Bengaluru Corporations Polls: ಮುಂಬೈನಂತೆ ಬೆಂಗಳೂರಿನಲ್ಲಿ ಬಿಜೆಪಿ ಗೆದ್ದರೂ ಲಾಭವಿಲ್ಲ: ಕೃಷ್ಣಭಟ್ ಬರಹ
ಬೆಂಗಳೂರು: ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಯು ಅಮೋಘ ಯಶಸ್ಸು ಸಾಧಿಸಿದೆ. ಬಿಜೆಪಿಯು ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿನ ಠಾಕ್ರೆ ಆಡಳಿತದ 30 ವರ್ಷಗಳ ದಾಖಲೆಯನ್ನು ಮುರಿದಿದೆ. ಇನ್ನು ಕೆಲವೇ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಬಿಜೆಪಿ ಗೆದ್ದರೂ ಲಾಭವಿಲ್ಲ ಎನ್ನುತ್ತಾರೆ ಬರಹಗಾರ ಕೃಷ್ಣಭಟ್. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಮತ್ತು ಆಡಳಿತದ ಬಗ್ಗೆ ಕೃಷ್ಣಭಟ್ ಅವರ ಬರಹ ಇಲ್ಲಿದೆ.
ಬೆಂಗಳೂರಿನಲ್ಲಿ ಎಲ್ಲರೂ ಬಿಜೆಪಿ ಕಾರ್ಪೊರೇಟರ್ ಆಯ್ಕೆಯಾದರೂ ಬೆಂಗಳೂರಿನ ಮೇಯರ್ ಆಗೋದು ಕಾಂಗ್ರೆಸ್‌ನವರೇ. ಮೊನ್ನೆ ಮುಂಬೈ ಮುನಿಸಿಪಾಲಿಟಿ ಎಲೆಕ್ಷನ್‌ನಲ್ಲಿ ಬಿಜೆಪಿ ಗೆದ್ದು, ಶಿವಸೇನೆಯನ್ನು ಮಣ್ಣುಮುಕ್ಕಿಸಿ, ಮುಂಬೈಗೆ ಬಿಜೆಪಿಯ ಮೇಯರ್ ಆಯ್ಕೆಯಾಗ್ತಾರೆ ಅಂತ ಇಡೀ ದೇಶದ ಬಿಜೆಪಿ ನಾಯಕರು ಖುಷಿ ಪಟ್ಟಿದ್ದಾರೆ. ರಾಜ್ಯದ ಬಿಜೆಪಿ ನಾಯಕರೂ ಟ್ವೀಟು, ಕೋಟು ಎಲ್ಲ ಮಾಡಿದ್ದಾರೆ. ಬೆಂಗಳೂರಿನಲ್ಲೂ ಜಿಬಿಎ ಎಲೆಕ್ಷನ್ ಜೂನ್ ಒಳಗೆ ಮಾಡಿ ಅಂತ ಕೋರ್ಟ್ ಹೇಳಿದ್ದರಿಂದ ಇಲ್ಲೂ ತಯಾರಿ ಶುರುವಾಗಿದೆ. ಒಂದು ವೇಳೆ ಇಲ್ಲಿ ಎಲೆಕ್ಷನ್ ನಡೆದು, ಇಡೀ ಬೆಂಗಳೂರಿನಲ್ಲಿ ಬಿಜೆಪಿಯದ್ದೇ ಕಾರ್ಪೊರೇಟರ್‌ಗಳು ಆಯ್ಕೆಯಾಗುತ್ತಾರೆ ಎಂದಿಟ್ಟುಕೊಳ್ಳಿ. ಆದರೆ, ಇಡೀ ಬೆಂಗಳೂರಿನಲ್ಲಿ ಎಲ್ಲರೂ ಬಿಜೆಪಿ ಕಾರ್ಪೊರೇಟರ್‌ಗಳೇ ಆಯ್ಕೆಯಾದರೂ ಬೆಂಗಳೂರಿನ ಮೇಯರ್ ಆಗೋದು ಕಾಂಗ್ರೆಸ್‌ನವರೇ ಆಗಿರ್ತಾರೆ. ಯಾಕೆ ಗೊತ್ತಾ?

ಬೆಂಗಳೂರಿಗೆ ಸಿಎಂ ಮೇಯರ್ (ಮುಖ್ಯಸ್ಥರು) ಆಗಿರುತ್ತಾರೆ ಅಂತ ಹೊಸ ಜಿಬಿಎ ನಿಯಮ ಹೇಳುತ್ತೆ. ಅಂದರೆ, ಈಗ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಮುಖ್ಯಮಂತ್ರಿಯೇ ಇಡೀ ಬೆಂಗಳೂರಿನ ಕಾರ್ಪೊರೇಟರ್‌ಗಳಿಗೆ ಮೇಯರ್ ಆಗಿರ್ತಾರೆ! ಒಂದು ವೇಳೆ ಬಿಜೆಪಿಯೇ ಮೇಲುಗೈ ಸಾಧಿಸಿದರೆ, ಅಷ್ಟೂ ಜನ ಕಾರ್ಪೊರೇಟರ್‌ಗಳು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಎದುರು ಕೈಕಟ್ಟಿಕೊಂಡು ನಿಂತ್ಕೊಂಡಿರ್ತಾರೆ.
ಈಗ ಬೆಂಗಳೂರಿಗರ ಪರಿಸ್ಥಿತಿ ನೋಡಿ, ಒಂದು ವೇಳೆ ಕಾಂಗ್ರೆಸ್ಸೇ ಎಲ್ಲ ಕಡೆ ಆಯ್ಕೆಯಾಯಿತು ಅಂತಿಟ್ಟುಕೊಳ್ಳೋಣ... ಈಗಾಗಲೇ ತಮ್ಮದೇ ಸರ್ಕಾರವೇ ಇದ್ದರೂ ರಸ್ತೆಗೆ ಒಂದು ಡಾಂಬರು ಹಾಕಲೂ ಗತಿ ಇಲ್ಲದವರು ಇನ್ನು ಕಾರ್ಪೊರೇಟರ್ ಆಗಿ ಬಂದ ಮೇಲೆ ಇನ್ನೇನು ಕಡಿದು ಕಟ್ಟೆ ಹಾಕ್ತಾರೆ ಅಂತ ಗೊತ್ತಾಗಿದೆ. ಒಂದು ವೇಳೆ ಈ ಕಾಂಗ್ರೆಸ್ ಸರಿ ಇಲ್ಲ ಅಂತ ಬಿಜೆಪಿಯವರನ್ನು ಕಾರ್ಪೊರೇಟರ್‌ಗಳಾಗಿ ಆಯ್ಕೆ ಮಾಡಿದರೆ, "ನಮ್ಮವರನ್ನ ಸೋಲಿಸಿ, ಬಿಜೆಪಿಯವರನ್ನ ಆಯ್ಕೆ ಮಾಡಿದೀರಾ? ಮಾಡಿಸ್ತೀನಿ ತಡೀರಿ..." ಅಂತ ಸ್ವತಃ ಮೇಯರ್ ಸಹ ಆಗಿರುವ ಕಾಂಗ್ರೆಸ್‌ನ ಸಿಎಂ ಒಂದು ರೂಪಾಯಿಯೂ ಅನುದಾನ ಕೊಡದೇ ಬೆಂಗಳೂರನ್ನು ಇನ್ನಷ್ಟು ಹಳ್ಳ ಹಿಡಿಸಿ, ನಿಮ್ಮ ಬಿಜೆಪಿ ಕಾರ್ಪೊರೇಟರ್ ಕೆಲಸ ಮಾಡ್ತಿಲ್ಲ ಅಂತ ನರೇಟಿವ್ ಕಟ್ತಾರೆ.
ಇಂಥಾ ಅಸಂಬದ್ಧ ನಿಯಮ ಮಾಡಿದಾಗ ವಿರೋಧವನ್ನೂ ಮಾಡಿಲ್ಲದ ಬಿಜೆಪಿಯವರಿಗೆ ಈಗ ಜಿಬಿಎ ಚುನಾವಣೆ ಬಂದಿದೆ ಅಂತಾದರೂ ಗೊತ್ತಾಗಿದೆಯೋ ಇಲ್ವೋ? ಮುಂಬೈ ಮಹಾನಗರದ ಚುನಾವಣೆಯಲ್ಲಿ ಗೆದ್ದ ಅಮಲಿನಲ್ಲೇ ಇನ್ನೂ ಇದ್ದಾರಾ. ಅದರಿಂದ ಹೊರಗೆ ಬಂದಿದ್ದಾರಾ. ಅಲ್ಲಿಗೆ, ಈ ಬೆಂಗಳೂರಿನ ಜನರಿಗೆ ಕಿತ್ತು ಹೋದ ರಸ್ತೆ, ಅವ್ಯವಸ್ಥೆಯಿಂದ ಸದ್ಯಕ್ಕೆ ಮುಕ್ತಿ ಸಿಗುವ ಯಾವ ಲಕ್ಷಣವೂ ಇಲ್ಲ.












Click it and Unblock the Notifications