Bengaluru Weather: ಕಳೆದ 5 ವರ್ಷಗಳಲ್ಲಿ ಬೆಂಗಳೂರು ನಗರ ಇಂತಹ ದಿನ ಕಂಡಿರಲಿಲ್ಲ!
ಬೆಂಗಳೂರು, ಮಾರ್ಚ್ 30: ರಾಜ್ಯ ರಾಜಧಾನಿಯಲ್ಲಿ ಮನೆಯಿಂದ ಹೊರ ಬರಲು ಜನ ಕಷ್ಟಪಡುವಂತಾಗಿದೆ. ಈ ಬಿಸಿಲಿನ ಝಳಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಮಳೆಗಾಗಿ ಆಕಾಶದ ಕಡೆಗೆ ಮುಖ ಮಾಡಿ ನಿಂತಿದ್ದಾರೆ. ಇದೇ ವೇಳೆ ಉಷ್ಣಾಂಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಬೆಂಗಳೂರು ನಗರವು ಅತ್ಯಂತ ಬಿಸಿ ದಿನವನ್ನು (warmest March day) ಕಂಡಿದೆ. ಅದೇ ಮಾರ್ಚ್ 29.
ಬೆಂಗಳೂರು ನಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಮಾರ್ಚ್ ದಿನದಲ್ಲಿ ಅತ್ಯಂತ ಬೆಚ್ಚಗಿನ ತಾಪಮಾನವನ್ನು ದಾಖಲಿಸಿದೆ. ಬರೋಬ್ಬರಿ 36.4 ಡಿಗ್ರಿ ಸೆಲ್ಸಿಯಸ್ ದಾಖಲಿಸುವ ಮೂಲಕ ಮಾರ್ಚ್ 29ರ ಶುಕ್ರವಾರ ಮತ್ತೊಂದು ಹವಾಮಾನ ದಾಖಲೆಯನ್ನು ಮುರಿದಿದೆ. ಮಾರ್ಚ್ ಕೊನೆಯ ವಾರದಲ್ಲಿ ಸಾಮಾನ್ಯ ಸರಾಸರಿ ನಿರೀಕ್ಷಿತ ತಾಪಮಾನವು 34.2 ಡಿಗ್ರಿ ಸೆಲ್ಸಿಯಸ್ ಆಗಿತ್ತು.

ಮಾರ್ಚ್ ತಿಂಗಳಿನಲ್ಲಿ ಬೆಂಗಳೂರು ಕಂಡ ಅತ್ಯಧಿಕ ಗರಿಷ್ಠ ತಾಪಮಾನ 37.3 ಡಿಗ್ರಿ ಸೆಲ್ಸಿಯಸ್ ಆಗಿದೆ. ಇಷ್ಟು ತಾಪಮಾನ ದಾಖಲಾಗಿದ್ದು 1996 ರಲ್ಲಿ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಮಾರ್ಚ್ 29ರ ಶುಕ್ರವಾರ 36.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವು ಒಂದು ದಶಕದಲ್ಲಿ ಮೂರನೇ ಅತಿ ಹೆಚ್ಚು ಮತ್ತು ಕಳೆದ 15 ವರ್ಷಗಳಲ್ಲಿ ನಾಲ್ಕನೇ ಅತಿ ತಾಪಮಾನ ದಾಖಲಾದ ದಿನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ.
ಬೆಂಗಳೂರಿನಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮಾರ್ಚ್ ಕೊನೆಯ ವಾರದಲ್ಲಿ ನಿರೀಕ್ಷೆಯಂತೆ ಬೆಂಗಳೂರಿನಲ್ಲಿ ಅಲ್ಪ ಪ್ರಮಾಣದಲ್ಲಿಯೂ ಕೂಡ ಮಳೆಯಾಗಲಿಲ್ಲ. ಇದಕ್ಕೆ ಕಾರಣ ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿರುವುದು. ತಮಿಳುನಾಡು ಮತ್ತು ಮಹಾರಾಷ್ಟ್ರದ ನಡುವೆ ಗಾಳಿ ಸ್ಥಗಿತಗೊಂಡಿದೆ ಎಂದು ಐಎಂಡಿಯ ಹಿರಿಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನೂ ಹೆಚ್ಚಾಗಲಿದೆ ತಾಪಮಾನ!
ಮುಂದಿನ ಐದು ದಿನಗಳಲ್ಲಿ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಐಎಂಡಿ ಬುಧವಾರ ತಿಳಿಸಿದೆ. ಇದರ ಜೊತೆಗೆ ಏಪ್ರಿಲ್ ಎರಡನೇ ವಾರದಿಂದ ಬೆಂಗಳೂರಿನಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಕೂಡ ಸಂಸ್ಥೆ ನೀಡಿದೆ. ಬೆಂಗಳೂರು ಏಪ್ರಿಲ್‌ನಲ್ಲಿ ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆಯಾಗಬಹುದು ಎಂದು ನೆಮ್ಮದಿಯ ಸುದ್ದಿ ನೀಡಿದೆ.












Click it and Unblock the Notifications