ಬೆಂಗಳೂರಿನ ಈ ಭಾಗದ ಜನರಿಗೆ ಸರ್ಕಾರದಿಂದ ಭರ್ಜರಿ ಗುಡ್‌ನ್ಯೂಸ್, ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು
ಬೆಂಗಳೂರಿನ ಉತ್ತರ ಬೆಂಗಳೂರು ಭಾಗದ ಜನರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಗುಡ್‌ನ್ಯೂಸ್ ಕೊಡಲಾಗಿದೆ. 125 ಹಾಸಿಗೆಗಳ ಹೈಟೆಕ್ ಸರ್ಕಾರಿ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಲಾಗಿದೆ. ಜನರಿಗೆ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಸಿಗಲಿದೆ. ಉತ್ತರ ಬೆಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರ ಬಹುವರ್ಷಗಳ ಕನಸಾಗಿದ್ದ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಕೊನೆಗೂ ಚಾಲನೆ ಲಭಿಸಿದೆ ಎಂದು ಸಚಿವರಾದ ಕೃಷ್ಣ ಬೈರೇಗೌಡರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಯಲಹಂಕ ತಾಲ್ಲೂಕು ಬೆಳ್ಳಹಳ್ಳಿಯಲ್ಲಿ ಮತ್ತು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಪಶುಸಂಗೋಪನೆ ಮತ್ತು ಕೃಷಿ ಇಲಾಖೆ ಆವರಣದಲ್ಲಿ ತಲಾ ರೂ.75.00 ಕೋಟಿಗಳ ಅಂದಾಜು ಮೊತ್ತದಲ್ಲಿ ಪ್ರತ್ಯೇಕವಾಗಿ 125 ಹಾಸಿಗೆಗಳ ಸಾಮರ್ಥ್ಯದ ಎರಡು ಅತ್ಯಾಧುನಿಕ ಮತ್ತು ಸುಸಜ್ಜಿತ ಆಸ್ಪತ್ರೆಗಳ ಕಟ್ಟಡಗಳನ್ನು ನಿರ್ಮಿಸುವ ಕೆಲಸಕ್ಕೆ ಗುದ್ದಲಿ ಪೂಜೆ-ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕ್ಷೇತ್ರದಲ್ಲಿ 125 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಭವಿಷ್ಯದಲ್ಲಿ ಇದನ್ನು ಇಡೀ ಉತ್ತರ ಬೆಂಗಳೂರಿಗೇ ಪ್ರಮುಖ ಸೂಪರ್ ಸ್ಪೆಷಾಲಿಟಿ ಆರೋಗ್ಯ ಕೇಂದ್ರವನ್ನಾಗಿ ವಿಸ್ತರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಎಂ.ಎಸ್. ರಾಮಯ್ಯ ಕಾಲೇಜು ಮತ್ತು ರಿಂಗ್ ರಸ್ತೆಯಿಂದ ಆರಂಭವಾಗಿ ನಾರಾಯಣಪುರ ಗಡಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ವಿಸ್ತರಿಸಿರುವ ಈ ವಿಶಾಲ ಕ್ಷೇತ್ರದಲ್ಲಿ ಪ್ರತ್ಯೇಕ ತಾಲೂಕು ಕೇಂದ್ರವಿಲ್ಲದಿರುವುದು ಇಷ್ಟು ದಿನ ದೊಡ್ಡ ಕೊರತೆಯಾಗಿತ್ತು. ಸಾಮಾನ್ಯವಾಗಿ ಸರ್ಕಾರದ ನೀತಿಯಂತೆ ತಾಲೂಕು ಕೇಂದ್ರಗಳಲ್ಲಿ ಮಾತ್ರ ತಾಲೂಕು ಮಟ್ಟದ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತದೆ.
ಈ ಕ್ಷೇತ್ರದ ಒಂದು ಭಾಗ ಯಲಹಂಕಕ್ಕೂ, ಮತ್ತೊಂದು ಭಾಗ ಕೆ.ಆರ್. ಪುರ ತಾಲೂಕಿಗೂ ಸೇರುವುದರಿಂದ, ಸಾರ್ವಜನಿಕರಿಗೆ ದೊಡ್ಡ ಸರ್ಕಾರಿ ಆಸ್ಪತ್ರೆಯ ಸೌಲಭ್ಯ ಸಿಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಮನಗಂಡು ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ನಡೆಸಿದ ಪ್ರಯತ್ನದ ಫಲವಾಗಿ, ಇಂದು 125 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಅಡಿಪಾಯ ಬಿದ್ದಿದೆ ಎಂದರು.
ಪ್ರಸ್ತುತ ಶಂಕುಸ್ಥಾಪನೆಗೊಂಡಿರುವ ಆಸ್ಪತ್ರೆಯು ನೆಲಮಹಡಿ ಸೇರಿದಂತೆ ಒಟ್ಟು ಮೂರು ಮಹಡಿಗಳನ್ನು ಹೊಂದಿರಲಿದ್ದು, ವಿವಿಧ ವೈದ್ಯಕೀಯ ತಜ್ಞರ ವಿಭಾಗಗಳ ಸೌಲಭ್ಯವನ್ನು ಒಳಗೊಂಡಿರಲಿದೆ. ಇದಿಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಇನ್ನು ಎರಡು ಮಹಡಿಗಳನ್ನು ಹೆಚ್ಚುವರಿಯಾಗಿ ನಿರ್ಮಿಸಿ, ಆಸ್ಪತ್ರೆಯ ಒಟ್ಟು ಹಾಸಿಗೆಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸುವ ಯೋಜನೆಯಿದೆ ಎಂದು ಮಾಹಿತಿ ನೀಡಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಆಸ್ಪತ್ರೆಯ ಹಿಂಭಾಗದಲ್ಲಿ ಲಭ್ಯವಿರುವ ಎರಡು ಎಕರೆ ಜಾಗವನ್ನು ಭವಿಷ್ಯದ ಸೂಪರ್ ಸ್ಪೆಷಾಲಿಟಿ ಘಟಕಕ್ಕೆ ಕಾಯ್ದಿರಿಸಲಾಗಿದ್ದು, ಮುಂದೆ ಇದೊಂದು ಬೃಹತ್ ಆರೋಗ್ಯ ಕೇಂದ್ರವಾಗಿ ರೂಪುಗೊಳ್ಳಲಿದೆ. ಇದರ ಜೊತೆಗೆ, ಜಿಬಿಎ ವತಿಯಿಂದ ಸಿಂಗಾಪುರ ಪ್ರದೇಶದಲ್ಲಿ ನಿರ್ಮಿಸಲಾಗಿರುವ 60 ಹಾಸಿಗೆಗಳ ಆಸ್ಪತ್ರೆಯ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಈ ಆಸ್ಪತ್ರೆಯು ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಮುಕ್ತಾಯಗೊಳ್ಳಲಿದ್ದು, ತಕ್ಷಣದ ಆರೋಗ್ಯ ಅಗತ್ಯತೆಗಳಿಗೆ ಸ್ಪಂದಿಸಲಿದೆ ಎಂದರು.
ಈ ನೂತನ ಆರೋಗ್ಯ ಯೋಜನೆಯಿಂದ ಥಣಿಸಂದ್ರ, ಕೆಂಪಾಪುರ, ಕೋಗಿಲು, ನಾಗವಾರ, ಹೆಗಡೆನಗರ, ಜಾಲಹೋಬಳಿ, ಮಾರೇನಹಳ್ಳಿ ಪಂಚಾಯಿತಿ, ಸಾತನೂರು ಪಂಚಾಯಿತಿ ಹಾಗೂ ಬಾಗಲೂರು ಪಂಚಾಯಿತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ ಅಪಾರ ಅನುಕೂಲವಾಗಲಿದೆ.
ಈ ಭಾಗಗಳಲ್ಲಿ ಶ್ರಮಿಕ ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಭರಿಸಲು ಕಷ್ಟಪಡುವ ಬಡ ಕುಟುಂಬಗಳಿಗೆ ಈ ಆಸ್ಪತ್ರೆ ಆಸರೆಯಾಗಲಿದೆ. ನಾಲ್ಕು ಪಥಗಳ ಸುಸಜ್ಜಿತ ರಸ್ತೆ ಸಂಪರ್ಕವಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ಸುಲಭವಾಗಿ ಆಸ್ಪತ್ರೆಯನ್ನು ತಲುಪಬಹುದಾಗಿದೆ ಎಂದರು.


Click it and Unblock the Notifications
