ಬಿಬಿಎಂಪಿ ಕಾರ್ಪೋರೇಟರ್ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೆಂಗಳೂರು, ಜನವರಿ 20 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯನ ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.
ಬಿಬಿಎಂಪಿ ಕಾರ್ಪೋರೇಟರ್ ಬಾಲಕೃಷ್ಣ ಅವರ ಸೊಸೆ ಮೋನಿಕಾ (30) ಆತ್ಮಹತ್ಯೆ ಮಾಡಿಕೊಂಡವರು. ಮೋನಿಕಾ ಸಹಕಾರನಗರದ ನಿವಾಸಿ ಉದ್ಯಮಿ ಪ್ರಕಾಶ್ ಅವರ ಪುತ್ರಿ. ತಂದೆಯ ಮನೆಯಲ್ಲಿಯೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಾಲಕೃಷ್ಣ ಅವರ ಪುತ್ರ ಕಾರ್ತಿಕ್ ಅವರನ್ನು ಮೋನಿಕಾ 2009ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದ ಕಾರಣ ಮೋನಿಕಾ ಅವರು 9 ತಿಂಗಳಿನಿಂದ ಪತಿ ಮತ್ತು ಮಕ್ಕಳನ್ನು ಬಿಟ್ಟು ತವರು ಮನೆಯಲ್ಲಿದ್ದರು.

ಜನವರಿ 18ರಂದು ಪ್ರಕಾಶ್ ಅವರು ಪತ್ನಿ ಜೊತೆ ಬೆಳಗ್ಗೆ 7 ಗಂಟೆಗೆ ಹಾಸನಕ್ಕೆ ತೆರಳಿದ್ದರು. ಸಂಜೆ 4 ಗಂಟೆಯ ಸುಮಾರಿಗೆ ಮೋನಿಕಾ ಅವರ ಗೆಳತಿ ಜಾಯ್ ವರ್ಮಾ ಎಂಬುವವರು ಪ್ರಕಾಶ್ ಅವರಿಗೆ ಕರೆ ಮಾಡಿ, ಮೋನಿಕಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಎಂದು ಹೇಳಿದ್ದರು.
'ನನ್ನ ಜೊತೆ ಫೋನಿನಲ್ಲಿ ಮಾತನಾಡುತ್ತಾ ಬೇಸರ ಮಾಡಿಕೊಂಡಿದ್ದರು. ನಂತರ ಕರೆ ಕಟ್ ಮಾಡಿದರು. ಪುನಃ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಅನುಮಾನಗೊಂಡು ಮನೆಯ ಬಳಿ ಬಂದಾಗ ಬಾಗಿಲು ಹಾಕಲಾಗಿತ್ತು. ಬೆಲ್ ಮಾಡಿದರೂ ಬಾಗಿಲು ತೆಗೆಯಲಿಲ್ಲ' ಎಂದು ಜಾಯ್ ವರ್ಮಾ ಹೇಳಿದ್ದಾರೆ.
'ನಕಲಿ ಕೀ ಮಾಡುವವರ ಮೂಲಕ ಮನೆಯ ಬಾಗಿಲು ಓಪನ್ ಮಾಡಿಸಿದಾಗ ಬೆಡ್ ರೂಂನಲ್ಲಿ ಫ್ಯಾನ್‌ಗೆ ಮೋನಿಕಾ ನೇಣು ಹಾಕಿಕೊಂಡಿದ್ದರು. ಅವರನ್ನು ಇಳಿಸಿ ಆಸ್ಪತ್ರೆಗೆ ದಾಖಲು ಮಾಡಲಾಯಿತು' ಎಂದು ಹೇಳಿಕೆ ನೀಡಿದ್ದಾರೆ.
ಪ್ರಕಾಶ್ ಅವರಿಗೆ ಮೂವರು ಹೆಣ್ಣುಮಕ್ಕಳು. ಮೋನಿಕಾ ಮೊದಲನೆಯವರು. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿಲ್ಲ. ಕೊಡಿಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications