Bmtc accident: ಬಿಎಂಟಿಸಿ ಹೊಡೆತಕ್ಕೆ ಆಟೋ ನಜ್ಜುಗುಜ್ಜಾಗಿ ಒಳಗಿದ್ದವರೆಲ್ಲ ಸಾವು
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಳಗಿದ್ದ ಚಾಲಕ ಹಾಗೂ ಹಿಂಬದಿಯಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಹೊಸಕೆರೆಹಳ್ಳಿ ಕ್ರಾಸ್‌ನಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಬಸ್ ಗುದ್ದಿದ ರಭಸಕ್ಕೆ ಇಡೀ ಆಟೋ ಜಖಂ ಆಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಟೋ ಚಾಲಕ ತನ್ನ ಸೀಟ್‌ನಲ್ಲೇ ಕುಳಿತು ಪ್ರಾಣ ಬಿಟ್ಟಿದ್ದಾನೆ. ಆಟೋ ರಿಕ್ಷಾಗೆ ಬಿಎಂಟಿಸಿ ಬಸ್ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಒಟ್ಟಾರೆ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಚಾಲಕ ಮತ್ತು ಪ್ರಯಾಣಿಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವುದು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ.

ಘಟನೆ ಸಂಭವಿಸಿದ ಕೂಡಲೇ ಸಾರ್ವಜನಿಕರು ಆಟೋದಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕರನ್ನು ರಕ್ಷಿಸಲು ಧಾವಿಸಿದ್ದಾರೆ. ನಜ್ಜುಗುಜ್ಜಾಗಿದ್ದ ಆಟೋದಿಂದ ಅವರನ್ನು ಹೊರತೆಗೆಯುವ ಯತ್ನವೂ ಮಾಡಿದ್ದಾರೆ. ಆದರೆ ಬಸ್‌ನ ಸಂಪೂರ್ಣ ತೂಕ ಆಟೋ ಮೇಲೆ ಬಿದ್ದಿದ್ದರ ಪರಿಣಾಮ ಒಳಗಿದ್ದವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಆಂಬುಲೆನ್ಸ್‌ಗೆ ಕರೆ ಮಾಡಿದರೂ ಅವರು ಬರುವ ಹೊತ್ತಿಗೆ ಮೂವರೂ ಸಾವನ್ನಪ್ಪಿದ್ದರು ಎಂದು ಹೇಳಲಾಗುತ್ತಿದೆ. ಈ ದುರಂತವು ಬೆಂಗಳೂರಿನಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಆತಂಕ ಉಂಟು ಮಾಡಿದೆ. ಭಾರೀ ವಾಹನಗಳ ಅಜಾಗರೂಕ ಚಾಲನೆ ಮತ್ತು ಆಟೋ-ರಿಕ್ಷಾಗಳಂತಹ ಸಣ್ಣ ವಾಹನಗಳ ದುರ್ಬಲತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಈ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಅಪಘಾತಕ್ಕೆ ನಿಖರವಾದ ಕಾರಣವನ್ನು ಪತ್ತೆ ಹಚ್ಚಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೂ ಭವಿಷ್ಯದಲ್ಲಿ ಇಂತಹ ದುರ್ಘಟನೆಗಳನ್ನು ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಚಾರ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಿಎಂಟಿಸಿ ಹರಿದು ಮಹಿಳೆ ಸಾವು: ನಗರದ ಹೆಬ್ಬಾಳದ ಸಂಚಾರ ಪೊಲೀಸ್ ಠಾಣೆಯ ಬಳಿಯೂ ಬಿಎಂಟಿಸಿ ಬಸ್ ಹರಿದು ಮಹಿಳೆಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ನಡೆದಿದೆ. ಲಿಂಗಮ್ಮ ಎಂಬುವವರು ಎಂದಿನಂತೆ ಕೆಲಸ ಮುಗಿಸಿಕೊಂಡು ಹೆಬ್ಬಾಳ ಟ್ರಾಫಿಕ್ ಪೊಲೀಸ್ ಠಾಣೆ ಬಳಿ ಇಳಿದಿದ್ದರು. ಬಳಿಕ ರಸ್ತೆ ದಾಟುತ್ತಿದ್ದ ವೇಳೆ ಬಿಎಂಟಿಸಿ ಬಸ್ ಅವರಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಿಎಂಟಿಸಿ ಬಸ್ ರಭಸವಾಗಿ ಗುದ್ದಿದ ಪರಿಣಾಮ ಗಾಯಗೊಂಡ ಮಹಿಳೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ವಿಚಾರ ತಿಳಿದು ಹೆಬ್ಬಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಎಂಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಬಿಎಂಟಿಸಿಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ.












Click it and Unblock the Notifications