Cantonment Commercial Project: ಕಂಟೋನ್ಮೆಂಟ್ ಬಳಿ ರೈಲ್ವೆ ಯೋಜನೆಗೆ ಭಾರೀ ವಿರೋಧ, ಕಾರಣವೇನು?
ಬೆಂಗಳೂರಿನ ಐತಿಹಾಸಿಕ ದಂಡು (ಕಂಟೋನ್ಮೆಂಟ್) ಪ್ರದೇಶದಲ್ಲಿ ರೈಲ್ವೆ ಇಲಾಖೆಯು ವಾಣಿಜ್ಯ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಮತ್ತೊಂದೆಡೆ ಈ ಯೋಜನೆಗೆ ಸ್ಥಳೀಯರು ಹಾಗೂ ಬೆಂಗಳೂರಿಗರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆಗಾಗಿ 368 ಮರಗಳನ್ನು ಕಡಿಯಲು ನಿರ್ಧರಿಸಲಾಗಿದ್ದು, ಅವುಗಳಲ್ಲಿ ಹಲವು ಮರಗಳು ಶತಮಾನಕ್ಕೂ ಹಳೆಯದು ಎನ್ನಲಾಗಿದೆ. ಹೀಗಾಗಿ ಉದ್ಯಾನನಗರಿಗೆ ಇಂತಹ ಮಾರಕವಾದ ಯೋಜನೆ ಬೇಡ ಎಂದು ವಿರೋಧದ ಧ್ವನಿ ಎತ್ತಿದ್ದಾರೆ.
ವಸಂತ ನಗರದಲ್ಲಿರುವ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ ಪೀಪಲ್, ರಬ್ಬರ್ ಮತ್ತು ಕ್ರಿಸ್‌ಮಸ್ ಮರಗಳು ಸೇರಿದಂತೆ ವಿಶೇಷವಾದ ಮರಗಳಿವೆ. ಇವುಗಳಲ್ಲಿ ಹಲವು ಸುಮಾರು ನೂರು ವರ್ಷಕ್ಕಿಂತ ಹಳೆಯವು ಎನ್ನಲಾಗಿದೆ. ರೈಲ್ವೆ ಸಚಿವಾಲಯದ ಅಡಿಯಲ್ಲಿರುವ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರ (ಆರ್‌ಎಲ್‌ಡಿಎ) ಈ ಯೋಜನೆ ಪ್ರಸ್ತಾಪಿಸಿದೆ. ಇದಕ್ಕೆ ಆಕ್ಷೇಪಣೆಗಳನ್ನು ಆಹ್ವಾನಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅರಣ್ಯ ವಿಭಾಗವು ಸಾರ್ವಜನಿಕ ನೋಟಿಸ್ ಜಾರಿ ಮಾಡಿದೆ. ಆರ್‌ಎಲ್‌ಡಿಎಯ ಜಂಟಿ ಜನರಲ್ ಮ್ಯಾನೇಜರ್ ಈ ಮರ ಕಡಿಯಲು ಅರ್ಜಿ ಸಲ್ಲಿಸಿದ್ದು, ಈ ಯೋಜನೆ ಮುಂದುವರಿಸಲು ಅನುಮತಿ ಕೋರಿದ್ದಾರೆ ಎಂದು ವರದಿಯಾಗಿದೆ.

ಸಾರ್ವಜನಿಕರಿಗೆ ಈ ಪ್ರಸ್ತಾವನೆಯ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು, ಸಲಹೆಗಳನ್ನು ನೀಡಲು ಅಥವಾ ಪ್ರತಿಕ್ರಿಯೆ ಹಂಚಿಕೊಳ್ಳಲು ಸುಮಾರು 10 ದಿನಗಳ ಕಾಲಾವಕಾಶವಿದೆ. ಆಕ್ಷೇಪಣೆಗಳ ಪ್ರಮಾಣ ಮತ್ತು ಸ್ವರೂಪವನ್ನು ಆಧರಿಸಿ, ಅರಣ್ಯ ವಿಭಾಗವು ರೈಲ್ವೆ ಇಲಾಖೆಯೊಂದಿಗೆ ಮಾತುಕತೆ ನಡೆಸಲಿದ್ದು, ಸಾರ್ವಜನಿಕರು ಮರ ಕಡಿಯುವುದನ್ನು ತೀವ್ರವಾಗಿ ವಿರೋಧಿಸಿದರೆ, ನಾವು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದ್ದಾರೆ.
ಸಾವಿರಾರು ಮಂದಿಯಿಂದ ಅರ್ಜಿಗೆ ಸಹಿ
ಕಂಟೋನ್ಮೆಂಟ್‌ನಲ್ಲಿ ಈ ವಾಣಿಜ್ಯ ಯೋಜನೆಗಾಗಿ ಬರೋಬ್ಬರಿ 368 ಮರಗಳನ್ನು ಕಡಿಯಲು ರೈಲ್ವೆ ಇಲಾಖೆಯು ಉದ್ದೇಶಿಸಿದೆ. ಇದನ್ನು ಆಕ್ಷೇಪಿಸಿ ಒಂದೇ ದಿನದಲ್ಲಿ 2,835 ಜನರು ಅರ್ಜಿಗೆ ಸಹಿ ಹಾಕಿದ್ದಾರೆ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿರುವ ಈ ಶತಮಾನದ ಮರಗಳನ್ನು ಕಡಿಯುವುದನ್ನು ನಿಲ್ಲಿಸಿ ಎಂಬ ಅಭಿಯಾನವನ್ನು ಹೆರಿಟೇಜ್ ಬೇಕು ಗುಂಪು ಕೂಡ ಆರಂಭಿಸಿದೆ. ಸುಮಾರು 5,000 ಜನರಿಂದ ಸಹಿ ಸಂಗ್ರಹಿಸಿ ಅದನ್ನು ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಹಸ್ತಾಂತರಿಸುವ ಗುರಿ ಹೊಂದಿದೆ.

ವಸಂತ ನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಕೆಲವು ಭಾಗಗಳು ಈಗಾಗಲೇ ಕಾಂಕ್ರೀಟ್ ಆಗಿ ಬದಲಾಗಿವೆ. ಈಗ ಮರ ಕಡಿಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದೇವೆ, ರೈಲ್ವೆ ಇಲಾಖೆಯು ಯಾವ ಕಾರಣಕ್ಕೂ ಮರಗಳು ಹಾಗೂ ಇಲ್ಲಿನ ಜೀವವೈವಿಧ್ಯಕ್ಕೆ ತೊಂದರೆ ನೀಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ವಾಣಿಜ್ಯ ಯೋಜನೆಗಾಗಿ ಮರ ಕಡಿಯಲಾಗುತ್ತಿದೆ ಎಂದು ಸ್ಪಷ್ಟವಾಗಿ ಹೇಳಿರುವ ಬಿಬಿಎಂಪಿಯು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕರೆಯುವ ಬದಲಿಗೆ ಪ್ರಸ್ತಾವನೆಯನ್ನೇ ತಿರಸ್ಕರಿಸಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications