ಬೆಂಗಳೂರಲ್ಲಿ HR ಕೆಲಸ ಖಾಲಿ ಇದೆ, ಆದ್ರೆ ಕನ್ನಡಿಗರು ಬೇಡ: ವಿವಾದ ಸೃಷ್ಟಿಸಿದ ಉದ್ಯೋಗ ಜಾಹೀರಾತು
ಕರ್ನಾಟಕದಲ್ಲಿ ಈಗಾಗಲೇ ಎಲ್ಲ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸಬೇಕು ಎನ್ನುವ ಕಡ್ಡಾಯ ನಿಯಮ ಜಾರಿಯಲ್ಲಿದೆ. ಆದರೆ ಬೆಂಗಳೂರಿನ ಖಾಸಗಿ ಕಂಪನಿಯೊಂದು ನೀಡಿರುವ ಉದ್ಯೋಗ ಜಾಹೀರಾತು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಮಾನವ ಸಂಪನ್ಮೂಲ (HR) ಹುದ್ದೆಗೆ ಅರ್ಜಿ ಆಹ್ವಾನಿಸುವ ವೇಳೆ, ಜಾಹೀರಾತಿನಲ್ಲಿ 'ಕನ್ನಡೇತರ' ಅಭ್ಯರ್ಥಿಗಳಿಗೆ ಆದ್ಯತೆ ಎಂಬ ಷರತ್ತು ಹಾಕಿರುವ ಆರೋಪ ಕೇಳಿಬಂದಿದೆ. ಈ ಜಾಹೀರಾತಿನ ಸ್ಕ್ರೀನ್‌ಶಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜೆಪಿ ನಗರದಲ್ಲಿರುವ ಸ್ಕಿಲ್ ಸೋನಿಕ್ಸ್ ಎಂಬ ಖಾಸಗಿ ಕಂಪನಿಯ ನೀಡಿರುವ ಈ ಉದ್ಯೋಗ ಜಾಹೀರಾತಿನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, "ಇದು ಕನ್ನಡ ಭಾಷೆ ಮತ್ತು ಸ್ಥಳೀಯ ಸಂಸ್ಕೃತಿಗೆ ಮಾಡಿದ ಅವಮಾನ" ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಕಂಪನಿಯೇ ಈ ರೀತಿಯ ಷರತ್ತು ವಿಧಿಸಿರುವುದು ಸ್ವೀಕಾರಾರ್ಹವಲ್ಲ ಎಂದು ಕನ್ನಡ ಪರ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವೈರಲ್ ಆದ ಪೋಸ್ಟ್‌ನಲ್ಲಿ 'ಡೈವರ್ಸಿಟಿ' (diversity) ಎಂಬ ಪದವನ್ನು ಉಲ್ಲೇಖಿಸಲಾಗಿದೆ. ಆದರೂ 'ನಾನ್-ಕನ್ನಡ' ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಅಗತ್ಯವೇನು? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಭಾಷಾ ವೈವಿಧ್ಯತೆ ಹೆಸರಿನಲ್ಲಿ ಸ್ಥಳೀಯರಿಗೆ ಅನ್ಯಾಯವಾಗುವ ರೀತಿಯಲ್ಲಿ ನೇಮಕಾತಿ ನಡೆಸುವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ "ಇದು ಉದ್ಯೋಗದಲ್ಲಿ ಭಾಷಾ ಆಧಾರಿತ ಭೇದಭಾವ", "ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಅವಕಾಶ ನಿರಾಕರಣೆ ಯಾಕೆ?" ಎಂಬ ಪ್ರಶ್ನೆಗಳು ಟ್ರೆಂಡ್ ಆಗುತ್ತಿವೆ.
ಕನ್ನಡಪರ ಸಂಘಟನೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿವೆ. ಸಂಬಂಧಿಸಿದ ಕಂಪನಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಜಾಹೀರಾತುಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮಾರ್ಗಸೂಚಿ ರೂಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
'ಡೈವರ್ಸಿಟಿ' ಎಂಬ ಪದದ ಅರ್ಥವನ್ನು ಹೇಗೆ ಬಳಸಲಾಗಿದೆ? 'ನಾನ್-ಕನ್ನಡ' ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಹಿನ್ನಲೆ ಏನು ಎಂಬುದರ ಕುರಿತು ಕಂಪನಿಯಿಂದ ಅಧಿಕೃತ ಪ್ರತಿಕ್ರಿಯೆ ಕೇಳುತ್ತಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಭಾಷಾ ಗೌರವ ಮತ್ತು ಸ್ಥಳೀಯರ ಹಕ್ಕುಗಳ ಕುರಿತು ಮತ್ತೊಮ್ಮೆ ದೊಡ್ಡ ಚರ್ಚೆಗೆ ಈ ಘಟನೆ ದಾರಿ ಮಾಡಿಕೊಟ್ಟಿದೆ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಉದ್ಯೋಗಾವಕಾಶಗಳ ರಕ್ಷಣೆಯ ವಿಷಯದಲ್ಲಿ ಸರ್ಕಾರ ಯಾವ ರೀತಿಯ ನಿಲುವು ತಾಳುತ್ತದೆ ಎಂಬುದು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇಂದು ವಿಷಯ ತಿಳಿದಾಗ ನಮ್ಮ ಯುವ ಕರ್ನಾಟಕ ವೇದಿಕೆ ಕಂಪನಿ ಮುಂದೆ ಪ್ರತಿಭಟನೆ ಮಾಡಲು ಮುಂದಾಗಿದ್ದು
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) January 12, 2026
ಕಂಪನಿ ಬೆಂಗಳೂರು ಮುಖ್ಯಸ್ಥರ ಜೊತೆಗೆ ಖುದ್ದಾಗಿ ಕರೆ ಮಾಡಿ ಮಾತನಾಡಲಾಗಿ
ಆಗಿರುವ ತಪ್ಪಿಗೆ ಸ್ಕಿಲ್ ಸೋನಿಕ್ಸ್ ಕ್ಷಮೆ ಕೇಳಿದೆ.ಹಾಗೂ ಮುಂದೆ ಕನ್ನಡಿಗರಿಗೆ ಆದ್ಯತೆ ಕೊಡುವ ಭರವಸೆ ನೀಡಿದ್ದಾರೆ, ಇಲ್ಲ ನಾವು ಬಿಡಲ್ಲ.
ಜೈ ಕರ್ನಾಟಕ 💛❤️ pic.twitter.com/nbh29TkvaD
ಕ್ಷಮೆ ಕೇಳಿದ ಸಂಸ್ಥೆ
ಈ ಜಾಹೀರಾತು ವಿವಾದ ಸೃಷ್ಟಿಸಿದ ಬೆನ್ನಲ್ಲೇ ಕನ್ನಡಪರ ಸಂಘಟನೆಗಳು ಕಂಪನಿ ಮುಂದೆ ಪ್ರತಿಭಟನೆಗೆ ಮುಂದಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಕಂಪನಿಯು ಕನ್ನಡಿಗರ ಕ್ಷಮೆಯಾಚಿಸಿದೆ. ನಾವು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದೇವೆ. ಇದು ನಮ್ಮ ಕಲ್ಕತ್ತಾ ಬ್ರಾಂಚ್‌ನಿಂದ ಆಗಿರುವ ತಪ್ಪು. ಇದಕ್ಕಾಗಿ ನಾವು ಸಮಸ್ತ ಕನ್ನಡ ಜನತೆಗೆ ಕ್ಷಮೆಯಾಚಿಸುತ್ತೇವೆ. ಇನ್ನು ಮುಂದೆ ಈ ರೀತಿ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ, ಜೈ ಕರ್ನಾಟಕ ಎಂದು ವಿಡಿಯೋದಲ್ಲಿ ಕ್ಷಮೆ ಕೇಳಿದ್ದಾರೆ.












Click it and Unblock the Notifications