Property: ಬೆಂಗಳೂರಲ್ಲಿ 372 ಮಾಲೀಕರಿಗೆ ನೋಟಿಸ್: 709 ಖಾಲಿ ಸೈಟ್ ಕ್ಲೀನ್
ಬೆಂಗಳೂರು: ರಾಜಧಾನಿಯಲ್ಲಿ ಪಾದಚಾರಿ ಒತ್ತುವರಿ ತೆರವನ್ನು ಒಂದು ತಾರ್ಕಿಕ ಅಂತ್ಯದವರೆಗೂ ಕೊಂಡೊಯ್ದು, ಕಟ್ಟುನಿಟ್ಟಿನ ಕ್ರಮ ಜಗುರಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಇದೀಗ ಖಾಲಿ ನಿವೇಶನ ಸ್ವಚ್ಛತೆಯಲ್ಲಿ ಮಹತ್ವ ಹಂತ ತಲುಪಿದೆ. ಕಳೆದ ಎರಡೇ ತಿಂಗಳಲ್ಲಿ ನೂರಾರು ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಜೊತೆಗೆ ಅನೇಕ ಸೈಟ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ 'ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ'ದಡಿ ಕಳೆದ ಎರಡು ತಿಂಗಳಿಂದ ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ 709 ನಿವೇಶನಗಳು ಸ್ವಚ್ಛ ಮಾಡಲಾಗಿದೆ. ಒಟ್ಟು 372 ಖಾಲಿ ನಿವೇಶನಗಳಿಗೆ ಸ್ವಚ್ಛತೆಗಾಗಿ ನೋಟಿಸ್ ಜಾರಿಎಂದು ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ತಿಳಿಸಿದರು.

ನೈರ್ಮಲ್ಯ, ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ
ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಕಸ ಹಾಗೂ ತ್ಯಾಜ್ಯ ಸಂಗ್ರಹವಾಗಿ ಬ್ಲಾಕ್ಸ್ಪಾಟ್ಗಳಾಗಿ ಪರಿವರ್ತನೆಗೊಳ್ಳುವುದನ್ನು ತಪ್ಪಿಸುವುದು ಪಾಲಿಕೆಯ ಪ್ರಮುಖ ಆದ್ಯತೆಯಾಗಿದೆ. ಇಂತಹ ಸ್ಥಳಗಳಲ್ಲಿ ಸೊಳ್ಳೆ, ವಿಷಜಂತುಗಳು ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಡೆಯಲು ನಿವೇಶನಗಳ ಮಾಲೀಕರಿಗೆ ಸ್ವಚ್ಛತೆಗೆ ಸೂಚನೆ ನೀಡಲಾಗುತ್ತಿದೆ. ಸ್ವಚ್ಛತೆ ಕಾಪಾಡದ ಮಾಲೀಕರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.
1,242 ಖಾಲಿ ನಿವೇಶನಗಳಲ್ಲಿ 709 ಸೈಟ್ ಸ್ವಚ್ಛ
ಕಳೆದ ಆಗಸ್ಟ್ 01 ರಿಂದ ಇಲ್ಲಿಯ ವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,242 ಅಸ್ವಚ್ಚ ಖಾಲಿ ನಿವೇಶನಗಳನ್ನು ಗುರುತಿಸಲಾಗಿತ್ತು. ಅಭಿಯಾನದ ಅಂಗವಾಗಿ ನಿವೇಶನ ಮಾಲೀಕರಿಂದಲೇ 668 ನಿವೇಶನಗಳನ್ನು ಸ್ವಚ್ಛಗೊಳಿಸಲಾಗಿದೆ. ಪಾಲಿಕೆಯ ವತಿಯಿಂದ 41 ನಿವೇಶನಗಳನ್ನು ಈವರೆಗೆ ಸ್ವಚ್ಛಗೊಳಿಸಲಾಗಿದೆ (ಒಟ್ಟಾರೆ 709 ಸ್ವಚ್ಛ). ಉಳಿದ 533 ನಿವೇಶನಗಳ ಸ್ವಚ್ಛತಾ ಕಾರ್ಯ ಬಾಕಿ ಇದೆ ಎಂದು ಅವರು ವಿವರಿಸಿದರು.
ನಿಯಮ ಉಲ್ಲಂಘಿಸಿದ 372 ಮಾಲೀಕರಿಗೆ ನೋಟಿಸ್
ಖಾಲಿ ನಿವೇಶನಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ 533 ಖಾಲಿ ನಿವೇಶನಗಳ ಮಾಲೀಕರ ವಿರುದ್ಧ ಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಈವರೆಗೆ ಒಟ್ಟು 372 ನಿವೇಶನ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ವಿವಿಧ ವಿಭಾಗಗಳ ಪ್ರಗತಿ ವಿವರ
* ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಟ್ಟು 518 ನಿವೇಶನಗಳನ್ನು ಗುರುತಿಸಲಾಗಿದೆ. 305 ನಿವೇಶನಗಳನ್ನು ಮಾಲೀಕರು ಹಾಗೂ 13 ನಿವೇಶನಗಳನ್ನು ಪಾಲಿಕೆ ಸ್ವಚ್ಛಗೊಳಿಸಿದೆ. ಬಾಕಿ ಉಳಿದಿರುವ 200 ನಿವೇಶನಗಳ ಸ್ವಚ್ಛತೆಗೆ ಸೂಚಿಸಲಾಗಿದ್ದು, 93 ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
* ಬೊಮ್ಮನಹಳ್ಳಿ ವಿಭಾಗದಲ್ಲಿ ಒಟ್ಟು 498 ನಿವೇಶನಗಳಿವೆ. ಅದರಲ್ಲಿ 276 ನಿವೇಶನಗಳು ಮಾಲೀಕರಿಂದ ಹಾಗೂ 1 ನಿವೇಶನ ಪಾಲಿಕೆಯಿಂದ ಸ್ವಚ್ಛಗೊಂಡಿವೆ. ಬಾಕಿ 221 ನಿವೇಶನಗಳಿದ್ದು, ನಿಯಮ ಉಲ್ಲಂಘಿಸಿದ 140 ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
* ಬಿಟಿಎಂ ವಿಭಾಗದಲ್ಲಿ ಒಟ್ಟು 111 ನಿವೇಶನಗಳ ಪೈಕಿ ಮಾಲೀಕರಿಂದ 23 ಮತ್ತು ಪಾಲಿಕೆಯಿಂದ 5 ನಿವೇಶನಗಳು ಸ್ವಚ್ಛವಾಗಿವೆ. ಬಾಕಿ ಉಳಿದಿರುವ 83 ನಿವೇಶನಗಳಿಗೆ ಸಂಬಂಧಿಸಿದಂತೆ 62 ನೋಟಿಸ್ ಜಾರಿಗೊಳಿಸಲಾಗುತ್ತಿದೆ.
* ಪದ್ಮನಾಭನಗರ ವಿಭಾಗದಲ್ಲಿ ಒಟ್ಟು 62 ನಿವೇಶನಗಳ ಪೈಕಿ 38 ನಿವೇಶನಗಳನ್ನು ಮಾಲೀಕರು, 18 ನಿವೇಶನಗಳನ್ನು ಪಾಲಿಕೆ ಸಿಬ್ಬಂದಿ ಸ್ವಚ್ಛಗೊಳಿಸಿದ್ದು, ಕೇವಲ 6 ನಿವೇಶನಗಳು ಬಾಕಿ ಇವೆ. ಇಲ್ಲಿ 35 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
* ಇನ್ನೂ ಜಯನಗರ ವಿಭಾಗದಲ್ಲಿ ಒಟ್ಟು 53 ನಿವೇಶನಗಳ ಪೈಕಿ ಮಾಲೀಕರಿಂದ 26 ಹಾಗೂ ಪಾಲಿಕೆಯಿಂದ 4 ನಿವೇಶನಗಳು ಸ್ವಚ್ಛವಾಗಿವೆ. 23 ನಿವೇಶನಗಳು ಬಾಕಿ ಉಳಿದಿವೆ. ಈ ಸಂಬಂಧ 42 ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ನಿವೇಶನ ಮಾಲೀಕರಲ್ಲಿ ಆಯುಕ್ತರ ಮನವಿ
ಖಾಲಿ ನಿವೇಶನಗಳ ಮಾಲೀಕರು ತಮ್ಮ ಜಾಗದಲ್ಲಿ ಕಸ-ತ್ಯಾಜ್ಯ ಬೀಳದಂತೆ ಸೂಕ್ತ ತಂತಿ ಬೇಲಿ ಅಳವಡಿಸಿ, ನಿರಂತರವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ, ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಪಾಲಿಕೆಯೊಂದಿಗೆ ಕೈಜೋಡಿಸಬೇಕೆಂದು ಆಯುಕ್ತರಾದ ಕೆ. ಎನ್. ರಮೇಶ್ ಮನವಿ ಮಾಡಿದ್ದಾರೆ.


Click it and Unblock the Notifications
