BWSSB ಭರ್ಜರಿ ಕಾರ್ಯಾಚರಣೆ: 11,000 ಅಕ್ರಮ ನೀರು ಸಂಪರ್ಕ ಕಡಿತ, 55 ಕೋಟಿ ರೂ ಆದಾಯ ಸಂಗ್ರಹ
ಬೆಂಗಳೂರು: ಐದು ತಿಂಗಳ ಹಿಂದೆ ಸ್ಥಾಪಿಸಲಾದ ಬೆಂಗಳೂರು ಜಲಮಂಡಳಿಯ ವಿಶೇಷ ಕಾರ್ಯಪಡೆಗಳಾದ 'ಬ್ಲೂ ಫೋರ್ಸ್' ನಗರಾದ್ಯಂತ ಆಕ್ಟಿವ್ ಆಗಿದ್ದು, ಭರ್ಜರಿ ಕಾರ್ಯಾಚರಣೆ ನಡೆಸಿವೆ. ನಗರದಲ್ಲಿ ನೀರಿನ ದುರ್ಬಳಕೆ, ಅಕ್ರಮ ಸಂಪರ್ಕ ಹಾಗೂ ಬಿಲ್ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಸಮರ ಸಾರಿವೆ. ಬಿರುಸಿನ ತಪಾಸಣೆ ನಡೆಸಿ ಅಕ್ರಮಗಳನ್ನು ಪತ್ತೆ ಮಾಡಿ ಕೋಟಿ ಕೋಟಿ ಆದಾಯ ಜಲಮಂಳಿಗೆ ಬರುವಂತೆ ಮಾಡಿವೆ.
ಹೌದು, ಕಳೆದ ಐದು ತಿಂಗಳಲ್ಲಿ ಬರೋಬ್ಬರಿ 54,625 ಕಟ್ಟಡಗಳನ್ನು ಪರಿಶೀಲಿಸಲಾಗಿದೆ. ನಿಯಮ ಉಲ್ಲಂಘಿಸಿದ 11,217 ಅಕ್ರಮ ಸಂಪರ್ಕಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿತಗೊಳಿಸಲಾಗಿದೆ. ಈ ಮಹತ್ವದ ಕಾರ್ಯಾಚರಣೆಯಿಂದ 1,000 ಮಿಲಿಯನ್ ಲೀಟರ್ ಕುಡಿಯುವ ನೀರು ಉಳಿತಾಯವಾಗಿದೆ. ಪ್ರೋರಾಟಾ ಹಾಗೂ ನೀರಿನ ಮೌಲ್ಯ ಸೇರಿ ಒಟ್ಟಾರೆ 55 ಕೋಟಿ ರೂ.ಗಳ ಹೆಚ್ಚುವರಿ ಆದಾಯ ಸಂಗ್ರಹವಾಗಿದೆ.

ಕಾರ್ಯಾಚರಣೆಯ ಪ್ರಮುಖಾಂಶಗಳು
* ಬೃಹತ್ ಮಟ್ಟದ ತಪಾಸಣೆ: ನಗರದ ನಾಲ್ಕೂ ವಲಯಗಳಲ್ಲಿ (ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ) ಒಟ್ಟು 54,625 ಕಟ್ಟಡಗಳ ಭೌತಿಕ ತಪಾಸಣೆ ನಡೆಸಲಾಗಿದೆ.
* ಸಂಪರ್ಕ ಕಡಿತ: ಒಟ್ಟು 11,217 ಸಂಪರ್ಕಗಳ ಕಡಿತ ಮಾಡಲಾಗಿದೆ. ಇದರಲ್ಲಿ 9,751 ಕುಡಿಯುವ ನೀರಿನ ಸಂಪರ್ಕಗಳು ಹಾಗೂ 1,466 ಒಳಚರಂಡಿ ಸಂಪರ್ಕಗಳು ಸೇರಿವೆ.
* ಪೂರ್ವ ವಲಯದಲ್ಲಿ ಅತಿ ಹೆಚ್ಚು ಕಡಿತ: ಅಕ್ರಮ ಸಂಪರ್ಕ ಹಾಗೂ ಬಿಲ್ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ಪೂರ್ವ ವಲಯ ಮುಂಚೂಣಿಯಲ್ಲಿದ್ದು, ಇಲ್ಲಿ ಗರಿಷ್ಠ 3,151 ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.
* ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ತಪಾಸಣೆ: ದಕ್ಷಿಣ ವಲಯದಲ್ಲಿ ಅತಿ ಹೆಚ್ಚು, ಅಂದರೆ 13,908 ಕಟ್ಟಡಗಳನ್ನು ಜಲಮಂಡಳಿ ಅಧಿಕಾರಿಗಳು ಖುದ್ದು ಭೇಟಿ ಮಾಡಿ ಪರಿಶೀಲಿಸಿದ್ದಾರೆ.
ಆದಾಯ ಸೋರಿಕೆಗೆ ಬ್ರೇಕ್
ಬೆಂಗಳೂರು ಜಲಮಂಡಳಿಯ ಈ ನಿರಂತರ ಹಾಗೂ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದಾಗಿ ಬೃಹತ್ ಪ್ರಮಾಣದ ಆದಾಯ ಸೋರಿಕೆಗೆ ತಡೆ ಬಿದ್ದಿದೆ. ಅಕ್ರಮ ಸಂಪರ್ಕ ಹೊಂದಿದ್ದ ಕಟ್ಟಡಗಳ ವಿರುದ್ಧ ಕೈಗೊಂಡ ನಿರ್ದಾಕ್ಷಿಣ್ಯ ಕ್ರಮಗಳಿಂದಾಗಿ, ಆ ಸಂಪರ್ಕಗಳನ್ನು ಕಡಿತಗೊಳಿಸುವ ಹಾಗೂ ನಂತರ ಅವುಗಳನ್ನು ಅಧಿಕೃತವಾಗಿ ಸಕ್ರಮಗೊಳಿಸುವ ಪ್ರಕ್ರಿಯೆ ಚುರುಕುಗೊಂಡಿದೆ. ಇದರ ನೇರ ಪರಿಣಾಮವಾಗಿ, ಜಲಮಂಡಳಿಯ ಬೊಕ್ಕಸಕ್ಕೆ ಪ್ರೋರಾಟಾ ಶುಲ್ಕದ ರೂಪದಲ್ಲಿ ಬರೋಬ್ಬರಿ 55 ಕೋಟಿ ರೂ. ಗಳ ಬೃಹತ್ ಆದಾಯ ಸಂಗ್ರಹವಾಗಿದೆ.
1,000 ಮಿ.ಲೀ. ನೀರು ಬಿಲ್ಲಿಂಗ್ ವ್ಯಾಪ್ತಿಗೆ
ಅಕ್ರಮ ನೀರಿನ ಸಂಪರ್ಕಗಳ ತೆರವು ಹಾಗೂ ನೀರಿನ ದುರ್ಬಳಕೆಯ ವಿರುದ್ಧ ಜಲಮಂಡಳಿಯ ಬ್ಲೂ ಫೋರ್ಸ್ ತಂಡ ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕೆಲವು ಪ್ರಯೋಜನೆಗಳು ಆಗಿವೆ. ನಿತ್ಯವು ಬೃಹತ್ ಪ್ರಮಾಣದ ನೀರಿನ ಸೋರಿಕೆ ತಪ್ಪಿದೆ. ಈ ಕಾರ್ಯಾಚರಣೆಯ ಪರಿಣಾಮವಾಗಿ ಪ್ರತಿ ತಿಂಗಳು ಬರೋಬ್ಬರಿ 210 ಮಿಲಿಯನ್ ಲೀಟರ್ ಶುದ್ಧ ಕುಡಿಯುವ ನೀರು ಉಳಿತಾಯವಾಗುತ್ತಿದೆ. ಒಟ್ಟಾರೆಯಾಗಿ, ಈವರೆಗೆ ಅಕ್ರಮವಾಗಿ ಉಪಯೋಗಿಸಲಾಗುತ್ತಿದ್ದ 1,000 ಮಿಲಿಯನ್ ಲೀಟರ್ ಪ್ರಮಾಣದ ನೀರನ್ನು ಇದೀಗ ಜಲಮಂಡಳಿಯ ಅಧಿಕೃತ ಬಿಲ್ಲಿಂಗ್ ವ್ಯಾಪ್ತಿಗೆ ತರಲಾಗಿದೆ. ಇದರಿಂದ ಪ್ರತಿ ತಿಂಗಳು ಸುಮಾರು 5 ಕೋಟಿ ರೂ.ಗಳ ಹೆಚ್ಚುವರಿ ಆದಾಯ ಬರುವಂತಾಗಿದೆ.
ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು, ನೀರಿನ ದುರ್ಬಳಕೆ ಹಾಗೂ ಒಳಚರಂಡಿ ಅಕ್ರಮ ಸಂಪರ್ಕ ಪಡೆಯುವುದರಿಂದ ಜಲಮಂಡಳಿಯ ಮೂಲಸೌಕರ್ಯದ ಮೇಲೆ ತೀವ್ರ ಒತ್ತಡ ಹೆಚ್ಚಾಗುತ್ತದೆ. ಇದು ನಗರವನ್ನು ಸ್ವಚ್ಛವಾಗಿಡುವುದು ಹಾಗೂ ನಾಗರಿಕರಿಗೆ ಗುಣಮಟ್ಟದ ಸೇವೆ ಒದಗಿಸುವ ನಮ್ಮ ಬದ್ಧತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದರು.
ಕುಡಿಯುವ ನೀರಿನ ಹಾಗೂ ಒಳಚರಂಡಿ ಅಕ್ರಮ ಸಂಪರ್ಕ ಪಡೆದಿರುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಜೊತೆಗೆ ಸಾರ್ವಜನಿಕರು ಅಧಿಕೃತವಾಗಿ ಕಾವೇರಿ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕ ಪಡೆಯುವಂತೆ ತಿಳಿಸಲಾಗಿದೆ. ಜಲಮಂಡಳಿ ಕಾರ್ಯಕ್ಷಮತೆ ಹೆಚ್ಚುವುದಲ್ಲದೆ, ಬ್ರ್ಯಾಂಡ್ ಬೆಂಗಳೂರು ಆಶಯದಂತೆ ಉತ್ತಮ ಸೇವೆ ಒದಗಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
2025ರಲ್ಲಿ ಸ್ಥಾಪನೆಯಾದ 18 'ಬ್ಲೂ ಫೋರ್ಸ್' ಪಡೆಗಳು
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಳೆದ ವರ್ಷ 2025ರ ನವೆಂಬರ್ ಕೊನೆಯ ವಾರದಲ್ಲಿ ಈ 'ಬ್ಲೂ ಫೋರ್ಸ್' ಪಡೆಯನ್ನು ಉದ್ಘಾಟಿಸಿದ್ದರು. ಪ್ರಸ್ತುತ ನಗರದಾದ್ಯಂತ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಲು ಒಟ್ಟು 18 ಪ್ರತ್ಯೇಕ ಬ್ಲೂ ಫೋರ್ಸ್ ತಂಡಗಳನ್ನು ನಿಯೋಜಿಸಲಾಗಿದೆ. ಸುಗಮ ಹಾಗೂ ಶಿಸ್ತಿನ ಕಾರ್ಯಾಚರಣೆಗಾಗಿ ಪ್ರತಿಯೊಂದು ತಂಡದಲ್ಲೂ ತಲಾ 4 ಜನ ಸದಸ್ಯರನ್ನು ನೇಮಿಸಲಾಗಿದೆ. ಪ್ರತಿ ತಂಡದಲ್ಲಿ ಓರ್ವ ಮಾಜಿ ಸೈನಿಕ, ಒಬ್ಬ ಮೇಲ್ವಿಚಾರಕ (ಸೂಪರ್ ವೈಸರ್) ಹಾಗೂ ಇಬ್ಬರು ಸಂಪರ್ಕ ಕಡಿತಗೊಳಿಸುವ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.














Click it and Unblock the Notifications