Juice Bill: ಒಲೆ ಮೇಲೆ ಇಡದ ತಂಪು ಪಾನೀಯಕ್ಕೂ 'ಗ್ಯಾಸ್ ಕ್ರೈಸಿಸ್ ಚಾರ್ಜ್': 374 ರೂಪಾಯಿ ಬಿಲ್ ಮಾಡಿದ ಬೆಂಗಳೂರಿನ ಕೆಫೆ
Gas Bill: ದೇಶದ ಹಲವು ಪ್ರಮುಖ ನಗರಗಳಲ್ಲಿ ಎಲ್‌ಪಿಜಿ ಪೂರೈಕೆ ಕೊರತೆಯಿಂದ ಹೋಟೆಲ್ ಉದ್ಯಮದ ಮೇಲೆ ತೀವ್ರ ಹೊಡೆತ ಬಿದ್ದಿದೆ. ಇದೇ ನೆಪ ಇಟ್ಟುಕೊಂಡು ಕೆಲವೆಡೆ ಬಿಲ್‌ನಲ್ಲಿ ಗ್ಯಾಸ್ ಜಾರ್ಜ್ ಸೇರಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿರುವ ಉದಾಹರಣೆಗಳಿವೆ. ಇದೀಗ ಬೆಂಗಳೂರಿನ ಇಂತಹದ್ದೇ ಘಟನೆಯೊಂದು ಮರುಕಳಿಸಿದೆ. ಗ್ರಾಹಕರೊಬ್ಬರು ಆರ್ಡರ್ ಮಾಡಿದ 'ಮಿಂಟ್ ಲೆಮನೇಡ್'ಗೆ ಹೆಚ್ಚುವರಿಯಾಗಿ ವಿಚಿತ್ರ ಎಂಬಂತೆ 'ಗ್ಯಾಸ್ ಕ್ರೈಸಿಸ್ ಚಾರ್ಜ್' ಎಂಬ ಹೆಸರಿನಲ್ಲಿ ಶುಲ್ಕವನ್ನು ಬಿಲ್‌ನಲ್ಲಿ ಸೇರಿಸಲಾಗಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಬೆಂಗಳೂರಿನ 'ಥಿಯೋ ಕೆಫೆ' ಎಂಬಲ್ಲಿ ಗ್ರಾಹಕರೊಬ್ಬರು ಎರಡು 'ಮಿಂಟ್ ಲೆಮನೇಡ್' ಆರ್ಡರ್ ಮಾಡಿದ್ದರು. ಆ ಬಿಲ್‌ನಲ್ಲಿ ಜಿಎಸ್‌ಟಿ ಜೊತೆಗೆ ಹೆಚ್ಚುವರಿಯಾಗಿ 5% 'ಗ್ಯಾಸ್ ಕ್ರೈಸಿಸ್ ಚಾರ್ಜ್' ಎಂದು 17 ರೂಪಾಯಿಗಳನ್ನು ಸೇರಿಸಲಾಗಿದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ತಂಪು ಪಾನೀಯಕ್ಕೂ 'ಗ್ಯಾಸ್ ಕ್ರೈಸಿಸ್ ಚಾರ್ಜ್'
ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು ಪೋಸ್ಟ್ ಮಾಡಿರುವ ಈ ಬಿಲ್ ಫೋಟೋ ಇದೀಗ ಗಮನ ಸೆಳೆಯುತ್ತಿದೆ. ಈ ಬಿಲ್ ಬೆಂಗಳೂರಿನ ಥಿಯೋ ಕಫೆಯದ್ದು ಎನ್ನಲಾಗಿದ್ದು, ಅದರಲ್ಲಿ ಎರಡು ಮಿಂಟ್ ಲೆಮೊನೇಡ್‌ಗಳನ್ನು ಆರ್ಡರ್ ಮಾಡಲಾಗಿದೆ. ಒಂದಕ್ಕೆ 179 ರೂಪಾಯಿನಂತೆ, ಎರಡಕ್ಕೂ ಸೇರಿ 358 ರೂಪಾಯಿ ಆಗಿದೆ. ಆದರೂ ಅದರ ಮೇಲೆ ಶೇಕಡ 5ರಷ್ಟು "ಗ್ಯಾಸ್ ಕ್ರೈಸಿಸ್ ಚಾರ್ಜ್" ಎಂಬ ಹೆಸರಿನಲ್ಲಿ ಹೆಚ್ಚುವರಿಯಾಗಿ 17.01 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ. ಇದರಿಂದ ಈ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮೊದಲು ಶೇ. 5ರಷ್ಟು (17.90) ರಿಯಾಯಿತಿ ನೀಡಲಾಯಿತು. ಇದಾದ ನಂತರ, ಸಿಜಿಎಸ್‌ಟಿ 2.5% (8.50 ರೂಪಾಯಿ), ಎಸ್‌ಜಿಎಸ್‌ಟಿ 2.5% (8.50 ರೂಪಾಯಿ) ಈ ಮೊತ್ತಕ್ಕೆ ಸೇರಿಸಲಾಯಿತು. ಜೊತೆಗೆ "ಗ್ಯಾಸ್ ಕ್ರೈಸಿಸ್ ಚಾರ್ಜ್" ಕೂಡ ಸೇರಿಸಿ, ಅಂತಿಮವಾಗಿ ಬಿಲ್ 374 ರೂಪಾಯಿಗೆ ಏರಿತು.
ರಿಯಾಯಿತಿ ಕೊಟ್ಟು ಬಳಿಕ ಹೆಚ್ಚುವರಿ ಹಣ ವಸೂಲಿ
* ಎರಡು ಮಿಂಟ್ ಲೆಮನೇಡ್ (ಪುದೀನಾ ನಿಂಬೆ ಪಾನಕ) ಮೂಲ ಬೆಲೆ 358 ರೂಪಾಯಿ.
* ಬಿಲ್‌ನಲ್ಲಿ 5% (17.90 ರೂಪಾಯಿ) ರಿಯಾಯಿತಿಯನ್ನು ನೀಡಲಾಗಿದೆ. ಆಗ ಈ ರಿಯಾಯಿತಿ ಹೋಗಿ 358 ರೂಪಾಯಿ ಇದ್ದಿದ್ದು, 340.10 ರೂಪಾಯಿಗೆ ಕಡಿಮೆ ಮಾಡಲಾಗಿದೆ.
* ಆದರೆ, ಇದರ ಮೇಲೆ 2.5% ಸಿಜಿಎಸ್‌ಟಿ ಮತ್ತು 2.5% ಎಸ್‌ಜಿಎಸ್‌ಟಿ ಸೇರಿಸಲಾಗಿದೆ. ಅಂದರೆ, 17 ರೂಪಾಯಿ ಜಿಎಸ್‌ಟಿ ಸೇರಿದ್ದರಿಂದ ಬಿಲ್ 358 ರೂಪಾಯಿಗೆ ಏರಿಕೆಯಾಗಿದೆ.
* ಅಷ್ಟೇ ಅಲ್ಲದೆ, ಇದರ ಮೇಲೆ ಮತ್ತೆ "ಗ್ಯಾಸ್ ಕ್ರೈಸಿಸ್ ಚಾರ್ಜ್" ಎಂಬ ಹೆಸರಿನಲ್ಲಿ 5% ಶುಲ್ಕವನ್ನು ವಿಧಿಸಲಾಗಿದ್ದು, 17.01 ರೂಪಾಯಿ ಆಗಿದೆ. ಅಂತಿಮವಾಗಿ ಇವೆಲ್ಲವನ್ನೂ ಸೇರಿಸಿದಾಗ ಬಿಲ್‌ನ ಮೊತ್ತ 374 ರೂಪಾಯಿಗಳಿಗೆ ತಲುಪಿದೆ.
ಭುಗಿಲೆದ್ದ ಸಾರ್ವಜನಿಕರ ಆಕ್ರೋಶ
ಮಿಂಟ್ ಲೆಮನೇಡ್ ಅಂತಹ ತಂಪು ಪಾನೀಯಗಳನ್ನು ತಯಾರಿಸಲು ಗ್ಯಾಸ್ ಅಥವಾ ಅಡುಗೆ ಅನಿಲದ ಅಗತ್ಯವೇ ಇರುವುದಿಲ್ಲ. ಆದರೂ, ಇಂತಹ ಪಾನೀಯಕ್ಕೆ ಗ್ಯಾಸ್ ಕ್ರೈಸಿಸ್ ಚಾರ್ಜ್ ವಿಧಿಸಿರುವುದು ನೆಟ್ಟಿಗರನ್ನು ಕೆರಳಿಸಿದೆ. ಟ್ವಿಟರ್ ಬಳಕೆದಾರರೊಬ್ಬರು "ನಿಂಬೆ ಪಾನಕ ಮಾಡಲು ಗ್ಯಾಸ್ ಸ್ಟೌವ್ ಬಳಸುತ್ತಾರೆಯೇ?", ನಿಂಬೆ ಹಣ್ಣನ್ನು ಬಿಸಿ ಮಾಡಿದ್ದಾರಾ?," ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇದನ್ನು ಗ್ರಾಹಕರ ಹಕ್ಕುಗಳ ಉಲ್ಲಂಘನೆ ಮತ್ತು ಅನಗತ್ಯ ಹೊರೆ ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“Gas crisis charge” on a lemonade 🤣
— Pakchikpak Raja Babu (@HaramiParindey) March 15, 2026
Source: r/bangalore pic.twitter.com/wkAU1QIsNl
ಈ ಕುರಿತು ಪ್ರತಿಕ್ರಿಯಿಸಿರುವ ಕೆಫೆಯ ಮಾಲೀಕರು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶಾದ್ಯಂತ ಎಲ್‌ಪಿಜಿ ಪೂರೈಕೆಯಲ್ಲಿ ತೀವ್ರ ಕೊರತೆಯುಂಟಾಗಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳು ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕರೂ ಕಪ್ಪು ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಬೆಲೆಗೆ (ಒಂದು ಸಿಲಿಂಡರ್‌ಗೆ ₹3,000 ದಿಂದ ₹5,000 ವರೆಗೆ) ಖರೀದಿಸಬೇಕಾಗಿದೆ. ರೆಸ್ಟೋರೆಂಟ್ ನಡೆಸಲು ಅನಿವಾರ್ಯವಾಗಿ ಈ ಶುಲ್ಕ ವಿಧಿಸುತ್ತಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ದೇಶದಾದ್ಯಂತ ಎಲ್‌ಪಿಜಿ ಕೊರತೆಯಿಂದಾಗಿ ಅನೇಕ ಹೋಟೆಲ್, ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚುತ್ತಿವೆ. ಮತ್ತೊಂದೆಡೆ, ಇನ್ನೂ ಕೆಲವೆಡೆ, ಮೆನುವಿನಲ್ಲಿ ಬದಲಾವಣೆ ಮಾಡುತ್ತಿವೆ. ಬೆಂಗಳೂರಿನಲ್ಲಿ ಈ ಕೆಫೆ ಮಾತ್ರವಲ್ಲದೆ, ಇತರೆ ಕೆಲವು ಹೋಟೆಲ್‌ಗಳು ಕೂಡ ಈ ರೀತಿಯ ಹೆಚ್ಚುವರಿ ಶುಲ್ಕಗಳನ್ನು ವಿಧಿಸುತ್ತಿರುವ ಬಗ್ಗೆ ವರದಿಯಾಗಿದೆ. ಆದರೆ, ಹೋಟೆಲ್ ಮಾಲೀಕರ ಸಂಘಗಳು ಇಂತಹ ಶುಲ್ಕ ವಿಧಿಸುವುದು ನಿಯಮಬಾಹಿರ ಎಂದು ಹೇಳಿಕೊಂಡು ಬರುತ್ತಿವೆ. ಆದರೂ, ಕೂಡ ಇಂತಹ ಘಟನೆಗಳು ಮರುಕಳಿಸುತ್ತಲಿವೆ.












Click it and Unblock the Notifications