ಐಟಿ ಕಂಪನಿಯ ಡೇಕೇರ್ನಲ್ಲಿ ಕಂದಮ್ಮಗಳ ಮೇಲೆ ದೌರ್ಜನ್ಯ: ವಾಷಿಂಗ್ ಮೆಷಿನ್, ಶೌಚಾಲಯದಲ್ಲಿ ಕೂಡಿಹಾಕಿ ಚಿತ್ರಹಿಂಸೆ
ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಹಾಗೂ ವೃತ್ತಿಜೀವನವನ್ನು ನಿಭಾಯಿಸಲು ಹೆತ್ತವರು ತಮ್ಮ ಮುದ್ದು ಕಂದಮ್ಮಗಳನ್ನು ಡೇಕೇರ್ ಅಂದರೆ ಶಿಶುಪಾಲನಾ ಕೇಂದ್ರಗಳಲ್ಲಿ ಬಿಟ್ಟು ಕಚೇರಿಗೆ ತೆರಳುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ. ತಮ್ಮ ಅನುಪಸ್ಥಿತಿಯಲ್ಲಿ ಮಕ್ಕಳು ಸುರಕ್ಷಿತವಾಗಿರುತ್ತಾರೆ, ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಪೋಷಕರದ್ದು.
ಆದರೆ, ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಯೊಂದರ ಕ್ಯಾಂಪಸ್ನಲ್ಲಿರುವ ಡೇಕೇರ್ನಲ್ಲಿ ನಡೆದಿರುವ ಘಟನೆ ಪೋಷಕರ ಎದೆಯಲ್ಲಿ ನಡುಕ ಹುಟ್ಟಿಸುವಂತಿದೆ. 2 ರಿಂದ 3 ವರ್ಷದ ಎಳೆ ಕಂದಮ್ಮಗಳ ಮೇಲೆ ಮಹಿಳಾ ಸಿಬ್ಬಂದಿ ಎಸಗಿರುವ ದೌರ್ಜನ್ಯದ ವೀಡಿಯೋಗಳು ಇದೀಗ ಬೆಳಕಿಗೆ ಬಂದಿದ್ದು, ಇಡೀ ಸಿಲಿಕಾನ್ ಸಿಟಿಯನ್ನು ಜನರನ್ನು ಬೆಚ್ಚಿಬೀಳಿಸಿದೆ.

ಕ್ಯಾಪ್ಜೆಮಿನಿ ಹೆಚ್ಎಎಲ್ ಕ್ಯಾಂಪಸ್ನಲ್ಲಿ ನಡೆದಿದ್ದೇನು?
ಬೆಂಗಳೂರಿನ ಹೆಚ್ಎಎಲ್ ಕ್ಯಾಂಪಸ್ನಲ್ಲಿರುವ ಪ್ರಸಿದ್ಧ ಐಟಿ ಕಂಪನಿ 'ಕ್ಯಾಪ್ಜೆಮಿನಿ' ಆವರಣದಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಮಕ್ಕಳನ್ನ ಸುರಕ್ಷಿತವಾಗಿ ನೋಡಿಕೊಳ್ಳಲೆಂದು ಈ ಡೇಕೇರ್ಗೆ ಬಿಡುತ್ತಿದ್ದರು. ಆದರೆ, ಇಲ್ಲಿದ್ದ ಐವರು ಮಹಿಳಾ ಸಿಬ್ಬಂದಿ ಆ ಪುಟ್ಟ ಮಕ್ಕಳ ಜೊತೆ ರಾಕ್ಷಸರಂತೆ ವರ್ತಿಸಿದ್ದಾರೆ.
ಹೌದು, ಮಕ್ಕಳು ಅತ್ತಾಗ ಅಥವಾ ತುಂಟಾಟ ಮಾಡಿದಾಗ ಅವರನ್ನು ಸಮಾಧಾನಪಡಿಸುವ ಬದಲು ದೈಹಿಕ ಹಲ್ಲೆ ನಡೆಸಿ, ಬೆದರಿಕೆ ಹಾಕಿರುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ವಾಷಿಂಗ್ ಮೆಷಿನ್, ಟಾಯ್ಲೆಟ್ ಜೆಟ್ ಸ್ಪ್ರೇ ಬಳಸಿ ಚಿತ್ರಹಿಂಸೆ
ಪೊಲೀಸರಿಗೆ ಸಲ್ಲಿಕೆಯಾಗಿರುವ ದೂರಿನ ಪ್ರಕಾರ, ಆರೋಪಿಗಳು ಎಸಗಿರುವ ಕೃತ್ಯಗಳು ಅಕ್ಷರಶಃ ಅಮಾನವೀಯವಾಗಿವೆ. ಅಳುವ ಮಕ್ಕಳನ್ನು ಸುಮ್ಮನಾಗಿಸಲು ಸಿಬ್ಬಂದಿ ಅವರನ್ನು ಫ್ರಂಟ್-ಲೋಡಿಂಗ್ ವಾಷಿಂಗ್ ಮೆಷಿನ್ ಒಳಗೆ ಕೂರಿಸಿದ್ದಾರೆ! ಇಷ್ಟೇ ಅಲ್ಲದೆ, ವೆಸ್ಟರ್ನ್ ಟಾಯ್ಲೆಟ್ ಮೇಲೆ ಬಲವಂತವಾಗಿ ಕೂರಿಸುವುದು, ಶೌಚಾಲಯದ ಜೆಟ್ ಸ್ಪ್ರೇ ಬಳಸಿ ಮಕ್ಕಳ ಬಾಯಿಗೆ ನೀರು ಹಾಯಿಸುವುದು ಹಾಗೂ ಶೌಚಾಲಯದ ಒಳಗೆ ಕೂಡಿಹಾಕಿ ಭಯಭೀತರನ್ನಾಗಿಸುವಂತಹ ಹೀನ ಕೃತ್ಯಗಳನ್ನು ಎಸಗಿದ್ದಾರೆ.
ಕಂದಮ್ಮಗಳು ಭಯದಿಂದ ಅಳುತ್ತಿದ್ದರೂ ಕನಿಕರ ತೋರದೆ ಬೆದರಿಸಿ ಸುಮ್ಮನಿರಿಸುವ ದೃಶ್ಯಗಳು ವೀಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ, ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ವಾಟ್ಸಾಪ್ ವೀಡಿಯೋದಿಂದ ಬಯಲಾಯ್ತು ಸತ್ಯ
ಡೇಕೇರ್ ಒಳಗಡೆ ನಡೆಯುತ್ತಿದ್ದ ಈ ಕರಾಳ ಮುಖ ಬಹುಕಾಲ ಯಾರಿಗೂ ತಿಳಿದಿರಲಿಲ್ಲ. ಆದರೆ, ಇತ್ತೀಚೆಗೆ ಈ ದೌರ್ಜನ್ಯದ ದೃಶ್ಯಾವಳಿಗಳು ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿದಾಡಲು ಶುರುವಾದವು. ಸೋಮವಾರದಂದು ಈ ವೀಡಿಯೋಗಳು 'ಚೈಲ್ಡ್ ಹೆಲ್ಪ್ಲೈನ್' ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣವೇ ಅವರು ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಘಟನೆಯ ಗಂಭೀರತೆಯನ್ನು ಅರಿತ ಪೊಲೀಸರು ತ್ವರಿತವಾಗಿ ಮಧ್ಯಪ್ರವೇಶಿಸಿ ತನಿಖೆ ಆರಂಭಿಸಿದ್ದಾರೆ.
ಕಠಿಣ ಕ್ರಮದ ಭರವಸೆ ನೀಡಿದ ಪೊಲೀಸ್ ಆಯುಕ್ತರು, 5 ಸಿಬ್ಬಂದಿ ವಿರುದ್ಧ FIR ದಾಖಲು
ಘಟನೆಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ದೂರು ಹಾಗೂ ಲಭ್ಯವಿರುವ ವೀಡಿಯೋ ಆಧಾರದ ಮೇಲೆ, ಐವರು ಆರೋಪಿ ಮಹಿಳಾ ಸಿಬ್ಬಂದಿ ವಿರುದ್ಧ ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೂಕ್ತ ಸೆಕ್ಷನ್ಗಳ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಆಯುಕ್ತರು, "ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿ ಸಾಗುತ್ತಿದೆ. ಒಂದು ವೇಳೆ ನಿಯಮಗಳ ಗಂಭೀರ ಉಲ್ಲಂಘನೆ ಕಂಡುಬಂದಲ್ಲಿ, ಸದರಿ ಮಕ್ಕಳ ಪಾಲನಾ ಕೇಂದ್ರವನ್ನು ಶಾಶ್ವತವಾಗಿ ಮುಚ್ಚಿಸಲಾಗುವುದು," ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications