ಕ್ಯಾನ್ಸಲ್ ಮಾಡಿದ್ರೆ ₹20 ಫೈನ್.. ಟಿಪ್ಸ್ ಕೊಟ್ರೆ ಮಾತ್ರ ರೈಡ್, ಬೆಂಗಳೂರಿನಲ್ಲಿ ಆಟೋ ಚಾಲಕರಿಂದ ಪ್ರಯಾಣಿಕರ ಸುಲಿಗೆ
ಬೆಂಗಳೂರು, ಆಗಸ್ಟ್ 13: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ದಿನಬಳಕೆ ವಸ್ತುಗಳ ದರ ಏರಿಕೆಯಿಂದಾಗಿ ಬೇಸತ್ತಿರುವ ಸಾಮಾನ್ಯ ಜನರಿಗೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಆ್ಯಪ್ ಆಧಾರಿತ ಆಟೋ ಸೇವೆ ಸಂಸ್ಥೆಗಳು ಪ್ರಯಾಣಿಕರ ಬಳಿ ಹೆಚ್ಚು ಹಣವನ್ನು ಪೀಕುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಆಕ್ರೋಶಗಳು ಭುಗಿಲೆದ್ದಿವೆ.
ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರು ಮತ್ತು ಆ್ಯಪ್ ಆಧಾರಿತ ಆಟೋ ಸೇವಾ ಸಂಸ್ಥೆಗಳ ದರ ಏರಿಕೆಯಿಂದ ಪ್ರಯಾಣಿಕರು ಕಂಗಲಾಗಿದ್ದಾರೆ. ಓಲಾ, ಉಬರ್, ರ್‍ಯಾಪಿಡೋ ಹಾಗೂ 'ನಮ್ಮ ಯಾತ್ರಿ'ಯಂತಹ ಪ್ರಮುಖ ಆ್ಯಪ್ ಆಧಾರಿತ ಸಂಸ್ಥೆಗಳು ಸರ್ಕಾರ ನಿಗದಿಪಡಿಸಿದ ದರಕ್ಕಿಂತ 2ರಿಂದ 3 ಪಟ್ಟು ಹೆಚ್ಚುವರಿ ಹಣ ವಸೂಲಿ ಮಾಡುತ್ತಿವೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಆಟೋ ಚಾಲಕರಿಂದ ಪ್ರಯಾಣಿಕರ ಸುಲಿಗೆ
ಸಿಲಿಕಾನ್ ಸಿಟಿಯಲ್ಲಿ ಸದ್ಯ 3 ಲಕ್ಷಕ್ಕೂ ಅಧಿಕ ಆಟೋ ರಿಕ್ಷಾಗಳಿದ್ದು, ಇವುಗಳಲ್ಲಿ ಬಹುಪಾಲು ವಾಹನಗಳು ಆ್ಯಪ್ ಆಧಾರಿತ ಸೇವೆ ಒದಗಿಸುತ್ತಿವೆ. ಸಾಮಾನ್ಯ ಆಟೋ ಚಾಲಕರು ಅತಿಯಾದ ಬಾಡಿಗೆ ಕೇಳುವುದು ಹಾಗೂ ಕರೆದಲ್ಲಿಗೆ ಬರಲು ನಿರಾಕರಿಸುವುದರಿಂದ ಬಹುತೇಕ ಜನರು ಆ್ಯಪ್‌ಗಳ ಮೂಲಕವೇ ಆಟೋ ಬುಕ್ ಮಾಡುತ್ತಿದ್ದರು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಆ್ಯಪ್ ಸಂಸ್ಥೆಗಳು ಪ್ರಯಾಣಿಕರಿಂದ ಹೆಚ್ಚಿನ ಮೊತ್ತ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ ಎಂದು ವಿಜಯ ಕರ್ನಾಟಕದ ವರದಿ ಮಾಡಿದೆ.
3 ಪಟ್ಟು ಹೆಚ್ಚು ದರ ಹೆಚ್ಚಳ
ನಗರದಲ್ಲಿ ಟ್ರಾಫಿಕ್ ಹೆಚ್ಚಿರುವ 'ಪೀಕ್ ಅವರ್' ಮತ್ತು ಮಳೆ ಬರುವ ಸಮಯದಲ್ಲಿ ಆ್ಯಪ್‌ಗಳಲ್ಲಿ ಸಾಮಾನ್ಯಕ್ಕಿಂತ 3 ಪಟ್ಟು ಹೆಚ್ಚು ದರ ತೋರಿಸಲಾಗುತ್ತದೆ. ಕೆಲವೊಮ್ಮೆ ಬುಕಿಂಗ್ ಮಾಡುವಾಗ 200 ರೂಪಾಯಿ ತೋರಿಸಿದರೆ, ಪ್ರಯಾಣ ಮುಗಿದು ಇಳಿಯುವಷ್ಟರಲ್ಲಿ ದರವು 230ರಿಂದ 250 ರೂಪಾಯಿಗೆ ಏರಿಕೆ ಆಗಿರುತ್ತದೆ.
ಪ್ರಯಾಣಿಕರಿಗೆ 20 ರೂಪಾಯಿ ದಂಡ
ಆ್ಯಪ್‌ನಲ್ಲಿ ಟ್ರಿಪ್ಸ್ ಕ್ಯಾನ್ಸಲ್ ಮಾಡಿದರೆ ಪ್ರಯಾಣಿಕರಿಗೆ 20 ರೂಪಾಯಿ ದಂಡ ವಿಧಿಸಲಾಗುತ್ತದೆ. ಜೊತೆಗೆ ಹೆಚ್ಚಿನ ಟಿಪ್ಸ್ ನೀಡಿದರೆ ಮಾತ್ರ ಬುಕಿಂಗ್ ಸ್ವೀಕರಿಸುವಂತಹ ವ್ಯವಸ್ಥೆಯಿಂದಾಗಿ ಕೇವಲ 2-3 ಕಿಲೋ ಮೀಟರ್‌ಗೆ ಬರೋಬ್ಬರಿ 120ರಿಂದ 150 ರೂಪಾಯಿವರೆಗೆ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಈ ಕುರಿತು ಪ್ರಯಾಣಿರೊಬ್ಬರು ಪ್ರತಿಕ್ರಿಯಿಸಿ 'ಆ್ಯಪ್ ಆಧಾರಿತ ಸಂಸ್ಥೆಗಳು ತಮಗೆ ಇಷ್ಟ ಬಂದಂತೆ ದರ ನಿಗದಿಪಡಿಸುತ್ತಿದ್ದು, ಇದಕ್ಕೆ ಸರ್ಕಾರ ತಕ್ಷಣವೇ ಕಡಿವಾಣ ಹಾಕಬೇಕು. ಬಹುತೇಕ ಆಟೋ ಚಾಲಕರು ಮೀಟರ್ ಪ್ರಕಾರ ಬರುವುದಿಲ್ಲ. ಸರ್ಕಾರ ಬೈಕ್, ಟ್ಯಾಕ್ಸಿಗಳಿಗೂ ಸೂಕ್ತ ಮಾರ್ಗಸೂಚಿ ಮತ್ತು ಮಾನದಂಡ ಹೊರಡಿಸಬೇಕು,' ಎಂದು ಮನವಿ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಇದೀಗ ಮತ್ತೆ ಆಟೋ ದರ ಏರಿಕೆಯಿಂದ ಪ್ರಯಾಣಿಕರ ಗಾಯದ ಮೇಲೆ ಬರೆ ಎಳೆದಂತಾಗಿದೆ.


Click it and Unblock the Notifications
