ಇನ್‌ಸ್ಟಾ ಪೋಸ್ಟ್ ತಂದಿಟ್ಟ ಫಜೀತಿ: ಆರ್‌ಸಿಬಿ ಪಂದ್ಯದ ವೇಳೆ ಹಂಚಿಕೊಂಡ ಫೋಟೋದಿಂದಲೇ ಸಂಕಷ್ಟಕ್ಕೆ ಸಿಲುಕಿದ ಗಿಟಾರ್ ವಾದಕ
IPL 2026: ಐಪಿಎಲ್ 2026 ಹಬ್ಬ ಆರಂಭವಾಗಿದ್ದು, ಹಲವರು ಬ್ಲಾಕ್‌ನಲ್ಲಿ ಟಿಕೆಟ್ ಖರೀದಿಸಿ ಮೋಸ ಹೋಗಿರುವ ಘಟನೆಗಳು ನಡೆದಿವೆ. ಈ ನಡುವೆಯೇ ಇದೀಗ ವಿಚಿತ್ರ ಎಂಬಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಒಂದು ಪೋಸ್ಟ್ ಬೆಂಗಳೂರಿನ ಗಿಟಾರ್ ವಾದಕರೊಬ್ಬರನ್ನು ಐಪಿಎಲ್ ಬ್ಲಾಕ್ ಟಿಕೆಟ್ ಹಗರಣದಲ್ಲಿ ಸಿಲುಕುವಂತೆ ಮಾಡಿದೆ.
ಬೆಂಗಳೂರಿನ 'ಸಕ್ಕರೆ ಮಿಠಾಯಿ' (Sakkare Mitaayi) ಎಂಬ ಸಂಗೀತ ತಂಡದ ಗಿಟಾರ್ ವಾದಕ ಹೇಮಂತ್ ಕೆ.ಬಿ. ಎಂಬುವವರು ಈ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ತಂಡವು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪ್ಲಾಟಿನಂ ಲಾಂಜ್‌ನಲ್ಲಿ ನಡೆದ ಆರ್‌ಸಿಬಿ ಪಂದ್ಯಗಳ ವೇಳೆ ಪ್ರದರ್ಶನ ನೀಡಿತ್ತು. ಕಾರ್ಯಕ್ರಮದ ಸಂಘಟಕರಾದ 'ಡಿಎನ್‌ಎ ಎಂಟರ್ಟೈನ್‌ಮೆಂಟ್' ಸಂಸ್ಥೆಯು ಕ್ರೀಡಾಂಗಣ ಪ್ರವೇಶಿಸಲು ತಂಡದ ಸದಸ್ಯರಿಗೆ ಅಧಿಕೃತ ಗುರುತಿನ ಚೀಟಿಗಳನ್ನು ನೀಡಿತ್ತು.

ಮಾರ್ಚ್ 28ರಂದು ನಡೆದ ಪಂದ್ಯದ ವೇಳೆ ಹೇಮಂತ್ ಅವರು ಸಂಭ್ರಮದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ, ಆ ಫೋಟೋಗಳಲ್ಲಿ ಅವರ ಗುರುತಿನ ಚೀಟಿ (ID Card)ಯ ಮುಂಭಾಗವು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಇದನ್ನು ಗಮನಿಸಿದ ಅಪರಿಚಿತ ವಂಚಕರು, ಆ ಐಡಿ ಕಾರ್ಡ್ ವಿವರಗಳನ್ನು ಬಳಸಿಕೊಂಡು ಐಪಿಎಲ್ ಟಿಕೆಟ್‌ಗಳನ್ನು ಬ್ಲಾಕ್‌ನಲ್ಲಿ ಮಾರಾಟ ಮಾಡಲು ಶುರು ಮಾಡಿದ್ದರು.
ಹಗರಣ ಬೆಳಕಿಗೆ ಬಂದಿದ್ದು ಹೇಗೆ?
ಏಪ್ರಿಲ್ 6ರಂದು ತಂಡದ ಡ್ರಮ್ಮರ್ ಪೃಥ್ವಿ ಅವರಿಗೆ ಸಂಘಟಕರಿಂದ ಕರೆ ಬಂದಿತು. ನಿಮ್ಮ ತಂಡದ ಸದಸ್ಯರ ಐಡಿ ಕಾರ್ಡ್ ಬಳಸಿ ಟಿಕೆಟ್ ದಂಧೆ ನಡೆಯುತ್ತಿದೆ ಎಂಬ ವಿಷಯ ತಿಳಿಯಿತು. ತನಿಖೆ ನಡೆಸಿದಾಗ, ವಂಚಕರು ಹೇಮಂತ್ ಅವರ ಐಡಿ ತೋರಿಸಿ ನಂಬಿಸಿ, ಯುಪಿಐ ಮೂಲಕ ಸುಮಾರು 4,875 ರೂಪಾಯಿ ಹಣವನ್ನು ಪಡೆದಿರುವುದು ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಹೇಮಂತ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ತನಗೂ ಈ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ತನ್ನ ಐಡಿ ದುರ್ಬಳಕೆ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕನ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳುವಾಗ ನಿಮ್ಮ ಅಧಿಕೃತ ದಾಖಲೆಗಳು, ಐಡಿ ಕಾರ್ಡ್‌ಗಳು ಅಥವಾ ಟಿಕೆಟ್‌ಗಳ ಕ್ಯೂಆರ್ ಕೋಡ್ ಕಾಣಿಸದಂತೆ ಎಚ್ಚರಿಕೆ ವಹಿಸುವುದು ಮುಖ್ಯ. ಯಾರೂ ಕೂಡ ಅಪ್ಪಿತಪ್ಪಿಯೂ ನಿಮ್ಮ ಐಡಿ ಕಾರ್ಡ್ ಅಥವಾ ಕ್ಯೂಆರ್ ಕೋಡ್‌ಗಳನ್ನು ಎಲ್ಲೆಂದರಲ್ಲಿ ಪ್ರದರ್ಶಿಸಬೇಡಿ ಎಂಬುದನ್ನು ಈ ಘಟನೆ ನೆನಪಿಸುತ್ತದೆ ಅಂತಲೇ ಹೇಳಬಹುದು.












Click it and Unblock the Notifications