Bengaluru Airport Metro: ಬಹುನಿರೀಕ್ಷಿತ ಬೆಂಗಳೂರು ವಿಮಾನ ನಿಲ್ದಾಣ ಮೆಟ್ರೋ ಮಾರ್ಗ ಕಾರ್ಯಾರಂಭದ ದಿನಾಂಕ ರಿವೀಲ್
Airport Metro Line: ಬೆಂಗಳೂರು ನಮ್ಮ ಮೆಟ್ರೋ ಜಾಲ ವಿಸ್ತರಣೆ ಆಗುತ್ತಲಿದೆ. ಇದೀಗ ಬಹುನಿರೀಕ್ಷಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೆಟ್ರೋ ಮಾರ್ಗ ಕಾರ್ಯಾರಂಭಗೊಳಿಸುವ ದಿನಾಂಕವನ್ನು ಬಿಎಂಆರ್‌ಸಿಎಲ್ ರಿವೀಲ್ ಮಾಡಿದೆ. ಹಾಗಾದ್ರೆ ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ನಗರದ ಬಹುತೇಕ ಮಂದಿ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಹಾಗೂ ಸಮಯ ಉಳಿತಾಯ ಮಾಡಲು ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಹೀಗೆ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಮೆಟ್ರೋ ಜಾವ ವಿಸ್ತರಣೆ ಮಾಡಲಾಗುತ್ತಿದೆ. ಇದೀಗ ಬಹುನಿರೀಕ್ಷಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೆಟ್ರೋ ಮಾರ್ಗ ಕಾರ್ಯಾರಂಭಗೊಳಿಸುವ ಬಗ್ಗೆ ಬಿಗ್ ಅಪ್ಡೇಟ್ ಮಾಹಿತಿ ಲಭ್ಯವಾಗಿದೆ.

ಕಾರ್ಯಾರಂಭ ಯಾವಾಗ?: ನಗರದ ಬಹುನಿರೀಕ್ಷಿತ ವಿಮಾನ ನಿಲ್ದಾಣ ಮೆಟ್ರೋ ಮಾರ್ಗವನ್ನು 2027ರ ಅಂತ್ಯದೊಳಗೆ ಕಾರ್ಯಾರಂಭಗೊಳಿಸುವ ಗುರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಹೊಂದಿದೆ. ಈ ಮಾರ್ಗ ಪೂರ್ಣಗೊಂಡ ನಂತರ, ಬೆಂಗಳೂರು ಮೆಟ್ರೋ ಜಾಲವು 175 ಕಿಲೋ ಮೀಟರ್ ವಿಸ್ತೀರ್ಣವನ್ನು ತಲುಪಲಿದ್ದು, ಇದು ನಗರದ ಮೆಟ್ರೋ ಇತಿಹಾಸದಲ್ಲೇ ಅತಿದೊಡ್ಡ ಏಕೈಕ ವಿಸ್ತರಣೆಯಾಗಿದೆ.
ಬಿಎಂಆರ್‌ಸಿಎಲ್ ಸಲಹೆಗಾರರು ಹೇಳಿದ್ದೇನು?: ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಮತ್ತು ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ ಜಂಟಿಯಾಗಿ ಸಭೆ ಆಯೋಜಿಸಲಾಗಿತ್ತು. ಈ ಬೆಂಗಳೂರಿನ ನಗರ ಸವಾಲು ಕುರಿತಾದ ಪ್ಯಾನೆಲ್ ಚರ್ಚೆಯ ವೇಳೆ ಬಿಎಂಆರ್‌ಸಿಎಲ್‌ನ ಸಲಹೆಗಾರ ಅಭಯ್ ಕುಮಾರ್ ರೈ ಈ ಮಾಹಿತಿಯನ್ನು ನೀಡಿದರು.
ರೋಡ್‌ಮ್ಯಾಪ್ ಬಗ್ಗೆ ವಿವರಣೆ: ರೈ ಅವರು ಬಿಎಂಆರ್‌ಸಿಎಲ್ ವಿಸ್ತರಣೆಯ ರೋಡ್‌ಮ್ಯಾಪ್ ಕುರಿತಾಗಿಯೂ ವಿವರಿಸಿದರು. 44 ಕಿಲೋ ಮೀಟರ್ ವ್ಯಾಪ್ತಿಯ ಹಂತ-3 (ಫೇಸ್-3) ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿದ್ದು, ಹಂತ-3ಎ (ಫೇಸ್-3ಎ)ಗೆ ಸಂಬಂಧಿಸಿದ 36 ಕಿಲೋ ಮೀಟರ್ ಉದ್ದದ ವಿಸ್ತೃತ ಯೋಜನಾ ವರದಿಗಳು (ಡಿಪಿಆರ್‌ಗಳು) ತಯಾರಾಗಿದ್ದು, ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ಹೇಳಿದರು.
ಅಷ್ಟೇ ಅಲ್ಲದೆ, ಭವಿಷ್ಯದ ಕಾರಿಡಾರ್‌ಗಳಿಗಾಗಿ 200 ಕಿಲೋ ಮೀಟರ್‌ಗಿಂತ ಹೆಚ್ಚು ಉದ್ದದ ಮಾರ್ಗಗಳ ಬಗ್ಗೆ ಸಾಧ್ಯತಾ ಅಧ್ಯಯನಗಳು ನಡೆಯುತ್ತಿದ್ದು, ಇದು ಬೆಂಗಳೂರಿನ ದೀರ್ಘಾವಧಿಯ ಸಂಚಾರ ಅಗತ್ಯಗಳನ್ನು ಪೂರೈಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು. ಇನ್ನೂ ಮೆಟ್ರೋ ಕಾರ್ಯಾಚರಣೆಗಳಲ್ಲಿ ಪುನರುತ್ಪಾದಕ ಬ್ರೇಕಿಂಗ್ ಸೇರಿದಂತೆ ಕಾರ್ಯಕ್ಷಮ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರ ಮೂಲಕ ಶೇಕಡ 30ಕ್ಕಿಂತ ಹೆಚ್ಚು ವಿದ್ಯುತ್ ಉಳಿತಾಯ ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದರು.
ಈ ಪ್ಯಾನೆಲ್ ಚರ್ಚೆಯಲ್ಲಿ ಸಂಚಾರ (ಮೊಬಿಲಿಟಿ), ನೀರು, ಹವಾಮಾನ ಮತ್ತು ಮೂಲಸೌಕರ್ಯ ಕ್ಷೇತ್ರಗಳ ತಜ್ಞರು ಭಾಗವಹಿಸಿದ್ದರು. ನಗರ ಎದುರಿಸುತ್ತಿರುವ ಸ್ಥಿರತೆಯ ಸವಾಲುಗಳಾದ ವಿಭಜಿತ ಸಂಚಾರ ವ್ಯವಸ್ಥೆಗಳು, ನೀರಿನ ಅಸುರಕ್ಷತೆ ಹಾಗೂ ನಿಯಂತ್ರಣ ಚೌಕಟ್ಟುಗಳು ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನದ ನಡುವಿನ ಅಂತರ ಕುರಿತು ಚರ್ಚೆ ನಡೆಸಲಾಯಿತು.
ಬಿಸಿಐಸಿ ಸ್ಥಿರತೆ ತಜ್ಞರ ಸಮಿತಿಯ ಅಧ್ಯಕ್ಷ ರಾಜೇಶ್ ಕುಮಾರ್ ಝಾ ಅವರು ಮಾತನಾಡಿ, ಪರಿಸರ ಸಂರಕ್ಷಣೆಯೊಂದಿಗೆ ಜವಾಬ್ದಾರಿಯುತ ಅಭಿವೃದ್ಧಿ ಮಾಡಿದರೆ, ಬೆಂಗಳೂರಿನ ಪಾತ್ರವನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಒತ್ತಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (ಬಿಸಿಐಸಿ) ಮತ್ತು ಗೃಹಾ ಕೌನ್ಸಿಲ್ (GRIHA Council) ನಡುವಿನ ಒಪ್ಪಂದ ಪತ್ರಕ್ಕೆ (ಎಂಒಯು) ಸಹಿ ಹಾಕಲಾಗಿದ್ದು, ಬೆಂಗಳೂರಿನ ಕೈಗಾರಿಕಾ ಹಾಗೂ ಕಾರ್ಪೊರೇಟ್ ಕ್ಷೇತ್ರಗಳಲ್ಲಿ ಸ್ಥಿರ ಮೂಲಸೌಕರ್ಯ ಸೇರಿದಂತೆ ಇನ್ನಿತರೆ ಉತ್ತಮ ಕ್ರಮಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.
ಅಷ್ಟೇ ಅಲ್ಲದೆ, ಸ್ಪ್ರಿಂಗರ್ 'ಬೆಸ್ಟ್ ಪ್ರಾಕ್ಟೀಸಸ್ ಇನ್ ಸಸ್ಟೈನಬಲ್ ಬಿಲ್ಟ್ ಎನ್ವಿರಾನ್ಮೆಂಟ್ಸ್ - ಕೇಸ್ ಸ್ಟಡೀಸ್ ಫ್ರಮ್ ಇಂಡಿಯಾ ಅಂಡ್ ಆಸ್ಟ್ರೇಲಿಯಾ' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದರಲ್ಲಿ ನಗರ ಪರಿವರ್ತನೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಚೌಕಟ್ಟುಗಳ ಬಗ್ಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ.












Click it and Unblock the Notifications