ಬಿಬಿಎಂಪಿ ಬೊಕ್ಕಸದಲ್ಲಿ ಸಾವಿರ ರು.ನೂ ಇಲ್ವಾ?
ಬೆಂಗಳೂರು, ಜ.7 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಜಾನೆ ಬರಿದಾಗಿದೆ ಎಂಬ ಸತ್ಯ ಬಹಿರಂಗವಾಗಿ ಹಲವು ದಿನಗಳು ಕಳೆದಿವೆ. ಆದರೆ, ಪಾಲಿಕೆ ಆರ್ಥಿಕ ಸ್ಥಿತಿ ಯಾವ ಮಟ್ಟಿಗೆ ಹದ ಗೆಟ್ಟಿದೆ ಎಂಬುದಕ್ಕೆ ಸಾಕ್ಷಿ ದೊರಕಿದೆ. ಬಿಬಿಎಂಪಿಯ 1 ಸಾವಿರ ರೂ. ಚೆಕ್ ಬೌನ್ಸ್ ಆಗಿದ್ದು, ಪಾಲಿಕೆಯ ಆರ್ಥಿಕ ಸ್ಥಿತಿಗೆ ಹಿಡಿದ ಕೈಗನ್ನಡಿ ಅಂತಿದೆ.
ಪಾಲಿಕೆ ಆಯುಕ್ತ ಲಕ್ಷ್ಮೀ ನಾರಾಯಣ ಅವರ ಮನೆಯ ದೂರವಾಣಿಯ ಬಿಲ್ ಪಾವತಿಗಾಗಿ ಬಿಬಿಎಂಪಿ 1 ಸಾವಿರ ರೂಪಾಯಿ ಚೆಕ್ ನೀಡಿತ್ತು. ಆದರೆ, ಬಿಬಿಎಂಪಿಯ ಕೆನರಾ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದ ಕಾರಣ ಈ ಚೆಕ್ ಬೌನ್ಸ್ ಆಗಿದೆ. ಕೆಲವು ದಿನಗಳ ಹಿಂದೆ ಪಾಲಿಕೆ 6 ಸಾವಿರ ರೂ. ಚೆಕ್ ಸಹ ಬೌನ್ಸ್ ಆಗಿತ್ತು. ಈ ಘಟನೆಗಳಿಂದಾಗಿ ಬಿಬಿಎಂಪಿ ತೀವ್ರ ಮುಖಭಂಗ ಅನುಭವಿಸಿದೆ. [ಬಿಬಿಎಂಪಿ ಮಾನ ಹಾರಜು ಹಾಕಿದ ಬಿಎಸ್ಎನ್ ಎಲ್]

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಷಿಕ ಸುಮಾರು 5000 ಕೋಟಿ ರೂ ಆದಾಯ ಗಳಿಸುತ್ತದೆ. ಆದರೆ, ಸದ್ಯ 500 ರೂ ಚೆಕ್ ಸಹ ಬೌನ್ಸ್ ಆಗುತ್ತಿದ್ದು ಬಿಬಿಎಂಪಿ ಖಜಾನೆ ಖಾಲಿ ಆಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಬಿಎಂಪಿ ಆಯುಕ್ತರ ಮನೆಯ ದೂರವಾಣಿ ಬಿಲ್ ಕಟ್ಟಲು ನೀಡಿದ ಚೆಕ್ ಬೌನ್ಸ್ ಆಗಿದ್ದು, ಪಾಲಿಕೆ ಆಯುಕ್ತರಿಗೆ ತೀವ್ರ ಮುಖಭಂಗ ಉಂಟುಮಾಡಿದೆ.
ಬಿಬಿಎಂಪಿ ಕೆನರಾ ಬ್ಯಾಂಕ್ ನಲ್ಲಿ ಹೊಂದಿರುವ ಖಾತೆಗಳಿಗೆ ಸರ್ವಿಸ್ ಟ್ಯಾಕ್ಸ್ ಪಾವತಿ ಮಾಡದ ಹಿನ್ನಲೆಯಲ್ಲಿ ಪಾಲಿಕೆಯ 2 ಅಕೌಂಟ್ ಗಳನ್ನು ಒಂದು ವಾರದ ಹಿಂದೆ ಬ್ಲಾಕ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೂ ಸಹ ಪಾಲಿಕೆ ಈ ಖಾತೆಗಳಿಗೆ ಚೆಕ್ ನೀಡುತ್ತಿದ್ದು, ಅದು ಬೌನ್ಸ್ ಆಗುತ್ತಿದೆ. ಇದರಿಂದ ಪಾಲಿಕೆ ಆರ್ಥಿಕ ಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂಬುದು ಬಹಿರಂಗವಾಗಿದೆ.
ಕಳೆದ ವಾರ ಕೆನರಾ ಬ್ಯಾಂಕ್ ಗೆ ಟೌನ್ ಹಾಲ್ಅನ್ನು ಅಡವಿಡಲು ಬಿಬಿಎಂಪಿ ನಿರ್ಧರಿಸಿ ವಿವಾದಕ್ಕೆ ಸಿಲುಕಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶದಿಂದಾಗಿ ಪಾಲಿಕೆ ಅಡವಿಡುವ ಕಾರ್ಯವನ್ನು ಹಿಂಪಡೆದಿತ್ತು. ಪಾಲಿಕೆ ಬೆಂಗಳೂರಿನ ತನ್ನ 12 ಆಸ್ತಿಗಳನ್ನು ಈಗಾಗಲೇ ಬ್ಯಾಂಕ್ ಗಳಿಗೆ ಅಡವಿಟ್ಟಿದೆ. ಆದರೆ, ಅದನ್ನು ಬಿಡಿಸಿಕೊಳ್ಳುವ ಬದಲು ಪುನಃ ಅಡವಿಡಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿತ್ತು. [ಟೌನ್ ಹಾಲ್ ಅಡವಿಡಲು ಬಿಬಿಎಂಪಿ ಸಜ್ಜು]











Click it and Unblock the Notifications