ಬೆಂಗಳೂರಿನ ಈ ಆಸ್ತಿದಾರರಿಗೆ ಮತ್ತೆ ಶಾಕ್ ಕೊಟ್ಟ ಬಿಬಿಎಂಪಿ!
ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಶಾಕ್ ನೀಡುವುದಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಈಗಾಗಲೇ ಒಂದೊಂದು ವಲಯದಲ್ಲೂ ಈ ಕಾರ್ಯಾಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಬೆಂಗಳೂರಿನಾದ್ಯಂತ ಈಗಾಗಲೇ ಅನಧಿಕೃತ ಹಾಗೂ ಕಟ್ಟಡ ನಕ್ಷೆ ಮಂಜೂರಾತಿ ಉಲ್ಲಂಘನೆ ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಭರ್ಜರಿಯಾಗಿ ನಡೆಸಲಾಗಿದೆ.
ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಯಲಹಂಕ ವಲಯದಲ್ಲಿ ಈ ಬೃಹತ್ ಕಾರ್ಯಾಚರಣೆಯನ್ನು ನಡೆಸಿತ್ತು. ಇದೀಗ ಮಹದೇವಪುರ ವಲಯದಲ್ಲೂ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಮಹದೇವಪುರ ವಲಯದ ಬೈರತಿ ವಾರ್ಡ್ 99ರ ವ್ಯಾಪ್ತಿಯಲ್ಲಿ ಬೃಂದಾವನ ಲೇಔಟ್‌ನಲ್ಲಿ ನಕ್ಷೆ ಮಂಜೂರಾತಿ ಪಡೆಯದೇ ಅನಧಿಕೃತವಾಗಿ ನಿರ್ಮಿಸಿದ ಕಟ್ಟಡ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಲಯ ಆಯುಕ್ತರಾದ ಕೆ.ಎನ್.ರಮೇಶ್ ಅವರ ನಿದೇರ್ಶನದಂತೆ ಇಂದು ಸೈಟ್ ನಂ.5, 6ನೇ ಅಡ್ಡರಸ್ತೆ, ಅಯ್ಯಪ್ಪನಗರ, ಕೆ.ಆರ್.ಪುರ, ಬೆಂಗಳೂರು-36 ಮಾಲೀಕರಾದ ಕಿಶೋರ್ ಎಂಬುವರು 20.7 x 27.3 ಮೀಟರ್ ಸೈಟ್‌ನಲ್ಲಿ ನಕ್ಷೆ ಮಂಜೂರಾತಿ ಪಡೆಯದೇ ಅನಧಿಕೃತವಾಗಿ ಸ್ಟಿಲ್ಟ್ + ನಾಲ್ಕು ಮಹಡಿಗಳ ಕಟ್ಟಡವನ್ನು ನಿರ್ಮಾಣ ಮಾಡುತ್ತಿರುತ್ತಾರೆ.
ಈ ಕಟ್ಟಡ ಮಾಲೀಕರಿಗೆ ಈಗಾಗಲೇ ಬಿಬಿಎಂಪಿ ನಿಯಮಗಳನ್ವಯ ನೋಟೀಸ್‌ಗಳನ್ನು ಜಾರಿ ಮಾಡಿದ್ದರೂ ಸಹ ಕಟ್ಟಡ ನಿರ್ಮಾಣ ಕಾರ್ಯ ನಿಲ್ಲಿಸದ ಪರಿಣಾಮ ಇಂದು ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮೂರು ಕೊರೆಯುವ ಯಂತ್ರ ಹಾಗೂ 10 ಸಿಬ್ಬಂದಿಗಳ ಮೂಲಕ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ತೆರವುಗೊಳಿಸಲು ತಗುಲಿದ ವೆಚ್ಚವನ್ನು ಕಟ್ಟಡದ ಮಾಲೀಕರಿಂದ ವಸೂಲಿ ಮಾಡಲಾಗುವುದು.
ಕಟ್ಟಡ ನಕ್ಷೆ ಮಂಜೂರಾತಿ ನಿಯಮ ಉಲ್ಲಂಘನೆ ಮಾಡುವವರಿಗೆ ಎಚ್ಚರಿಕೆ: ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ಹಾಗೂ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದರಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳುವುದು ಸಹ ಪ್ರಮುಖವಾಗಿದೆ.
ಈಗಾಗಲೇ ಸುಪ್ರೀಂ ಕೋರ್ಟ್‌ನ ಆದೇಶದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಹ ಈಚೆಗೆ ಪ್ರಮುಖ ಸೂಚನೆಯೊಂದನ್ನು ನೀಡಿದ್ದರು. ಈ ಎರಡೂ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ.












Click it and Unblock the Notifications