ಬೆಂಗಳೂರಿನ 21 ಐಟಿ ಪಾರ್ಕ್‌ಗಳಿಗೆ ಕಾವೇರಿ ನೀರು: BWSSB
ಬೆಂಗಳೂರು, ಏಪ್ರಿಲ್ 17: ಬೆಂಗಳೂರಿನ ಐಟಿ ಕಂಪನಿಗಳಿಗೆ ಬೇಕಾದ ಅಗತ್ಯ ನೀರನ್ನು ಪೂರೈಸಲಾಗುವುದು. ಕಾವೇರಿ ನೀರಿನ ಬೇಡಿಕೆ ಇಟ್ಟ ಐಟಿ ಕಂಪನಿಗಳಿಗೆ ಕಾವೇರಿ ನಾಲ್ಕನೇ ಹಂತದ ನೀರನ್ನು ಪೈಪ್‌ಲೈನ್ ಸರಬರಾಜು ಮಾಡಲು ಜಲಮಂಡಳಿ ಸಿದ್ಧವಿದೆ ಎಂದು BWSSB ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಬುಧವಾರ ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆ ಜಲಮಂಡಳಿ ಅಧ್ಯಕ್ಷರು ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಮಹದೇವಪುರ ವಲಯದ 21 ಐಟಿ ಪಾರ್ಕ್‌ಗಳಿಗೆ ಅಗತ್ಯವಿರುವಷ್ಟು ಕಾವೇರಿ ನೀರನ್ನು ಸರಬರಾಜು ಮಾಡಲು ಜಲಮಂಡಳಿ ಸಿದ್ಧವಿದೆ. ಐಟಿ ಕಂಪನಿಗಳ ನೀರಿನ ಕೊರತೆಯನ್ನು ಪರಿಹರಿಸಲಾಗುವುದು ಎಂದರು.

30 ದಿನಗಳ ಒಳಗೆ ಕಾವೇರಿ ನೀರು
ಮಹದೇಪುರ ವಲಯದಲ್ಲಿ 21 ಐಟಿ ಪಾರ್ಕ್‌ಗಳಿವೆ. ಇಲ್ಲಿ ಬೋರ್ ವೇಲ್ ಗಳ ಮೇಲೆ ಹೆಚ್ಚಿನ ಅವಲಂಬನೆ ಇದೆ. ನೀರಿನ ಕೊರತೆ ಉಂಟಾಗಿದ್ದನ್ನ ಜಲಮಂಡಳಿ ಅಗತ್ಯ ವ್ಯವಸ್ಥೆ ಮಾಡುವ ಮೂಲಕ ಸರಿಪಡಿಸಿದೆ. ಇಂದು ಭೇಟಿಯ ಸಂಧರ್ಭದಲ್ಲಿ ಕಂಪನಿಗಳು ಕಾವೇರಿ ನೀರಿನ ಸೌಲಭ್ಯ ಒಡಗಿಸುವಂತೆ ಮನವಿ ಮಾಡಿದರು.
ಈ ಮನವಿಗೆ ಸಕಾರಾತ್ಮಕ ವಾಗಿ ಸ್ಪಂದಿಸಿದ ಜಲಮಂಡಳಿ ಅಧ್ಯಕ್ಷರು, ಈ ಎಲ್ಲಾ ಪಾರ್ಕ್‌ಗಳ ಬಳಕೆಗೆ ಸುಮಾರು 12 ಎಂ.ಎಲ್.ಡಿ ಕಾವೇರಿ ನೀರಿನ ಅವಶ್ಯಕತೆ ಬೀಳುತ್ತದೆ. ಇದರಲ್ಲಿ ಸದ್ಯ ಲಭ್ಯವಿರುವ ಕಾವೇರಿ 4 ನೇ ಹಂತದ ಯೋಜನೆಯಲ್ಲೇ ಸುಮಾರು 5 ಎಂ.ಎಲ್.ಡಿ ನೀರನ್ನು ನೀಡಬಹುದಾಗಿದೆ.
ಆದರೆ, ಇದಕ್ಕೆ ತಗಲುವ ಪ್ರೋರೇಟಾ ಹಾಗೂ ಇನ್ನಿತರ ಶುಲ್ಕಗಳನ್ನು ಭರಿಸಬೇಕಾಗುತ್ತದೆ. ಶುಲ್ಕ ಭರಿಸಿದರೆ 30 ದಿನಗಳಲ್ಲಿ ಪೈಪ್‌ಲೈನ್ ಮೂಲಕ ನೀರು ಸರಬರಾಜು ಪ್ರಾರಂಭಿಸಬಹುದಾಗಿದೆ. ಕಾವೇರಿ 5 ನೇ ಹಂತದ ಯೋಜನೆ ಜಾರಿಗೊಂಡ ನಂತರ ಹೆಚ್ಚಿನ ಪ್ರಮಾಣದ ನೀರು ಒದಗಿಸಬಹುದಾಗಿದೆ. ಅಲ್ಲದೇ, ಇನ್ನುಳಿದ ಬೇಡಿಕೆಯನ್ನು ಸಂಸ್ಕರಿಸಿದ ನೀರನ್ನು ಸರಬರಾಜು ಮಾಡುವ ಮೂಲಕ ಈಡೇರಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸಂಸ್ಕರಿಸಿದ ನೀರಿನ ಬಳಕೆ ಹೆಚ್ಚಾಗಬೇಕು
ಐಟಿ ಕಚೇರಿಗಳಲ್ಲಿ ದಿನನಿತ್ಯದ ಬಳಕೆಯ ಶೇಕಡಾ 50 ರಷ್ಟು ನೀರಿನ ಅವಶ್ಯಕತೆಯನ್ನು ಸಂಸ್ಕರಿಸಿದ ನೀರಿನಿಂದ ಪೂರೈಸಿಕೊಳ್ಳಬಹು. ಬೆಂಗಳೂರು ಜಲಮಂಡಳಿಯ ಬಳಿ ವಿಫುಲವಾದ ಸಂಸ್ಕರಿತ ನೀರಿನ ಲಭ್ಯತೆವಿದೆ. ಉತ್ತಮ ಗುಣಮಟ್ಟದ ನೀರನ್ನ ನಾವು ಟ್ಯಾಂಕರ್ ಮೂಲಕ ಸರಬರಾಜು ಮಾಡಬಹುದಾಗಿದೆ. ನಿಮ್ಮ ಅವಶ್ಯಕತೆಯನ್ನು ವೆಬ್‌ಸೈಟ್ ಮೂಲಕ ನೀಡಿದಲ್ಲಿ ನಾವು ಪ್ರತಿನಿತ್ಯ ನೀರನ್ನು ಪೂರೈಸಲಿದ್ದೇವೆ ಎಂದರು.
ಈ ನೀರಿನ ಸಂಸ್ಕರಣೆಗೆ ಒತ್ತು ಕೊಡಿ
ಬೆಂಗಳೂರಿನಲ್ಲಿ ಮನೆಗಳ ಹಾಗೂ ಕಚೇರಿಗಳ ಶೌಚಾಲಯದ ನೀರನ್ನು ಹೊರತಪಡಿಸಿ ಇನ್ನಿತರೆ ಬಳಕೆಯಿಂದ ಲಭ್ಯವಾಗುವ ನೀರನ್ನು ಗ್ರೇ ವಾಟರ್ ಎಂದು ಕರೆಯಲಾಗುತ್ತದೆ. ಇದನ್ನ ಸಂಸ್ಕರಿಸುವುದು ಬಹಳ ಸುಲಭ. ಇದರ ಸಂಸ್ಕರಣೆ ಹಾಗೂ ಮರುಬಳಕೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಮಳೆ ನೀರು ಕೊಯ್ಲು ಪದ್ಧತಿ
ನಗರದ ಐಟಿ ಪಾರ್ಕ್‌ಗಳು ಈಗಾಗಲೇ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿವೆ. ಇವುಗಳನ್ನ ಹೊರತುಪಡಿಸಿ ಹೊರ ಪ್ರದೇಶದಲ್ಲಿ ಬೀಳುವ ಮಳೆ ನೀರನ್ನು ಶೇಖರಿಸಿ ನಾವು ಹತ್ತಿರದ ಕೆರೆಗಳು ಅಥವಾ ಜಲಮೂಲಗಳಿಗೆ ಹರಿಯಬಿಡಬಹುದಾಗಿದೆ. ಇದರಿಂದ ಮಳೆಯ ನೀರನ್ನು ಸಂಗ್ರಹಿಸುವ ಹಾಗೂ ಅಂತರ್ಜಲ ಮರುಪೂರಣಕ್ಕೆ ಉಪಯೋಗಿಸಲು ಸಾಧ್ಯವಾಗಲಿದೆ.
ಹತ್ತಿರದ ಐಟಿ ಪಾರ್ಕ್‌ಗಳಿಂದ ಹತ್ತಿರದ ಕೆರೆಗಳಿಗೆ ಮಳೆ ನೀರನ್ನ ತಗೆದುಕೊಂಡು ಹೋಗುವ ಕಾರ್ಯವನ್ನು ಪ್ರಾರಂಭಿಸಲು ಸೂಚಿಸಿದರು. ಇಕೋ ವರ್ಲ್ಡ್ ಅಧ್ಯಕ್ಷರು ಮಹದೇವಪುರ ವಲಯದ ಐಟಿ ಪಾರ್ಕ್‌ಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಅಲ್ಲದೇ ಗ್ರೀನ್ ಸ್ಟಾರ್ ಛಾಲೆಂಜ್ ಸ್ವೀಕರಿಸುವಂತೆ ಕರೆ ನೀಡಿದರು. ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications