BMTC multi-crore forgery case: ಅಧಿಕಾರಿಗಳಿಂದಲೇ ನಕಲಿ ಸಹಿ- ಬಿಎಂಟಿಸಿಗೆ ಬಹುಕೋಟಿ ವಂಚನೆ, ಎಷ್ಟು ಹಣ, ಅಧಿಕಾರಿಗಳ ಹೆಸರೇನು?
ಬೆಂಗಳೂರು, ಅಕ್ಟೋಬರ್ 04: ಹಿರಿಯ ಅಧಿಕಾರಿಗಳ ಸಹಿಯನ್ನು ನಕಲಿ ಮಾಡಿ ಅನರ್ಹ ಸಂಸ್ಥೆಗಳಿಗೆ ಗುತ್ತಿಗೆ ನೀಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಏಳು ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು ಬಿಎಂಟಿಸಿಯಲ್ಲಿ ಬಹುಕೋಟಿ ವಂಚನೆಯಾಗಿದೆ ಎಂದು ಅಸಿಸ್ಟೆಂಟ್ ಸೆಕ್ಯುರಿಟಿ ಮತ್ತು ವಿಜಿಲೆನ್ಸ್ ಅಧಿಕಾರಿ ರಮ್ಯಾ ಸಿಕೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಏಳು ಬಿಎಂಟಿಸಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಏಳು ಅಧಿಕಾರಿಗಳ ಕೃತ್ಯದಿಂದ ಬಿಎಂಟಿಸಿ ಸಂಸ್ಥೆಗೆ 17 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ ಎಂದು ರಮ್ಯಾ ದೂರಿನಲ್ಲಿ ತಿಳಿಸಿದ್ದಾರೆ.
ಎಫ್‌ಐಆರ್‌ನ ಪ್ರಕಾರ, ಏಳು ಅಧಿಕಾರಿಗಳು ಕಲರ್ ಜೆರಾಕ್ಸ್ ಮಾಡಿದ್ದಾರೆ. ಅದನ್ನು ಅಕ್ರಮವಾಗಿ ವಿವಿಧ ದಾಖಲೆಗಳಲ್ಲಿ ಬಳಸಿಕೊಂಡಿದ್ದಾರೆ. ಅವರು ಹಿರಿಯ ಅಧಿಕಾರಿಗಳ ಸಹಿಯನ್ನು ನಕಲಿ ಮಾಡಿದ್ದಾರೆ. ಮಾರ್ಚ್ 2020 ರಿಂದ ಸೆಪ್ಟೆಂಬರ್ 2023 ರ ವರೆಗೆ ಈ ವಂಚನೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಶ್ರೀರಾಮ್ ಮುಲ್ಕವನ, ಶಾಮಲಾ ಎಸ್, ಮಮತಾ ಬಿ, ಅನಿತಾ ಟಿ, ಗುಣಶೀಲ, ವೆಂಕಟೇಶ್ ಆರ್ ಮತ್ತು ಪ್ರಕಾಶ್ ಕೊಪ್ಪಳ ಅವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಿ ಅಮಾನತುಗೊಳಿಸಲಾಗಿದೆ. ಅಧಿಕಾರಿಗಳು ಬಿಎಂಟಿಸಿಯ ವಾಣಿಜ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪಾಲಿಕೆಗೆ 10.5 ಕೋಟಿ ಹಾಗೂ 6.91 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಸಚಿವರಿಂದ ಕ್ರಮ ಕೈಗೊಳ್ಳುವ ಭರವಸೆ
ಎಫ್‌ಐಆರ್ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ.
'ಇದು ಹಲವಾರು ವರ್ಷಗಳಿಂದ ನಡೆಯುತ್ತಿದೆ. ಚಾಲಕರು ಹಾಗೂ ಕಂಡಕ್ಟರ್‌ಗಳಿಗೆ ಡ್ಯೂಟಿ ಹಂಚಿಕೆ ವೇಳೆ ಕೆಲ ಅಧಿಕಾರಿಗಳು ಚಿತ್ರಹಿಂಸೆ ನೀಡುತ್ತಿದ್ದರು. ಈ ಹಿಂದೆಯೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರೂ ಅವರ ವರ್ತನೆಯಲ್ಲಿ ಬದಲಾವಣೆ ಆಗಿಲ್ಲ' ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಏಳು ಅಧಿಕಾರಿಗಳು ಸೇರಿದಂತೆ ಇತರರು ತಪ್ಪಿತಸ್ಥರು ಎಂದು ಕಂಡುಬಂದಿದೆ. ಈ ಘಟನೆಯ ಬಗ್ಗೆ ನಮ್ಮ ಎಂಡಿ ತನಿಖೆಗೆ ಆದೇಶಿಸಿದ್ದರು. ಅವರನ್ನು ಅಮಾನತು ಮಾಡಲಾಗಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರೆಡ್ಡಿ ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳಿಂದ ಅಪರಾಧ ಕೃತ್ಯ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ಗಳಿಕೆಯಲ್ಲಿ ತೊಡಗುವುದು ), 120 (ಬಿ) (ಕ್ರಿಮಿನಲ್ ಪಿತೂರಿ) ಮತ್ತು ಇತರ ವಿಭಾಗಗಳಲ್ಲಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.












Click it and Unblock the Notifications