ನೆತ್ತಿ ಸುಡುತ್ತಿದ್ದಾನೆ ಸೂರ್ಯ! ಬಿಸಿಲ ಧಗೆಯಿಂದ ಪಾರಾಗಲು ಮಹಿಳೆ ಅನುಸರಿಸಿದ ಸೂಪರ್ ಹ್ಯಾಕ್ ಎಲ್ಲೆಡೆ ವೈರಲ್
ಈ ಬಾರಿಯ ಬಿಸಿಲು ಹಿಂದಿನ ದಾಖಲೆಗಳನ್ನು ಮೀರುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿಸಿಲ ಧಗೆ ಏರುತ್ತಿದೆ. ಬೆಂಗಳೂರಿನಲ್ಲಿಯೂ ಬಿಸಿಲು, ಸೆಖೆ ತಡೆಯಲು ಆಗುತ್ತಿಲ್ಲ. ಈ ಮಧ್ಯೆ, ಬೆಂಗಳೂರಿನ ಮಹಿಳೆಯೊಬ್ಬರು ನಗರದಲ್ಲಿ ಹೆಚ್ಚುತ್ತಿರುವ ಬಿಸಿಲಿನಿಂದ ಪರಿಹಾರ ಪಡೆಯಲು ಕಂಡುಕೊಂಡ ದಾರಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಎಸಿಯ ತಂಪು ಗಾಳಿಯನ್ನು ಆನಂದಿಸಲು ಪ್ರಿಯಾ ಪಾಲ್ ಎನ್ನುವ ಮಹಿಳೆ ಕಂಡುಕೊಂಡ ರೀತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಹಿಳೆ ತಾನು ಬಿಸಿಲ ಧಗೆಯಿಂದ ಪಾರಾಗಲು ಮಾಡಿರುವ ಉಪಾಯದ ಬಗ್ಗೆ ವೀಡಿಯೊ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಿಯಾ ಪಾಲ್ ಬೆಂಗಳೂರಿನಲ್ಲಿ ನೆಲೆಸಿರುವ ಮಹಿಳೆ. ಸದಾ ತಂಪಾಗಿರುವ ಬೆಂಗಳೂರು ಕೂಡಾ ಇದೀಗ ಬಿಸಿಲಿಗೆ ಬೇಯುತ್ತಿದೆ. ಹೆಚ್ಚುತ್ತಿರುವ ಸೆಖೆಯಿಂದ ಮುಕ್ತಿ ಪಡೆಯಲು ಎಸಿ ಅಥವಾ ಕೂಲರ್ ಖರೀದಿಸುವುದು ಪ್ರಿಯಾ ಅವರ ಮೊದಲ ಆಯ್ಕೆಯಾಗಿತ್ತು. ಆದರೆ ಬೇಡಿಕೆ ಹೆಚ್ಚಾಗಿರುವ ಕಾರಣ ಡೆಲಿವೆರಿಗೆ ಒಂದು ವಾರಗಳ ಸಮಯಾವಕಾಶ ಕೇಳುತ್ತಿತ್ತು. ಇನ್ನು ಬಾಡಿಗೆಗೆ ಪಡೆಯೋಣ ಎಂದರೆ ಅದು ಕೂಡಾ ಲಭ್ಯವಿರಲಿಲ್ಲ. ಮುಂದೇನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಪ್ರಿಯಾಗೆ ಹೊಳೆದದ್ದು ಈ ಮಾರ್ಗ.

ಹೌದು, ಬಿಸಿಲು ಸೆಖೆ ಕಾರಣದಿಂದ ದಿನ ಕಳೆಯುವುದು ಕಷ್ಟವಾನ್ನುವ ಕಾರಣಕ್ಕೆ ಅವರು ಭಾನುವಾರ ಹೋಟೆಲ್ ಬುಕ್ ಮಾಡಿದ್ದಾರೆ. ಮನೆಯಲ್ಲಿರುವುದಕ್ಕಿಂತ ಹೊಟೇಲ್‌ನಲ್ಲಿ ಇರುವುದೇ ಲೇಸು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. (Instagram/priyaa.pall)
ಅವರು ಹಂಚಿಕೊಂಡಿರುವ ಕ್ಲಿಪ್‌ನಲ್ಲಿ ಹೊಟೇಲ್ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಹೊಟೇಲ್ ಬುಕ್ ಮಾಡುವ ಮೂಲಕ ಮಹಿಳೆ ಹೊರಗಿನ ಬಿಸಿಲಿನ ವಾತಾವರಣದಿಂದ ಪಾರಾಗಿದ್ದಾರೆ. ಇನ್ನು ವೀಡಿಯೊದ ಮೇಲೆ "ಬೆಂಗಳೂರಿನಲ್ಲಿ ಕೇವಲ ಇದಕ್ಕಾಗಿ ಮನೆಯ ಪಕ್ಕದಲ್ಲಿ ಹೋಟೆಲ್ ಬುಕ್ ಮಾಡಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ವೀಡಿಯೊಗೆ "ಅಬ್ ನಹಿ ಹೋ ರಹಾ ಎಸಿ ಕೆ ಬಿನಾ" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ತಾಪಮಾನ ಎಷ್ಟು ಹೆಚ್ಚಾಗಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಈ ವೀಡಿಯೊ ಶೇರ್ ಮಾಡುತ್ತಿದ್ದಂತೆಯೇ ಆನ್‌ಲೈನ್‌ನಲ್ಲಿ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ನೋಡಿ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದು 'ಒಳ್ಳೆಯ ನಿರ್ಧಾರದಂತೆ ಕಾಣುತ್ತಿದೆ' ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು ಇದು ನಿಜಕ್ಕೂ ಅರ್ಥಪೂರ್ಣವಾಗಿದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಈ ವರ್ಷ ಬೆಂಗಳೂರಿನ ಹವಾಮಾನವು ನಿಜವಾಗಿಯೂ ಆಶ್ಚರ್ಯವನ್ನುಂಟು ಮಾಡಿದೆ" ಎಂದು ಹೇಳಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ಒಂದು ಸ್ಮಾರ್ಟ್ ಹ್ಯಾಕ್, ತಮಾಷೆ ಅಲ್ಲ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕೆಲವು ಬಳಕೆದಾರರು ಕೂಲಿಂಗ್ ಉಪಕರಣಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಎತ್ತಿ ತೋರಿಸಿದ್ದಾರೆ. ಎಸಿ ಮತ್ತು ಕೂಲರ್ ಸ್ಟಾಕ್‌ಗಳೇ ಇಲ್ಲವಾಗಿದೆ. ಇಲ್ಲೂ ಅದೇ ಪರಿಸ್ಥಿತಿ ಇದೆ ಎಂದು ಮತ್ತೊಬ್ಬರು ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.
(ಬರಹ : ರಂಜಿತಾ ಆರ್. ಕೆ)












Click it and Unblock the Notifications