Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ದಿನಾಂಕ ರಿವೀಲ್: ವಾಹನ ಸವಾರರಿಗೆ ಬಿಗ್ ಗುಡ್ ನ್ಯೂಸ್
Bengaluru-Chennai Expressway: ಕರ್ನಾಟಕದಲ್ಲಿ ಹಾದುಹೋಗುವ ಬಹುನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಕೂಡ ಒಂದಾಗಿದೆ. ಈಗಾಗಲೇ ಯಾವಗಲೋ ಇದರ ಉದ್ಘಾಟನೆ ಆಗಬೇಕಿತ್ತು. ಆದರೆ ಕಾರಣಾಂತಗಳಿಂದ ದಿನಾಂಕ ಮುಂದೂಡಿಕೆ ಆಗುತ್ತಲೇ ಇತ್ತು. ಆದರೆ, ಇದೀಗ ಕೊನೆಗೂ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಾರ್ಪಣೆ ದಿನಾಂಕವನ್ನು ಫೈನಲ್ ಮಾಡಿದ್ದಾರೆ. ಹಾಗೆಯೇ ವಿಳಂಬಕ್ಕೆ ಕಾರಣ ಏನು ಹಾಗೂ ಯಾವ ಭಾಗದಲ್ಲಿ ಎಷ್ಟು ವೆಚ್ಚ ಆಗಿದೆ ಎನ್ನುವ ಮಹತ್ವದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಕರ್ನಾಟಕ ಭಾಗದಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕಾಮಗಾರಿ ಪೂರ್ಣಗೊಂಡಿದ್ದು, ವಾಹನಗಳು ಕೂಡ ಸಂಚಾರ ಮಾಡುತ್ತಿವೆ. ಅಲ್ಲದೆ, ಈಗಾಗಲೇ ಟೋಲ್ ಶುಲ್ಕಗಳನ್ನು ಕೂಡ ನಿಗದಿಪಡಿಸಲಾಗಿದ್ದು, ಹೆದ್ದಾರಿ ಸಚಿವಾಲಯ ಒಪ್ಪಿಗೆ ಸೂಚಿಸಿದ ಬಳಿಕ ಇದು ಜಾರಿ ಆಗಲಿದೆ ಎನ್ನುವ ಮಾಹಿತಿ ಇದೆ. ಇನ್ನೂ ಈ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ದಿನಾಂಕ ಮುಂದೂಡಿಕೆಗೆ ಪ್ರಮುಖ ಕಾರಣಗಳಿವೆ.

ಹೌದು.. ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ತಡವಾದ ಕಾರಣ ಕಾಮಗಾರಿ ವಿಳಂಬ ಆಗಿದ್ದು, ಇದರಿಂದ ಉದ್ಘಾಟನೆ ದಿನಾಂಕ ಕೂಡ ಮುಂದೂಡಿಕೆ ಆಗುತ್ತಲಿತ್ತು. ಆದರೆ, ಇದೀಗ ಇದು ಯಾವಾಗ ಪೂರ್ಣಗೊಳ್ಳಲಿದೆ ಹಾಗೂ ಲೋಕಾರ್ಪಣೆ ಯಾವಾಗ ಎನ್ನುವ ಬಿಗ್ ಅಪ್ಡೇಟ್ ಅನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನೀಡಿದ್ದಾರೆ.
ಭೂಸ್ವಾಧೀನ ವಿಳಂಬ ಸೇರಿದಂತೆ ಹಲವು ಕಾರಣಗಳಿಂದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಲೋಕಸಭೆಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಕೇಳಿದ ಪ್ರಶ್ನೆಗೆ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಈ ಮೂಲಕ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಈ ಎಕ್ಸ್‌ಪ್ರೆಸ್ ವೇ ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಭಾಗ ಆಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಎರಡು ನಗರಗಳ ನಡುವಿನ ಪ್ರಯಾಣ ಸಮಯ ಎರಡೂವರೆ ಗಂಟೆಗಳಿಗಳಿಗೆ ಇಳಿಕೆ ಆಗಲಿದೆ. 262.4 ಕಿಲೋ ಮೀಟರ್ ಉದ್ದದ ಈ ಎಕ್ಸ್‌ಪ್ರೆಸ್ ವೇಗೆ 15,188 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದೀಗ ನಾಲ್ಕು ಪ್ಯಾಕೇಜ್‌ಗಳ ಕಾಮಗಾರಿ ಮುಗಿದಿದೆ. ಎಲ್ಲಾ ಪ್ಯಾಕೇಜ್‌ಗಳ ಕಾಮಗಾರಿಗಳು 2026ಕ್ಕೆ ಮುಕ್ತಾಯ ಆಗಲಿವೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಭಾಗದ ವಿವರ: ಕರ್ನಾಟಕ ಭಾಗದಲ್ಲಿ ಕಾಮಗಾರಿ ಸಂಪೂರ್ಣವಾಗಿ ಕಾಮಗಾರಿ ಮುಕ್ತಾಯವಾಗಿದೆ. ಬೆಂಗಳೂರು-ಮಾಲೂರು ಭಾಗದ ಕಾಮಗಾರಿಗೆ 2,761 ಕೋಟಿ ರೂಪಾಯಿ, ಮಾಲೂರು-ಬಂಗಾರ ಪೇಟೆ ಭಾಗದ ಕಾಮಗಾರಿಗೆ 1,496 ಕೋಟಿ ರೂಪಾಯಿ, ಪ್ಯಾಕೇಜ್ -3ಗೆ 784.22 ಕೋಟಿ ರೂಪಾಯಿ ವೆಚ್ಚ ಆಗಿದೆ.
ಕರ್ನಾಟಕದಲ್ಲಿ ಮೂರು ಹಂತಗಳಲ್ಲಿ ನಿರ್ಮಾಣ
* ಹೊಸಕೋಟೆ-ಮಾಲೂರು: 27.1 ಕಿಲೋ ಮೀಟರ್
* ಮಾಲೂರು-ಬಂಗಾರಪೇಟೆ: 27.1 ಕಿಲೋ ಮೀಟರ್
* ಬಂಗಾರಪೇಟೆ-ಬೇತಮಂಗಲ: 17.5 ಕಿಲೋ ಮೀಟರ್
ಆಂಧ್ರಪ್ರದೇಶ ಭಾಗದ ವಿರವ: ಆಂಧ್ರಪ್ರದೇಶದ ಬೈರೆಡ್ಡಿಪಲ್ಲಿ-ಬಂಗಾರುಪಾಲೆಂ ಭಾಗದಲ್ಲಿ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇದುವರೆಗೂ 2,171 ಕೋಟಿ ರೂಪಾಯಿ ವೆಚ್ಚ ಆಗಿದೆ. ಬೇತಮಂಗಲ-ಬೈರೆಡ್ಡಿಪಲ್ಲಿ ಭಾಗದಲ್ಲಿ ಶೇ.90ರಷ್ಟು ಕಾಮಗಾರಿ ಮುಗಿದಿದ್ದು, 1,306 ಕೋಟಿ ರೂಪಾಯಿ ವೆಚ್ಚ ಆಗಿದೆ. ಬಂಗಾರು ಪಾಲೆಂ-ಗುಡಿಪಾಲ ಭಾಗದಲ್ಲಿ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಿದ್ದು, ಇದಕ್ಕೆ 1,288 ಕೋಟಿ ರೂಪಾಯಿ ವೆಚ್ಚವಾಗಿದೆ.
ತಮಿಳುನಾಡು ಭಾಗದ ಕಾಮಗಾರಿ ವಿವರ: ತಮಿಳುನಾಡಿನ ಗುಡಿಪಾಲ-ವಾಲಾಜಪೇಟೆ ಭಾಗದಲ್ಲಿ ಶೇ.88ರಷ್ಟು ಕಾಮಗಾರಿ ಮುಗಿದಿದ್ದು, ಇದುವರೆಗೂ 1,028 ಕೋಟಿ ರೂಪಾಯಿ ವೆಚ್ಚ ಆಗಿದೆ. ವಾಲಾಜಪೇಟೆ - ಅರಕ್ಕೋಣಂ ಭಾಗದಲ್ಲಿ ಶೇ.91ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 843 ಕೋಟಿ ರೂಪಾಯಿ ವೆಚ್ಚ ಆಗಿದೆ. ಅಣಕ್ಕೋಣಂ-ಕಾಂಚಿಪುರಂ ಭಾಗದಲ್ಲಿ ಶೇ.53.6ರಷ್ಟು ಕಾಮಗಾರಿ ಮುಗಿದಿದ್ದು, 1,155 ಕೋಟಿ ರೂಪಾಯಿ ವೆಚ್ಚ ಆಗಿದೆ. ಕಾಂಚಿಪುರಂ-ಪೆರಂಬದೂರು ಭಾಗದಲ್ಲಿ ಶೇ.79ರಷ್ಟು ಕಾಮಗಾರಿ ಮುಗಿದಿದ್ದು, 2,948 ಕೋಟಿ ರೂಪಾಯಿ ವೆಚ್ಚ ಆಗಿದೆ ಎಂದು ತಿಳಿದುಬಂದಿದೆ.
ದೇಶದ ಪ್ರಮುಖ ಎಕ್ಸ್‌ಪ್ರೆಸ್ ವೇಗಳಲ್ಲಿ ಇದು ಒಂದಾಗಿದೆ. ಈ ಹೆದ್ದಾರಿಯು ಕರ್ನಾಟಕ ಭಾಗದಲ್ಲಿ 71 ಕಿಲೋ ಮೀಟರ್, ತಮಿನಾಡು 106 ಕಿಲೋ ಮೀಟರ್, ಆಂಧ್ರ ಪ್ರದೇಶದಲ್ಲಿ 85 ಕಿಲೋ ಮೀಟರ್ ಹಾದುಹೋಗಿದೆ. 8 ಪಥದ ಈ ಎಕ್ಸ್‌ಪ್ರೆಸ್ ವೇ ಇದಾಗಿದ್ದು, ಇದಕ್ಕೆ 2,650 ಹೆಕ್ಟೇರ್ ಭೂಸ್ವಾಧಿನ ಮಾಡಿಕೊಳ್ಳಲಾಗಿದೆ. ಇನ್ನು ಇಲ್ಲಿನ ಭೂಮಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಅಂತೂ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದುಪ್ಪಟ್ಟಾಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಈ ಭಾಗಗಳಲ್ಲಿ ಹೂಡಿಕೆದಾರರು ಹೂಡಿಕೆ ಮಾಡಲು ಸದರಿಯಲ್ಲಿ ಬರುತ್ತಲಿದ್ದಾರೆ.












Click it and Unblock the Notifications