Breaking: ಬಿಬಿಎಂಪಿ ಚುನಾವಣೆ 2022: ಮತದಾರರ ಅಂತಿಮ ಪಟ್ಟಿ ಪ್ರಕಟ, 79 ಲಕ್ಷ ಮತದಾರರು
ಬೆಂಗಳೂರು, ಸೆಪ್ಟಂಬರ್ 28: ಮುಂಬರಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) -2022 ರ ಚುನಾವಣೆ ಪ್ರಯುಕ್ತ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ದಿಂದ ವಾರ್ಡ್ ವಾರು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಒಟ್ಟು 243 ವಾರ್ಡ್ ಗಳಲ್ಲಿ ಒಟ್ಟು 79,19,563 ಮತದಾರರು ಇದ್ದಾರೆ ಎಂದು ಹೇಳಲಾಗಿದೆ.
2022ರ ಸೆಪ್ಟಂಬರ್ 9ರವರೆಗಿನ ಮತದಾರರ ಮಾಹಿತಿಯನ್ನು ಒದಗಿಸಲಾಗಿದೆ. ಸದರಿ ಮಾಹಿತಿಯನ್ನು ಬಳಸಿ 'ಅಂತಿಮ ಮತದಾರರ ಪಟ್ಟಿ' ಸಿದ್ದಗೊಳಿಸಲಾಗಿದೆ. ಈ ಪೈಕಿ ಪಾಲಿಕೆಯ 243 ವಾರ್ಡ್ ಗಳಲ್ಲಿ ಒಟ್ಟು 79, 19, 563 ಮತದಾರರಿರುತ್ತಾರೆ. ಅದರಲ್ಲಿ 41,14,383 ಪುರುಷರು ಮತ್ತು 38,03,747 ಮಹಿಳಾ ಮತರದಾರರು ಇದ್ದರೆ, 1,433 ಇತರೆ ಮತದಾರರು ಇದ್ದಾರೆ. ಪ್ರಕಟವಾದ ಮತದಾರರ ಪಟ್ಟಿ ಕುರಿತು ಸಾರ್ವಜನಿಕರು ತಮ್ಮ ಹಾಗೂ ಕುಟುಂಬ ಸದಸ್ಯರ ಹೆಸರನ್ನು ಪರಿಶೀಲಿಸಿಕೊಳ್ಳುವಂತೆ ಬಿಬಿಎಂಪಿ ತಿಳಿಸಿದೆ.

ಪ್ರಸ್ತುತದಲ್ಲಿ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯನ್ನು ಬಿಬಿಎಂಪಿ ಅಧಿಕೃತ ವೆಬ್‌ಸೈಟ್ bbmp.gov.in ನಲ್ಲಿ ಹಾಕಲಾಗಿದೆ. ಎಲ್ಲಾ ಮತದಾರರ ನೊಂದಣಾಧಿಕಾರಿ/ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿಗಳಲ್ಲೂ ಹಾಗೂ ವಾರ್ಡ್ ಕಛೇರಿಗಳಲ್ಲೂ ಸಾರ್ವಜನಿಕರ ವೀಕ್ಷಣೆಗೆ ಮಾಹಿತಿ ಮತದಾರರ ಪಟ್ಟಿ ಲಭ್ಯವಿರುತ್ತದೆ.

ಹೊಸದಾಗಿ ಮತದಾರರಾಗಿ ನೊಂದಾಯಿಸಿಕೊಳ್ಳಲು ಮೊಬೈಲ್ ಅಪ್ಲಿಕೇಶನ್ 'ವೋಟರ್ ಹೆಲ್ಫ ಲೈನ್' (Voter Helpline App) ಮತ್ತು ನ್ಯಾಷನಲ್ ವೋಟರ್ಸ ಸರ್ವೀಸ್ ಪೋರ್ಟಲ್ (NVSP) ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಬಿಬಿಎಂಪಿ ತಿಳಿಸಿದೆ.












Click it and Unblock the Notifications