11 ಆರ್‌ಸಿಬಿ ಅಭಿಮಾನಿಗಳ ಸಾವು ಪ್ರಕರಣ: ನೈತಿಕ ಹೊಣೆ ಹೊತ್ತು ಕೆಎಸ್ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ
ಬೆಂಗಳೂರು, ಜೂನ್ 7: 18ನೇ ಸೀಸನ್‌ನಲ್ಲಿ ಮೊದಲ ಬಾರಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿತು. ಈ ಹಿನ್ನೆಲೆ ಮಾರನೇ ದಿನ ಬುಧವಾರ ಬೆಂಗಳೂರಿನಲ್ಲಿ ವಿಜಯೋತ್ಸವ ಆಯೋಜನೆ ಮಾಡಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಸಬಂಧ ಇದೀಗ ಪ್ರಕರಣದ ನೈತಿಕ ಹೊಣೆ ಹೊತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಎ.ಶಂಕರ್ ಮತ್ತು ಖಜಾಂಚಿ ಇ.ಎಸ್.ಜೈರಾಮ್ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಕಾಲ್ತುಳಿತ ದುರಂತ ಸಂಬಂಧಿಸಿದಂತೆ ಈಗಾಗಲೇ ಕೆಲ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಸಿಎಂ ರಾಜಕೀಯ ಕಾರ್ಯದರ್ಶಿಗೂ ಗೇಟ್ ಪಾಸ್ ನೀಡಲಾಗಿದೆ. ಇದೀಗ ನೈತಿಕ ಹೊಣೆ ಹೊತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಎ.ಶಂಕರ್ ಮತ್ತು ಖಜಾಂಚಿ ಇ.ಎಸ್.ಜೈರಾಮ್ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ತಮ್ಮ ಪಾತ್ರ ಸೀಮಿತ ಆಗಿದ್ದರೂ ಕೂಡ ನೈತಿಕ ಜವಾಬ್ದಾರಿ ಹೊತ್ತು ರಾಜಿನಾಮೆ ನೀಡುತ್ತಿರುವುದಾಗಿ ಇಬ್ಬರೂ ಸಹ ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಪತ್ರ ಕಳುಹಿಸಿದ್ದಾರೆ. ಬುಧವಾರ ನಡೆದ ದುರಂತದಲ್ಲಿ ನಮ್ಮ ಪಾತ್ರವು ತುಂಬಾ ಸೀಮಿತ ಆಗಿದೆ. ಆದರೂ ಕೂಡ ನೈತಿಕ ಹೊಣೆ ಹೊತ್ತು ಜೂನ್ 6ರಂದು ರಾತ್ರಿಯಿಂದಲೇ ತಾವು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇವೆ ಎಂದು ಎ.ಶಂಕರ್ ಮತ್ತು ಖಜಾಂಚಿ ಇ.ಎಸ್.ಜೈರಾಮ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪದಾಧಿಕಾರಿಗಳ ಆಕ್ರೋಶದ ಹಿನ್ನೆಲೆ ಶಂಕರ್, ಜೈರಾಮ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಪದಾಧಿಕಾರಿಗಳ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದಾರೆ. ಹೈಕೋರ್ಟ್ ರಿಲೀಫ್ ನೀಡಿಡ ಬಳಿಕ ಬ್ರಿಜೇಶ್ ಪಾಟೀಲ್ ಸಭೆ ನಡೆಸಿ ರಾಜೀನಾಮೆಗೆ ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ತೆರವುಗೊಂಡ ಸ್ಥಾನಕ್ಕೆ ತಾತ್ಕಲಿಕವಾಗಿ ಜಂಟಿ ಕಾರ್ಯದರ್ಶಿ ಶಾವೀರ್ ತಾರಪೂರ್ ಅವರನ್ನು ನೇಮಕ ಮಾಡಲಾಗಿದೆ.
ಈ ಸಂಬಂಧ ಆರ್‌ಸಿಬಿ ತಂಡದ ಆಡಳಿತ ಮಂಡಳಿಯ ನಾಲ್ವರು ಅಧಿಕಾರಿಗಳನ್ನು ಶುಕ್ರವಾರ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಇದರ ಬೆನ್ನಲ್ಲೇ ಸಂಸ್ಥೆಯು ಹೈಕೋರ್ಟ್‌ಗೆ ರಿಟ್ ಅರ್ಜಿಯನ್ನು ಸಲ್ಲಿಕೆ ಮಾಡಿದ್ದು, ಸರ್ಕಾರದ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿತ್ತು.












Click it and Unblock the Notifications