ಬೆಂಗಳೂರಿನಲ್ಲಿ ಹೊತ್ತಿ ಉರಿದ ಮನೆ, ಸಾಫ್ಟ್‌ವೇರ್ ಇಂಜಿನಿಯರ್ ಉಸಿರುಗಟ್ಟಿ ಸಾವು
ಬೆಂಗಳೂರಿನಲ್ಲಿ ಬೆಂಕಿ ಅವಘಡಕ್ಕೆ 34 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಜೀವಬಿಟ್ಟಿದ್ದಾರೆ. ಬೆಂಗಳೂರಿನ ಸುಬ್ರಹ್ಮಣ್ಯ ಲೇಔಟ್‌ನಲ್ಲಿ ಬಾಡಿಗೆಗೆ ವಾಸವಿದ್ದ ಶರ್ಮಿಳಾ ಎನ್ನುವವರು ತಮ್ಮ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರು ಮಂಗಳೂರು ಮೂಲದವರಾಗಿದ್ದು, ಬೆಂಗಳೂರಿನ ಆಕ್ಸೆಂಚರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸುಬ್ರಹ್ಮಣ್ಯ ಲೇಔಟ್‌ನಲ್ಲಿ ಜನವರಿ 3ರ ರಾತ್ರಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಂದು ರಾತ್ರಿ 10:30 ರ ಸುಮಾರಿಗೆ ಮನೆಯಿಂದ ಹೊಗೆ ಬರುತ್ತಿರುವುದು ಕಂಡುಬಂದಿದೆ. ಮನೆ ಮಾಲೀಕರಾದ ವಿಜಯೇಂದ್ರ ಬೆಂಕಿಯನ್ನು ಗಮನಿಸಿ ತಕ್ಷಣ ರಾಮಮೂರ್ತಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬಾಗಿಲು ಮುರಿದು ಮನೆ ಒಳಗೆ ಪ್ರವೇಶಿಸಿದರು. ಆದರೆ ಅಷ್ಟರ ಹೊತ್ತಿಗೆ, ಮನೆ ದಟ್ಟವಾದ ಹೊಗೆಯಿಂದ ತುಂಬಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದರು. ನಂತರ ಮನೆಯಲ್ಲಿ ಪರಿಶೀಲಿಸಿದಾಗ ಶರ್ಮಿಳಾ ಅವರು ಪ್ರಜ್ಞಾಹೀನರಾಗಿ ಮಲಗಿರುವುದು ಕಂಡುಬಂದಿತು. ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಶರ್ಮಿಳಾ ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದಿದ್ದಾರೆ.
ಸ್ನೇಹಿತೆಯ ರೂಂನಿಂದ ಬೆಂಕಿ ಶಂಕೆ
ಬೆಂಕಿ ಹೊತ್ತಿಕೊಂಡು ಹೊಗೆ ತೀವ್ರವಾಗಿ ಆವರಿಸಿಕೊಂಡಿದ್ದರಿಂದ ಶರ್ಮಿಳಾ ಅವರು ಕೋಣೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲರು ಶರ್ಮಿಳಾ ಅವರು ಆ ಬಾಡಿಗೆ ಮನೆಯ ಒಂದು ಕೋಣೆಯಲ್ಲಿ ವಾಸಿಸುತ್ತಿದ್ದರು. ಅವರ ಸ್ನೇಹಿತೆ ಇನ್ನೊಂದು ಕೋಣೆಯಲ್ಲಿ ವಾಸವಿದ್ದರು. ಅವರು ಊರಿನಲ್ಲಿ ಇರಲಿಲ್ಲ, ಹೀಗಾಗಿ ಸ್ನೇಹಿತೆಯ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿರಬಹುದು ಎನ್ನಲಾಗಿದೆ.
ಕಟ್ಟಡದಲ್ಲಿ ಹೊಗೆ ತುಂಬಿಕೊಂಡಿದ್ದರಿಂದ ಶರ್ಮಿಳಾ ಬಾಗಿಲು ತೆರೆದಾಗ ಈ ಹೊಗೆಯಿಂದ ಉಸಿರಾಡಲು ಕಷ್ಟಪಟ್ಟಿದ್ದಾರೆ. ಕೊನೆಗೆ ಉಸಿರಾಟದ ತೊಂದರೆಯಿಂದಲೇ ಕುಸಿದು ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಶರ್ಮಿಳಾ ಸುಮಾರು ಒಂದು ವರ್ಷದ ಹಿಂದೆಯಷ್ಟೇ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸದ್ಯ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಂಡವು ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಪೊಲೀಸರು ಈ ಅಗ್ನಿ ದುರಂತಕ್ಕೆ ಕಾರಣ ಪತ್ತೆ ಹಚ್ಚುತ್ತಿದ್ದಾರೆ. ಈ ಘಟನೆಯಿಂದ ಬೆಂಗಳೂರಿನ ಜನ ಬೆಚ್ಚಿಬಿದ್ದಿದ್ದಾರೆ.












Click it and Unblock the Notifications