ಯಾಸವು ಹೆಚ್ಚು ವಿಸ್ತಾರವಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.
* ವಿಸ್ತರಣೆ: ಈ ಕಾರಿಡಾರ್ ಅನ್ನು 50 ಮೀಟರ್‌ನಿಂದ 65 ಮೀಟರ್‌ಗೆ ಹೆಚ್ಚಿಸಲಾಗಿದೆ. ರಸ್ತೆಯ ಒಂದು ಬದಿಯಲ್ಲಿದ್ದ ಸರ್ವಿಸ್ ರಸ್ತೆಯ ಬದಲು ಈಗ ಎರಡೂ ಬದಿಗಳಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ 4 ಸರ್ವಿಸ್ ಲೇನ್‌ಗಳು, ಸೈಕಲ್ ಟ್ರ್ಯಾಕ್‌ಗಳು, ಅಗಲವಾದ ಪಾದಚಾರಿ ಮಾರ್ಗ ಹಾಗೂ ಭವಿಷ್ಯದ ಮೆಟ್ರೋ ಸಂಚಾರಕ್ಕೆ ಮೀಸಲಾದ ಪ್ರತ್ಯೇಕ ಮಾರ್ಗವೂ ಇರಲಿದೆ.
* ಹೆಚ್ಚುವರಿ ಇಂಟರ್‌ಚೇಂಜ್‌ಗಳು: ಮೊದಲು ಮಾದಾವರ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಮತ್ತು ಹೊಸೂರು ರಸ್ತೆಗಳಲ್ಲಿ ಮಾತ್ರ ಇಂಟರ್‌ಚೇಂಜ್‌ಗಳನ್ನು ಯೋಜಿಸಲಾಗಿತ್ತು. ಈಗ ಪರಿಷ್ಕೃತ ವಿನ್ಯಾಸದಂತೆ ದೊಡ್ಡಬಳ್ಳಾಪುರ ರಸ್ತೆ, ಹೆಣ್ಣೂರು ರಸ್ತೆ, ವೈಟ್‌ಫೀಲ್ಡ್ ಮತ್ತು ಸರ್ಜಾಪುರ ರಸ್ತೆಗಳಲ್ಲೂ ಪ್ರಮುಖ ಇಂಟರ್‌ಚೇಂಜ್‌ಗಳನ್ನು ಸೇರಿಸಲಾಗಿದೆ.
* ಹೊಸ ಮೇಲ್ಸೇತುವೆಗಳು: ಹೆಸರಘಟ್ಟ ರಸ್ತೆ ಮತ್ತು ಚನ್ನಸಂದ್ರದಲ್ಲಿ ಹೊಸ ಗ್ರೇಡ್ ಸೆಪರೇಟರ್‌ಗಳನ್ನು ಅಳವಡಿಸಲಾಗಿದೆ. ಅವಲಹಳ್ಳಿ ಅರಣ್ಯ ಮತ್ತು IVRI ಕ್ಯಾಂಪಸ್ ವ್ಯಾಪ್ತಿಯಲ್ಲಿ ಫ್ಲೈಓವರ್‌ಗಳನ್ನು ವಿಸ್ತರಿಸಲಾಗಿದ್ದು, ಹುಸ್ಕೂರಿನಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ 3 ಕಿ.ಮೀ ಉದ್ದದ ಹೊಸ ಫ್ಲೈಓವರ್ ನಿರ್ಮಿಸಲಾಗುತ್ತಿದೆ.
* ಸಂಪರ್ಕ ವ್ಯವಸ್ಥೆ: ಮಾದಾವರ ಇಂಟರ್‌ಚೇಂಜ್ ಅನ್ನು ನೈಸ್ (NICE) ರಸ್ತೆಯೊಂದಿಗೆ ಸುಗಮವಾಗಿ ಬೆಸೆಯಲು ಅದರ ವಿನ್ಯಾಸವನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲಾಗಿದೆ.
ಬೆಂಗಳೂರಿಗೆ ಸಮಗ್ರ, ಸುಸಜ್ಜಿತ ಮತ್ತು ದೂರದೃಷ್ಟಿಯುಳ್ಳ ರಿಂಗ್ ರೋಡ್ ಒದಗಿಸುವುದೇ ನಮ್ಮ ಗುರಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.












Click it and Unblock the Notifications