ಅತ್ತಿಬೆಲೆ ಬಳಿ ಬೆಂಗಳೂರು-ಹೊಸೂರು ಹೆದ್ದಾರಿ ಕುಸಿತ: ಸ್ಪಷ್ಟನೆ ನೀಡಿದ ಎನ್‌ಹೆಚ್‌ಎಐ
ಬೆಂಗಳೂರು: ಇತ್ತೀಚೆಗೆ ಬೆಂಗಳೂರು-ಹೊಸೂರು ರಸ್ತೆಯ ಓಲ್ಡ್ ಚಂದಾಪುರ ಬಳಿ ಹೆದ್ದಾರಿ ಕುಸಿದಿರುವ ಘಟನೆ ವರದಿಯಾಗಿತ್ತು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಸ್ಪಷ್ಟನೆ ನೀಡಿದ್ದು, ಇದು ರಸ್ತೆ ಕುಸಿತ ಅಲ್ಲ, ಬದಲಾಗಿ ರಿಟೈನಿಂಗ್ ವಾಲ್ ನಿರ್ಮಾಣಕ್ಕಾಗಿ 7.7 ಮೀಟರ್ ಆಳದಲ್ಲಿ ತೋಡಲಾಗಿದ್ದ ಸಂದರ್ಭದಲ್ಲಿ ಸಂಭವಿಸಿದ ಸ್ಥಳೀಯ ಮಣ್ಣಿನ ಜಾರಿಕೆ ಎಂದು ತಿಳಿಸಿದೆ.
ಈ ಮಣ್ಣಿನ ಜಾರಿಕೆಯಿಂದಾಗಿ ರಸ್ತೆ ಅಗಲ ತಾತ್ಕಾಲಿಕವಾಗಿ ಕಡಿಮೆಯಾಗಿ, ಬೆಂಗಳೂರು ಕಡೆಗೆ ಸಾಗುವ ವಾಹನ ಸಂಚಾರದಲ್ಲಿ ಭಾರೀ ಅಡಚಣೆ ಉಂಟಾಯಿತು. ಕೈಗಾರಿಕಾ ಪ್ರದೇಶವಾಗಿರುವ ಕಾರಣ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಹೆವಿ ಮಲ್ಟಿ-ಆಕ್ಸಲ್ ವಾಹನಗಳು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿವೆ ಎಂದು ಪ್ರಾಧಿಕಾರ ಹೇಳಿದೆ. ಘಟನೆ ನಡೆದ ತಕ್ಷಣವೇ ಆ ರಸ್ತೆ ಭಾಗವನ್ನು ಬ್ಯಾರಿಕೇಡ್ ಮಾಡಲಾಗಿದ್ದು, ಸಂಬಂಧಿಸಿದ ಗುತ್ತಿಗೆದಾರರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಜೊತೆಗೆ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಲಾಗಿದೆ ಎಂದು ಹೇಳಿದೆ.

ಇನ್ನೆರಡು ದಿನಗಳಲ್ಲಿ ಸಮಸ್ಯೆ ಪರಿಹಾರ
ಭೂತಾಂತ್ರಿಕ ಸ್ಥಿತಿಗತಿಗಳ ಪರಿಶೀಲನೆಗಾಗಿ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ನಿವೃತ್ತ ಭೂತಾಂತ್ರಿಕ ತಜ್ಞರಾದ ಪ್ರೊ.ಜಿ.ಎಲ್. ಶಿವಕುಮಾರ್ ಬಾಬು ಅವರ ಸಲಹೆಯನ್ನೂ ಪಡೆಯಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ನೀಡಿರುವ ಪ್ರಾಧಿಕಾರ, ಸರ್ವಿಸ್ ರಸ್ತೆ ವಿಸ್ತರಣೆ ಹಾಗೂ ಮರುಹಾಸು ಕೆಲಸಗಳನ್ನು ಫೆಬ್ರವರಿ 9ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದೆ.
ಈ ಕೆಲಸಗಳ ನಂತರ ಸೂಕ್ತ ಸಂಚಾರ ಮಾರ್ಗ ಬದಲಾವಣೆ ಜಾರಿಗೊಳ್ಳಲಿದೆ ಎಂದು ಮಾಹಿತಿ ನೀಡಿದೆ. ಈ ಘಟನೆ ಹಿನ್ನೆಲೆಯಲ್ಲಿ ವಾಹನ ಚಾಲಕರು ಎಚ್ಚರಿಕೆಯಿಂದ ಸಂಚರಿಸುವಂತೆ ಹಾಗೂ ತಾತ್ಕಾಲಿಕ ಸಂಚಾರ ವ್ಯವಸ್ಥೆಗೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಸಂಚರಿಸುವ ಮಲ್ಟಿ-ಆಕ್ಸಲ್ ಭಾರೀ ವಾಹನಗಳೇ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿವೆ. ಸುರಕ್ಷತಾ ದೃಷ್ಟಿಯಿಂದ ತಕ್ಷಣವೇ ಸಮಸ್ಯೆ ಉಂಟಾದ ರಸ್ತೆ ಭಾಗವನ್ನು ಬ್ಯಾರಿಕೇಡ್ ಮಾಡಿ ಮುಚ್ಚಲಾಗಿದ್ದು, ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ ಅಗತ್ಯ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಕಳೆದ ಬುಧವಾರ ಅತ್ತಿಬೆಲೆ ಬಳಿಯ ರಾಷ್ಟ್ರೀಯ ಹೆದ್ದಾರಿ-44ರ ಒಂದು ಭಾಗ ಕುಸಿದ ನಂತರ ಬೆಂಗಳೂರು-ಹೊಸೂರು ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಾಹನ ಮೇಲ್ಸೇತುವೆಗಾಗಿ ಆಳವಾಗಿ ಅಗೆಯುವ ಸಮಯದಲ್ಲಿ ಹೆಚ್ಚುವರಿ ಅಗಲ ಕಡಿಮೆಯಾದಾಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದ ಕಾರಣ ಮಣ್ಣು ಸಡಿಲಗೊಂಡು ಈ ಅವಘಡ ಸಂಭವಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಹೆದ್ದಾರಿ ದುರಸ್ತಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಸಂಚಾರವನ್ನು ಸಹಜ ಸ್ಥಿತಿಗೆ ತರುವುದಾಗಿ ಎನ್‌ಎಚ್‌ಎಐ ಅಧಿಕಾರಿಗಳು ಭರವಸೆ ನೀಡಿದ್ದರು. ಈ ಮಾರ್ಗವನ್ನು ಬಳಸುವ ವಾಹನ ಸವಾರರಿಗೆ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದರು. ಇದೀಗ ಈ ಬಗ್ಗೆ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.












Click it and Unblock the Notifications