ಬೆಂಗಳೂರಿನ ಸ್ವಚ್ಛತೆಗೆ ಮಾಸ್ಟರ್ ಪ್ಲ್ಯಾನ್ ರೂಪಿಸಿದ ಬಿಬಿಎಂಪಿ!
ಬೆಂಗಳೂರಿನಲ್ಲಿ ಕಸದ ಸಮಸ್ಯೆ ತಪ್ಪಿಸಲು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಹತ್ವದ ಹೆಜ್ಜೆಯನ್ನು ಇರಿಸಿದೆ. ಬೆಂಗಳೂರು ನಗರ ಸ್ವಚ್ಛ, ಸುಂದರವಾಗಿ ಕಾಣುವ ನಿಟ್ಟಿನಲ್ಲಿ ಪೌರಕಾರ್ಮಿಕರು ಸದಾ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಾರೆ. ಅದರ ಜೊತೆಗೆ ರಸ್ತೆ ಬದಿ ಬಿಸಾಡುವಂತಹ ಕಸವನ್ನು ತೆರವುಗೊಳಿಸುವ ಸಲುವಾಗಿ ಸ್ವಚ್ಛತಾ ಅಭಿಯಾನಗಳನ್ನು ಸಹ ಆಯೋಜಿಸಲಾಗುತ್ತದೆ.
ನಗರದಾದ್ಯಂತ ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರು ರಸ್ತೆ ಬದಿ, ಖಾಲಿ ಜಾಗಗಳಲ್ಲಿ ತ್ಯಾಜ್ಯ ಬಿಸಾಡುವಂತಹ ಮನಸ್ಥಿತಿಯಿಂದ ಸ್ವಚ್ಛ ನಗರವನ್ನಾಗಿ ಬದಲಾಯಿಸುವೆಡೆಗೆ ಸಹಕಾರಿಯಾಗಿಸಿದೆ ಎಂದು ಬಿಬಿಎಂಪಿ ಹೇಳಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್‌ಗಳ ಮೂಲಕ ಪ್ರತಿನಿತ್ಯ ಮನೆ-ಮನೆ ಭೇಟಿ ನೀಡಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೆ, ಸಾರ್ವಜನಿಕರು ಆಟೋ ಟಿಪ್ಪರ್‌ಗಳಿಗೆ ತ್ಯಾಜ್ಯವನ್ನು ನೀಡದೇ ರಾತ್ರಿ ವೇಳೆ ಅಥವಾ ಕೆಲಸಕ್ಕೆ ಹೋಗುವ ಸಮಯದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗ, ಖಾಲಿ ಸ್ಥಳ ಹಾಗೂ ರಾಜಕಾಲುವೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡಿ ಹೋಗುತ್ತಾರೆ. ಇದರಿಂದ ನಗರದ ಸ್ವಚ್ಛತೆಗೆ ಸಮಸ್ಯೆ ಆಗುತ್ತಿದೆ.
ಮುಂದುವರಿದು ತ್ಯಾಜ್ಯ ಬಿಸಾಡುವುದರ ಜೊತೆಗೆ ಕಟ್ಟಡಗಳ ಭಗ್ನಾವಶೇಷಗಳನ್ನು ಸಹ ರಸ್ತೆ ಬದಿ, ಖಾಲಿ ಜಾಗದಲ್ಲಿ ಸುರಿದು ಹೋಗುತ್ತಾರೆ. ಅದಲ್ಲದೆ ಅನುಪಯುಕ್ತ ವಸ್ತುಗಳನ್ನು ಕೂಡ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ. ಆದ್ದರಿಂದ ಪಾಲಿಕೆಯ 8 ವಲಯಗಳಲ್ಲಿ ಬರುವ ಎಲ್ಲಾ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ಶಾಶ್ವತವಾಗಿ ತಪ್ಪಿಸಲು ಕ್ರಮವಹಿಸಲಾಗುತ್ತಿದೆ.
ನಗರದಲ್ಲಿ ಕಸ ಸುರಿಯುವ ಸ್ಥಳ (ಬ್ಲಾಕ್ ಸ್ಪಾಟ್)ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವುದು ನಮ್ಮ ಗುರಿಯಾಗಿದೆ. ಅದಕ್ಕಾಗಿ ದೂರು ಕೇಂದ್ರ ಸ್ಥಾಪಿಸಿ ಪ್ರತ್ಯೇಕವಾಗಿ ವಾಟ್ಸಪ್ ಸಂಖ್ಯೆಯನ್ನು ನೀಡಲಾಗಿದೆ. ಈ ವಾಟ್ಸಪ್ ಸಂಖ್ಯೆಗೆ ಸಂದೇಶದ ಮೂಲಕ ದೂರು ದಾಖಲಿಸಬಹುದಾಗಿದೆ. ನಗರದಲ್ಲಿ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಅಹವಾಲುಗಳನ್ನು ನೋಂದಾಯಿಸಲು ಈ ಕೆಳಗಿನ ನಾಲ್ಕು ಆಯಾಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಂಖ್ಯೆ
* ನಗರದ ಸ್ವಚ್ಛತೆಯ ದೃಷ್ಟಿಯಿಂದ ದೂರು ಕೇಂದ್ರ ಸ್ಥಾಪಿಸಿದೆ. ಅದಕ್ಕಾಗಿ ಪ್ರತ್ಯೇಕ ವ್ಯಾಟ್ಸಪ್ ಸಂಖ್ಯೆ 9448197197 ನೀಡಿದೆ. ಈ ಸಂಖ್ಯೆಗೆ ಛಾಯಾಚಿತ್ರದೊಂದಿಗೆ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದು. ಆ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ತ್ಯಾಜ್ಯ / ಕಸ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಿರುವ ಕುರಿತು ಮಾಹಿತಿ ನೀಡಲಿದ್ದಾರೆ.
* 1533 ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ದೂರು ದಾಖಲಿಸಬಹುದು.
* ಬಿಬಿಎಂಪಿ ಜಾಲತಾಣವಾದ www.bbmp.gov.in ಮುಖಾಂತರವೂ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಹಾಯ ಪಡೆದುಕೊಳ್ಳಬಹುದು.
* ನಮ್ಮ ಬೆಂಗಳೂರು (ಸಹಾಯಕ 2.0) ಆಪ್ ಮೊಬೈಲ್ ತಂತ್ರಾಂಶದ ಮೂಲಕ ದೂರು ದಾಖಲಿಸಬಹುದು.
* ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರಿಗಾಗಿ ಬಿಬಿಎಂಪಿಯು ಸದಾ ಶ್ರಮಿಸುತ್ತಿದ್ದು, ನಾಗರಿಕರು ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪಾಲಿಕೆಯ ಜೊತೆ ಕೈಜೋಡಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾದ ರಮಾಮಣಿ ರವರು ಮನವಿ ಮಾಡಿದ್ದಾರೆ.












Click it and Unblock the Notifications