ಹಬ್ಬ ಸಮೀಪಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಕಂಟೇನ್ಮೆಂಟ್ ವಲಯಗಳ ಸಂಖ್ಯೆಯಲ್ಲೂ ಹೆಚ್ಚಳ
ಬೆಂಗಳೂರು, ಸೆಪ್ಟೆಂಬರ್ 6: ಹಬ್ಬಗಳಿಗೆ ಬೆಂಗಳೂರು ಸಜ್ಜಾಗುತ್ತಿದ್ದಂತೆ, ಇಳಿಕೆ ಕಂಡಿದ್ದ ಮೈಕ್ರೋ ಕಂಟೇನ್ಮೆಂಟ್ ವಲಯಗಳ ಸಂಖ್ಯೆಯೂ ಮತ್ತೊಮ್ಮೆ ಏರಿಕೆಯಾಗಲು ಆರಂಭಿಸಿದೆ.
ಭಾನುವಾರದರೆಗೆ ಬಿಬಿಎಂಪಿ ನಗರದಲ್ಲಿ ಸುಮಾರು ನೂರು ಮೈಕ್ರೋ ಕಂಟೇನ್ಮೆಂಟ್‌ಗಳನ್ನು ಘೋಷಣೆ ಮಾಡಿದೆ. ಜನರು ಕೊರೊನಾ ನಿಯಮಗಳ ಪಾಲನೆಯನ್ನು ಮರೆಯುತ್ತಿದ್ದು, ಮತ್ತೆ ಪ್ರಕರಣಗಳ ಸಂಖ್ಯೆ ಏರುವ ಸೂಚನೆ ತೋರುತ್ತಿದೆ ಎಂದು ಬಿಬಿಎಂಪಿ ಆತಂಕ ವ್ಯಕ್ತಪಡಿಸಿದೆ.

ಆಗಸ್ಟ್ 27ರಂದು ನಗರದಲ್ಲಿ ಕಂಟೇನ್ಮೆಂಟ್ ಝೋನ್‌ಗಳ ಸಂಖ್ಯೆ 96 ಇತ್ತು. ಇದೀಗ ಸೆಪ್ಟೆಂಬರ್ 1ರಂದು ಆ ಸಂಖ್ಯೆ ನೂರನ್ನು ದಾಟಿದ್ದು, ಭಾನುವಾರದ ವೇಳೆಗೆ 103 ಕಂಟೇನ್ಮೆಂಟ್ ಝೋನ್‌ಗಳಿಗೆ ಬಂದು ತಲುಪಿದೆ. ಮಹದೇವಪುರ ಹಾಗೂ ಪೂರ್ವ ವಲಯಗಳಲ್ಲಿ ಕಂಟೇನ್ಮೆಂಟ್ ವಲಯಗಳದ್ದು ಸಿಂಹಪಾಲಾಗಿದೆ. ಇಲ್ಲಿ 22 ಕಂಟೇನ್ಮೆಂಟ್ ವಲಯಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ದಾಸರಹಳ್ಳಿಯಲ್ಲಿ ಒಂದು ಕಂಟೇನ್ಮೆಂಟ್ ವಲಯವಿದೆ.
ಕಂಟೇನ್ಮೆಂಟ್ ವಲಯಗಳನ್ನು ರೂಪಿಸುವ ಮೂಲಕ ಸೋಂಕು ನಿಯಂತ್ರಿಸುವ ಕೆಲಸ ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ. ಕ್ರಮೇಣ ಮಹದೇವುರ ಹಾಗೂ ಪೂರ್ವ ವಲಯದಲ್ಲಿ ಕಂಟೇನ್ಮೆಂಟ್ ವಲಯಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದನ್ನು ಒಪ್ಪಿಕೊಂಡಿರುವ ಅವರು, ಈ ವಲಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅಂತರರಾಜ್ಯ ಪ್ರಯಾಣ ಮಹದೇವಪುರದಲ್ಲಿ ಹೊಸ ಕೊರೊನಾ ಪ್ರಕರಣಗಳ ಪತ್ತೆಗೆ ಕಾರಣವಾಗಿದೆ ಎಂದು ಅವರು ವಿವರಿಸಿದ್ದಾರೆ.
ಹಲವು ಐಟಿ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿದ್ದರೂ, ವಿವಿಧ ಕಾರಣಕ್ಕಾಗಿ ಅವರು ಅಲ್ಲಲ್ಲಿ ಪ್ರಯಾಣ ಕೈಗೊಳ್ಳುತ್ತಿದ್ದಾರೆ. ಇದರ ಜೊತೆಗೆ ಕಟ್ಟಡ ಕೆಲಸಗಾರರು ಹಾಗೂ ಪ್ರಯಾಣ ಮಾಡಿರುವ ವಿದ್ಯಾರ್ಥಿಗಳು ಈ ವಲಯಗಳಲ್ಲಿ ಕೊರೊನಾ ಏರಿಕೆಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಇದುವರೆಗೂ ಕಂಟೇನ್ಮೆಂಟ್ ವಲಯಗಳ ಸಂಖ್ಯೆಯನ್ನು ತಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ಈಗ ದಿನನಿತ್ಯ ಸುಮಾರು 300-350 ಹೊಸ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಪರಿಸ್ಥಿತಿ ಆತಂಕಪಡುವಂತಿಲ್ಲ. ಆದರೆ ಜಾಗರೂಕತೆ ವಹಿಸಬೇಕಿರುವುದು ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಕಂಟೇನ್ಮೆಂಟ್ ವಲಯಗಳು ಐದಕ್ಕಿಂತ ಕಡಿಮೆ ಪ್ರಕರಣಗಳನ್ನು ಹೊಂದಿವೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಬಿ.ಕೆ. ವಿಜೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಂಟೇನ್ಮೆಂಟ್ ವಲಯಗಳ ಹೆಚ್ಚಳವು ನೆರೆಯ ರಾಜ್ಯಗಳ ಜನರ ಪ್ರಯಾಣದಿಂದ ಆಗಿರಬಹುದು ಎಂದು ಹೇಳಿದ್ದಾರೆ.
ಗಣೇಶೋತ್ಸವಕ್ಕೆ ಒಪ್ಪಿಗೆ: ಕರ್ನಾಟಕದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಒಪ್ಪಿಗೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕುರಿಂತೆ ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಲಾಗಿದೆ. ಬೀದಿಗೊಂದು ವಾರ್ಡ್ ಗೊಂದು ಗಣೇಶ ಕೂರಿಸಲು ಅನುಮತಿ ನೀಡಲಾಗಿಲ್ಲ, ಮೆರವಣಿಗೆ, ಸಮಾರಂಭ, ಮನರಂಜನಾ ಕಾರ್ಯಕ್ರಮಗಳಿಗೆ ಎಂದಿನಂತೆ ಕೋವಿಡ್ 19 ಮಾರ್ಗಸೂಚಿ ಅನ್ವಯವಾಗಲಿದೆ ಎಂದು ತಿಳಿದು ಬಂದಿದೆ.
ಮೂರು ದಿನ ಮಾತ್ರ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಕೊಡಲಾಗಿದೆ. ಆದರೆ ಮೆರವಣಿಗೆ ನಡೆಸಲು ಅನುಮತಿ ಇಲ್ಲ. ಸಂಗೀತ, ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತಿಲ್ಲ. ಸಾರ್ವಜನಿಕ ಗಣೇಶೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲು ಅವಕಾಶ ನೀಡಿದರೆ ಅಲ್ಲಿ ಹೆಚ್ಚು ಜನರು ಸೇರುತ್ತಾರೆ. ಆಗ ಕೋವಿಡ್ ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಆದ್ದರಿಂದ ತಜ್ಞರ ಜೊತೆ ಚರ್ಚೆ ನಡೆಸಿದ ಬಳಿಕ ಮುಖ್ಯಮಂತ್ರಿಗಳು ಷರತ್ತು ಬದ್ಧ ಅನುಮತಿ ನೀಡಿದ್ದಾರೆ.












Click it and Unblock the Notifications