Bengaluru Today Weather: ನಗರಕ್ಕೆ ಬಿರುಗಾಳಿ ಸಹಿತ ಮಳೆ: 2 ದಿನ ಹಳದಿ ಎಚ್ಚರಿಕೆ
ಬೆಂಗಳೂರು, ಮೇ 31: ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಸದ್ಯಕ್ಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಅಲ್ಲದೆ ಮುಂದಿನ 48 ಗಂಟೆಗಳ ಕಾಲ ನಗರಕ್ಕೆ ಬಿರುಗಾಳಿ ಸಮೇತ ಧಾರಾಕಾರ ಮಳೆ ಬರಲಿದ್ದು, ಈ ಸಂಬಂಧ ಹವಾಮಾನ ಇಲಾಖೆಯು ಎರಡು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೇ 31 ಮತ್ತು ಜೂನ್ 01ರಂದು ಮಳೆಯಾರ್ಭಟ ಹೆಚ್ಚಿರಲಿದೆ. ಪ್ರತಿ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಇದರೊಂದಿಗೆ ಆಗಮಿಸುವ ಮಳೆ ಧಾರಾಕಾರವಾಗಿ ಸುರಿಯಲಿದೆ.

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಸಂಜೆ ನಂತರ ವ್ಯಾಪಕ ಮಳೆ ನಿರೀಕ್ಷೆ ಇದೆ. ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ, ಹಲವೆಡೆ ಸಾಧಾರಣದಿಂದ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32 ಮತ್ತು 22 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ.
ಭಾನುವಾರದಿಂದ ಎರಡು ದಿನ ಸಂಜೆಯಿಂದ ತಡರಾತ್ರಿವರೆಗೆ ಸುರಿದ ಮಳೆಗೆ ನಗರದ ಅಕ್ಷರಶಃ ನಲುಗಿದೆ. ಗಂಟೆಗಳ ಕಾಲದ ಬಂದ ಮಳೆಗೆ ಮರಗಳು ಧರೆಗುರುಳಿದರೆ, ಇತ್ತ ರಸ್ತೆ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ತುಂಬೆಲ್ಲ ನೀರು ಉಕ್ಕಿ ಹರಿದು ಸಮಸ್ಯೆ ಉಂಟಾಗಿದೆ.

ಅದೇ ರೀತಿ ಮುಂದಿನ ಎರಡು ದಿನವೂ ಬೆಂಗಳೂರಿನ ಬಹುತೇಕ ಎಲ್ಲ ಕಡೆ ಮಳೆ ಬೀಳಲಿದೆ. ಇದರಿಂದ ಇನ್ನಷ್ಟು ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ. ತಗ್ಗು ಪ್ರದೇಶದ ಜನರು ಸಂಕಷ್ಟ ಎದುರಿಸಲಿದ್ದಾರೆ. ಜನರು, ಸವಾರರು ಮರಗಳ ಕೆಳಗೆ, ಅಂಡರ್‌ಪಾಸ್‌ಗಳಲ್ಲಿ ನಿಲ್ಲದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ ಇತರ ಜಿಲ್ಲೆಗಳಲ್ಲೂ ಭಾರೀ ಮಳೆ
ಬೆಂಗಳೂರು ನಗರ ಜಿಲ್ಲೆ ಮಾತ್ರವಲ್ಲದೇ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆ ಮತ್ತು ಕರಾವಳಿಯ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಜಿಲ್ಲೆಗಳಿಗೆ ಭಾರೀ ಮಳೆ ಪ್ರಯುಕ್ತ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ಇದರೊಂದಿಗೆ ಒಳನಾಡಿನ ಗದಗ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ ಮತ್ತು ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ಹಾಸನ, ತುಮಕೂರು ಜಿಲ್ಲೆಗಳಾದ್ಯಂತ ಅಲ್ಲಲ್ಲಿ ಚದುರಿದಂತೆ ಕೆಲ ಹೊತ್ತು ಮಳೆ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications