Temperature: ಬೆಂಗಳೂರಲ್ಲಿ 12 ವರ್ಷಗಳ ಸಾರ್ವಕಾಲಿಕ ದಾಖಲೆಯ ತಾಪಮಾನ: ಪೂರ್ಣ ವಿವರ
ಬೆಂಗಳೂರು, ಏಪ್ರಿಲ್ 03: ಬೆಂಗಳೂರು ಸೇರಿದಂತೆ ಕರ್ನಾಟಕದೆಲ್ಲಡೆ ವಿಪರೀತ ಶಾಖದ ಅಲೆ ಕಂಡು ಬಂದಿದೆ. ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲಾಗುತ್ತಿದೆ. ವಿಶೇಷವೆಂದರೆ ರಾಜಧಾನಿ ಬೆಂಗಳೂರಿನಲ್ಲಿ 12 ವರ್ಷಗಳಲ್ಲಿ ಮತ್ತೆ ಅತ್ಯಧಿಕ ದಾಖಲೆ ಮಟ್ಟದ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಕಳೆದ ಮೂರು ವರ್ಷಗಳ ಅತ್ಯಧಿಕ ತಾಪಮಾನವು ಆಗಿದೆ.
ಹೌದು, ಉದ್ಯಾನನಗರಿ ಅಂತಲೇ ಕರೆಸಿಕೊಳ್ಳುವ ಬೆಂಗಳೂರು ಈ ಬೇಸಿಗೆಯಲ್ಲಿ ಬಯಲುಸೀಮೆಯ ಅನುಭವ ನೀಡುತ್ತಿರುವುದು ಸುಳ್ಳಲ್ಲ. ಏಪ್ರಿಲ್ ಆರಂಭದಲ್ಲೇ ಅಂದರೆ ಮಂಗಳವಾರ (ಏಪ್ರೀಲ್ 2) ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ 12 ವರ್ಷಗಳಲ್ಲಿಯೇ ನಾಲ್ಕನೇ ಬಾರಿಗೆ ದಾಖಲಾದ ಸಾರ್ವಕಾಲಿಕ ದಾಖಲೆಯ ತಾಪಮಾನವಾಗಿದೆ.

ವಾಡಿಕೆಗಿಂತಹ 2-3 ಡಿಸೆ ಅಧಿಕ ಉಷ್ಣಾಂಶ
ಏಪ್ರಿಲ್ ತಿಂಗಳಲ್ಲಿ ಈ ಹಿಂದಿನ ತಿಂಗಳಿಗಿಂತಲೇ ಅತ್ಯಧಿಕ ತಾಪಮಾನ, ಬಿಸಿ ಗಾಳಿಯ ವಾತಾವರಣ ಉಂಟಾಗಲಿದೆ ಎಂಬ ಮುನ್ಸೂಚನೆ ಇದಾಗಿದೆ. ಏಪ್ರೀಲ್, ಮೇ ಮತ್ತು ಜೂನ್ ವರೆಗೆ ಬೆಂಗಳೂರಿನಲ್ಲಿ ಶಾಖದ ಅಲೆ ಹೀಗೆ ಮುಂದುವರಿಯಬಹುದು. ವಾಡಿಕೆ ಗರಿಷ್ಠ ತಾಪಮಾನಕ್ಕಿಂತಲೂ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚೇ ಉಷ್ಣಾಂಶ ಕಂಡು ಬರಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ನಗರದಲ್ಲಿ ಮಾರ್ಚ್ ತಿಂಗಳಲ್ಲಿ ವಾರದಿಂದ ವಾರಕ್ಕೆ ತಾಪಮಾನ ಏರಿಕೆ ಆಗುತ್ತಾ ಬಂತು. ಅದೇ ಏಪ್ರಿಲ್‌ನಲ್ಲಿ ಗರಿಷ್ಠ ಉಷ್ಣಾಂಶ ದಾಖಲಾತಿ ಪ್ರಮಾಣ ಇನ್ನೂ ಹೆಚ್ಚಾಗಿದೆ. ಮೈ ಸಡುವಂತೆ, ಅನಾರೋಗ್ಯಕ್ಕೆ ನೂಕುವಷ್ಟರ ಮಟ್ಟಿಗಿನ ಬಿಸಿಲು ಬೆಂಗಳೂರಲ್ಲಿ ಕಂಡು ಬಂದಿದೆ. ಜನರು ಈ ರಣಬಿಸಿಲಿಗೆ ತತ್ತರಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು ಮನೆಯಿಂದ ಹೊರ ಹೋಗದಂತಹ ಸ್ಥಿತಿ ಈ ಬಾರಿ ನಿರ್ಮಾಣವಾಗಿದೆ.

12 ವರ್ಷಗಳ ಗರಿಷ್ಠ ತಾಪಮಾನದ ವಿವರ
ಕಳೆದ 12 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಮಂಗಳವಾರ ನಾಲ್ಕನೇ ಬಾರಿಗೆ ಕಂಡು ಬಂದಿದೆ. ಆದರೆ ಕಳೆದ ಮೂರು ವರ್ಷಗಳ ಪೈಕಿ ಏಪ್ರಿಲ್ ನಲ್ಲಿ ಕಂಡು ಬಂದ ಅಧಿಕ ಬಿಸಿಲಿ ನೆನ್ನೆ ಮಂಗಳವಾರದ್ದೆ ಆಗಿದೆ.
ಇದಕ್ಕು ಮೊದಲು 2021 ಏಪ್ರಿಲ್ 10ರಂದು (37.2 ಡಿ.ಸೆ) ದಾಖಲಾಗಿತ್ತು. 2019ರ ಏಪ್ರಿಲ್ 08 ರಂದು (37ಡಿ.ಸೆ), 2015ರ ಏಪ್ರಿಲ್ 6ರಂದು ಹಾಗೂ 2012ರ ಏಪ್ರಿಲ್ 25 ರಂದು (37.5 ಡಿ.ಸೆ) ದಾಖಲೆ ಮಟ್ಟದ ತಾಪಮಾನ ದಾಖಲಾಗಿದೆ. ಇದರಲ್ಲಿ ಬಹುತೇಕ ಸಮಯ ಏಪ್ರಿಲ್ ಮೊದಲ ವಾರವೇ ಅತೀ ಬಿಸಿಲು ಕಂಡು ಬಂದಿದೆ ಎಂದು ಹವಾಮಾನ ಇಲಾಖೆ ತಾಪಮಾನ ವರದಿ ಮಾಹಿತಿ ನೀಡಿದೆ.
ನೆನ್ನೆ ಮಂಗಳವಾರ ಬೆಂಗಳೂರಲ್ಲಿ ಎಲ್ಲೆಲ್ಲಿ ಎಷ್ಟು ತಾಪಮಾನ ದಾಖಲಾಗಿದೆ ಎಂದು ನೋಡುವುದಾದರೆ ನಗರದಲ್ಲಿ 37.2 ಡಿಗ್ರಿ ಸೆಲ್ಸಿಯಸ್, ಬೆಂಗಳೂರು KIAL 37.3 ಡಿ.ಸೆ, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ 36.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.
ಕರ್ನಾಟಕದಲ್ಲಿ ಒಣ ಹವೆ ಮುನ್ಸೂಚನೆ
ಇನ್ನೂ ರಾಜ್ಯದ ಗರಿಷ್ಠ ತಾಪಮಾನ ನೋಡುವುದಾದರೆ, ಕಲಬುರಗಿಯಲ್ಲಿ ಅತ್ಯಧಿಕ 41.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಬಾಗಲಕೋಟೆಯಲ್ಲಿ 40.7 ಡಿಗ್ರಿ ಸೆಲ್ಸಿಯಸ್, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ 39 ಡಿ.ಸೆ. ಉಷ್ಣಾಂಶ ಕಂಡು ಬಂದಿದೆ. ಕೊಡುಗು ಸೇರಿದಂತೆ ಒಂದೆರಡು ಕಡೆ ತುಂತುರು ಮಳೆ ಆಗಿದೆ. ರಾಜ್ಯದಲ್ಲಿ ಮುಂದಿನ ದಿನಗಳು ಹೀಗೆ ಒಣಹವೆ, ಶಾಖದ ಅಲೆಯಿಂದ ಕೂಡಿರಲಿವೆ ಎಮದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications