Bengaluru Rent: ಬೆಂಗಳೂರಿನ ಮನೆ ಬಾಡಿಗೆ ನಿಯಮಗಳಲ್ಲಿ ಭಾರೀ ಬದಲಾವಣೆ
ಬೆಂಗಳೂರಿನಲ್ಲಿ ಬಾಡಿಗೆ ಮನೆ ಸಿಗುವುದು ಸುಲಭದ ಮಾತಲ್ಲ. ಮನೆ ಸಿಕ್ಕರೂ ಕೆಲವು ಏರಿಯಾಗಳಲ್ಲಿ ಮನೆ ಮಾಲೀಕರ ರೂಲ್ಸ್ ಒಂದೆರಡಲ್ಲ. ಅದು ಬೇಡ, ಇದು ಬೇಡ, ಹೀಗೆ ಇರಿ, ಹಾಗೆ ಇರಿ ಅಂತೆಲ್ಲ ಕಂಡೀಷನ್ ಹಾಕ್ತಾರೆ. ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ಕೂಡ ಗಗನಕ್ಕೇರುತ್ತಲೇ ಇದೆ. ಆದರೆ ಇದೀಗ ಬಾಡಿಗೆ ನಿಯಮಗಳಲ್ಲಿ ಮಹತ್ವದ ಬದಲಾವಣೆ ಆಗಲಿದ್ದು, ಬಾಡಿಗೆದಾರರಿಗೆ ರಿಲೀಫ್ ಸಿಕ್ಕಂತಾಗಿದೆ. ಹೊಸ ಮನೆ ಬಾಡಿಗೆ ನಿಯಮಗಳು-2025 ಸದ್ಯದಲ್ಲೇ ಜಾರಿಯಾಗುತ್ತಿದ್ದು, ಬೆಂಗಳೂರಿನಂತಹ ನಗರಗಳಲ್ಲಿ ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ.
ಅಲ್ಲದೆ ಬಾಡಿಗೆದಾರರು ಮತ್ತು ಮನೆ ಮಾಲೀಕರ ನಡುವೆ ಪಾರದರ್ಶಕತೆ ತರಲಿದೆ. ಈ ನಿಯಮಗಳು ಹಿಂದಿನ ರೀತಿ ಬಾಡಿಗೆ ಕಾಯ್ದೆಯ ಮೇಲೆ ನಿರ್ಮಿಸಲ್ಪಟ್ಟಿವೆ. ಅಲ್ಲದೆ ಹೆಚ್ಚಿನ ಮುಂಗಡ ಪಾವತಿಗಳನ್ನು ಕಡಿಮೆ ಮಾಡಲು, ಎಲ್ಲವನ್ನೂ ಒಂದೇ ಸೂರಿನಡಿ ತರಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ಬಾಡಿಗೆದಾರರು ಬಹಳ ಹಿಂದಿನಿಂದಲೂ ಹೆಚ್ಚಿನ ಭದ್ರತಾ ಠೇವಣಿ ಪಾವತಿಸುವ ಇಕ್ಕಟ್ಟಿನಲ್ಲಿ ಸಿಲುಕಿದ್ದು, ಇದಕ್ಕೆ ಪರಿಹಾರವೂ ಸಿಗಲಿದೆ. ಹೊಸ ಹೋಮ್ ರೆಂಟ್ ರೂಲ್ಸ್-2025 ಜಾರಿಗೆ ಬಂದಿದ್ದು, ಬೆಂಗಳೂರಿನ ಬಾಡಿಗೆದಾರರಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ. ಹೊಸ ನಿಯಮದಂತೆ ಬಾಡಿಗೆ ಮನೆಗಳಿಗೆ ಗರಿಷ್ಠ 2 ತಿಂಗಳ ಬಾಡಿಗೆಯಷ್ಟೇ ಸೆಕ್ಯೂರಿಟಿ ಡೆಪಾಸಿಟ್ ಕೇಳಬಹುದು. ಹಿಂದಿನಂತೆ 6-10 ತಿಂಗಳ ಹಣವನ್ನು ಕೇಳುವಂತಿಲ್ಲ.

ಏನೆಲ್ಲ ಹೊಸ ನಿಯಮ?
ಒಂದು ವರ್ಷದ ಬಾಡಿಗೆಯನ್ನು ಮುಂಚಿತವಾಗಿ ಠೇವಣಿಯಾಗಿ ಪಾವತಿಸುವಂತೆ ಮಾಲೀಕರು ಕಂಡೀಷನ್ ಹಾಕುವಂತಿಲ್ಲ. ಎಲ್ಲ ಬಾಡಿಗೆ ಒಪ್ಪಂದಗಳು 2 ತಿಂಗಳ ಒಳಗೆ ಆನ್‌ಲೈನ್ ಅಥವಾ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಬೇಕು. ಇಲ್ಲದಿದ್ದರೆ ₹5,000 ದಂಡ ಕಟ್ಟಬೇಕಾಗುತ್ತೆ. ಮನೆಮಾಲೀಕರು ಬಾಡಿಗೆಯನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ಹೆಚ್ಚಳ ಮಾಡಲು ಅವಕಾಶವಿದೆ. ಬಾಡಿಗೆ ಹೆಚ್ಚಿಸುವ ಮೊದಲು, ಮನೆ ಮಾಲೀಕರು ಮೂರು ತಿಂಗಳ ಮುಂಚೆಯೇ ಸೂಚನೆ ನೀಡಬೇಕು.
ಬಾಡಿಗೆ ತಿಂಗಳಿಗೆ ₹5,000ಕ್ಕಿಂತ ಹೆಚ್ಚಿದ್ದರೆ, ಬಾಡಿಗೆದಾರರು ಯುಪಿಐ, ಬ್ಯಾಂಕ್ ವರ್ಗಾವಣೆ ಇತ್ಯಾದಿಗಳ ಮೂಲಕ ಡಿಜಿಟಲ್ ರೂಪದಲ್ಲಿ ಪಾವತಿಸಬೇಕು. ತಿಂಗಳಿಗೆ ₹50,000ಕ್ಕಿಂತ ಹೆಚ್ಚಿನ ಬಾಡಿಗೆ ಇದ್ದರೆ, ಅದಕ್ಕೆ ಟಿಡಿಎಸ್ ಕಡಿತವಾಗಲಿದೆ. ಇದು ದುಬಾರಿ ಬಾಡಿಗೆ ಮನೆಗಳನ್ನು ಸ್ಪಷ್ಟ ತೆರಿಗೆ ನಿಯಮಗಳ ಅಡಿಯಲ್ಲಿ ತರುತ್ತದೆ.
ಹೊಸ ನಿಯಮದ ಪ್ರಕಾರ ಮನೆ ಮಾಲೀಕರು ಗರಿಷ್ಠ ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಠೇವಣಿಯಾಗಿ ಕೇಳಬಹುದು. ಇದಕ್ಕೂ ಮೊದಲು ಬಾಡಿಗೆದಾರರು 6-10 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಪಾವತಿಸಬೇಕಿತ್ತು. ಆ ಪದ್ಧತಿಯನ್ನು ಈಗ ಕಾನೂನುಬಾಹಿರ ಎಂದು ಪರಿಗಣಿಸಲಾಗಿದೆ. ಇದು ಬಾಡಿಗೆದಾರರ ಮೇಲಿನ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲಿದೆ.












Click it and Unblock the Notifications