ಬಿಬಿಎಂಪಿ: ಸೋಮಾರಿ ಕೆಲಸಗಾರರ ಗೇಟ್ ಪಾಸ್‌ಗೆ ಆಯುಕ್ತರ ಸೂಚನೆ
ಬೆಂಗಳೂರು, ಮೇ13: ಬಿಬಿಎಂಪಿ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದರು.
ಶೆಟ್ಟಿಹಳ್ಳಿ ವಾರ್ಡ್ ವ್ಯಾಪ್ತಿಯ ವಾರ್ಡ್ ಕಛೇರಿ ಆವರಣದಲ್ಲಿ ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ಗೆ ಭೇಟಿ ನೀಡಿ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ, ಏನಾದರು ಸಮಸ್ಯೆಗಳಿದ್ದರೆ ಕೂಡಲೆ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ತುಂಬಾ ದಿನಗಳಿಂದ ಕೆಲಸಕ್ಕೆ ಬಾರದಿರುವರನ್ನು ತೆಗೆದು ಬೇರೆಯವರನ್ನು ನಿಯೋಜನೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಸ್ವಚ್ಛವಾಗಿರದೇ ಇರುವುದನ್ನು ಕಂಡು, ಆರೋಗ್ಯ ಕೇಂದ್ರಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ತಿಳಿಸಿದರು. ಅದಕ್ಕೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಆರೋಗ್ಯ ಕೇಂದ್ರದಲ್ಲಿ ಪುನರ್ ನವೀಕರಣ ಕೆಲಸ ನಡೆಯುತ್ತಿದ್ದು, ಶೀಘ್ರ ಪೂರ್ಣಗೊಳಿಸಲಾಗುವುದು. ಇದೇ ಸ್ಥಳದಲ್ಲಿರುವ ಉದ್ಯಾನವನ ಪರಿಶೀಲನೆ ನಡೆಸಿ ಮರದ ಎಲೆಗಳ ತ್ಯಾಜ್ಯ ಅವರಣದಲ್ಲೇ ಹಾಕಿರುವುದನ್ನು ಗಮನಿಸಿ ಉದ್ಯಾನವನದಲ್ಲೇ ಕಾಂಪೋಸ್ಟಿಂಗ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ವಾಯುವಿಹಾರ ಮಾರ್ಗ ಸೇರಿದಂತೆ ಸರಿಯಾಗಿ ನಿರ್ವಹಣೆ ಮಾಡಲು ಸೂಚಿಸಿದರು.
ಅಬ್ಬಿಗೆರೆ ಮುಖ್ಯ ರಸ್ತೆ(ಅರಣ್ಯ ರಸ್ತೆ)ಯಿಂದ ವೈ ನಾಗ್ ಜಂಕ್ಷನ್ ಮೂಲಕ ಗಂಗಮ್ಮ ಗುಡಿ ಪೊಲೀಸ್ ಠಾಣೆಯವರೆಗೆ 9.5 ಕೋಟಿ ರೂ. ವೆಚ್ಚದಲ್ಲಿ 1.35 ಕಿ.ಮೀ ಉದ್ದದ 30 ಅಡಿ ರಸ್ತೆಯನ್ನು 80 ಅಡಿಗೆ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆ ಬದಿ ಕಾಲುವೆ, ಪಾದಚಾರಿ ಮಾರ್ಗ ಸೇರಿದಂತೆ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಟ್ರಾನ್ಸ್ ಫರ್ ಸ್ಟೇಷನ್, ಒಣ ತ್ಯಾಜ್ಯ ಸಂಗ್ರಹಣಾ ಘಟಕ ಪರಿಶೀಲನೆ:
ಶೆಟ್ಟಿಹಳ್ಳಿ ವಾರ್ಡ್ ವ್ಯಾಪ್ತಿಯ ಗಂಗಮ್ಮ ಗುಡಿ ಪೊಲೀಸ್ ಠಾಣೆ ಹಿಂಭಾಗವಿರುವ ಟ್ರಾನ್ಸ್ ಫರ್ ಸ್ಟೇಷನ್, ಆಟೋ ಟಿಪ್ಪರ್ ಮಸ್ಟರಿಂಗ್ ಪಾಯಿಂಟ್, ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೇಡರಹಳ್ಳಿ ರಸ್ತೆ ರಾಜಕಾಲುವೆ ಪರಿಶೀಲನೆ:
ಎಸ್ಟಿಪಿ ನಿರ್ಮಾಣಕ್ಕಾಗಿ ಜಲಮಂಡಳಿಯಿಂದ 800 ಎಂಎಂ ಪೈಪ್ ಲೈನ್ ಅನ್ನು ರಾಜಕಾಲುವೆ ಭಾಗದಲ್ಲಿ ಹಾದುಹೋಗಿದೆ. ಕೆಲಸ ಇನ್ನೂ ಪ್ರಗತಿಯಲ್ಲಿರುವುದರಿಂದ ಮಳೆ ಪ್ರಾರಂಭವಾದರೆ ರಾಜಕಾಲುವೆಯಲ್ಲಿ ಮಳೆ ನೀರು ಸರಿಯಾಗಿ ಹರಿಯದೆ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗುವ ಸಂಭವ ಹೆಚ್ಚಿದೆ. ಆದ್ದರಿಂದ ಕೂಡಲೆ ಕಾಮಗಾರಿಯನ್ನು ಪೂರ್ಣಗೊಳಿಸಿ ಹೂಳೆತ್ತಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಜಲಮಂಡಳಿ ಅಧಿಕಾರಿಗೆ ಸೂಚನೆ ನೀಡಿದರು.ಮೇಡರಹಳ್ಳಿ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ ಕುಡಿಯುವ ನೀರು ಹಾಗೂ ಒಳಚರಂಡಿ ಕೆಲಸ ಪೂರ್ಣಗೊಂಡಿದ್ದು, ರಸ್ತೆ ಪುನಶ್ಚೇತನ ಕಾರ್ಯವನ್ನು ಇನ್ನೂ ಪೂರ್ಣಗೊಳಿಸದೇ ಇರುವುದನ್ನು ಗಮನಿಸಿ ಕೂಡಲೆ ರಸ್ತೆ ಪುನಶ್ಚೇತನ ಕಾರ್ಯವನ್ನು ಪೂರ್ಣಗೊಳಿಸಲು ಜಲಮಂಡಳಿ ಅಧಿಕಾರಿಗೆ ಸೂಚನೆ ನೀಡಿದರು.

ಆಟೋ ಟಿಪ್ಪರ್ ಮಸ್ಟರಿಂಗ್ ಪಾಯಿಂಟ್ ಗೆ ಭೇಟಿ:
ಬಾಗಲಗುಂಟೆ ವಾರ್ಡ್ ಎಂ.ಇ.ಐ ಲೇಔಟ್ ನಲ್ಲಿ ಮಸ್ಟರಿಂಗ್ ಪಾಯಿಂಟ್ ಗೆ ಭೇಟಿ ನೀಡಿ ಪೌರಕಾರ್ಮಿಕರು ಹಾಗೂ ಆಟೋ ಟಿಪ್ಪರ್ ಚಾಲಕ, ಸಹಾಯಕರ ಜೊತೆ ಕೆಲ ಕಾಲ ಮಾತನಾಡಿ ಸುರಕ್ಷಾ ಸಾಮಗ್ರಿಗಳನ್ನು ಧರಿಸಿ ಕೆಲಸ ಮಾಡಲು ತಿಳಿಸಿದರು. ಇದೇ ವೇಳೆ ಸಿಬ್ಬಂದಿಗೆ ನೀಡಿರುವ ಬೂಟುಗಳನ್ನು ಪರಿಶೀಲನೆ ಮಾಡಿದರು. ಕಿರ್ಲೋಸ್ಕರ್ ಬಡಾವಣೆಯಲ್ಲಿ 110 ಹಳ್ಳಿ ರಸ್ತೆ ಪುನಶ್ಚೇತನ ಕಾರ್ಯ ಪರಿಶೀಲನೆ ನಡೆಸಿ, ಸರಿಯಾದ ಜೆಲ್ಲಿಯನ್ನು ಹಾಕಿ ಡಾಂಬರೀಕರಣ ಮಾಡಬೇಕು. ಜೊತೆಗೆ ರಸ್ತೆ ಬದಿ ಚರಂಡಿಗಳನ್ನು ಸರಿಯಾಗಿ ನಿರ್ಮಿಸಬೇಕು. ರಸ್ತೆ ಪುನಶ್ಚೇತನ ಕಾರ್ಯ ಮುಗಿದ ನಂತರ ಮತ್ತೆ ರಸ್ತೆ ಅಗೆಯದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಸರಘಟ್ಟ, ನೆಲಗದನಹಳ್ಳಿ ಮುಖ್ಯ ರಸ್ತೆ
ಹೆಸರಘಟ್ಟ ಮುಖ್ಯ ರಸ್ತೆ(4 ಕಿ.ಮೀ ಉದ್ದ)ಯ ಅಭಿವೃದ್ಧಿ ಕಾಮಗಾರಿಯನ್ನು 15 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು, ಜಲಮಂಡಳಿಯಿಂದ ಒಳಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿ ಮುಗಿದಿದ್ದು, ರಸ್ತೆ ಡಾಂಬರೀಕರಣ ಹಾಕುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಪೈಕಿ ರಸ್ತೆ ದುರಸ್ತಿ ಕಾರ್ಯವನ್ನು ಕೂಡಲೆ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.2.5 ಕಿ.ಮೀ ಉದ್ದದ ನೆಲಗದನಹಳ್ಳಿ ಮುಖ್ಯ ರಸ್ತೆಯನ್ನು 20 ಕೋಟಿ ರೂ. ವೆಚ್ಚದಲ್ಲಿ 30 ಅಡಿ ಯಿಂದ 60 ಅಡಿಗೆ ಅಗಲೀಕರಣ ಕೆಲಸ ಪ್ರಾರಂಭವಾಗಿದೆ. ಇದರಿಂದ ಈ ಭಾಗದಲ್ಲಿ ಬಹುತೇಕ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಅಭಿವೃದ್ಧಿ ಹಕ್ಕು ಹಸ್ತಾಂತರ(ಟಿಡಿಆರ್) ಪ್ರಕ್ರಿಯೆಯನ್ನು ಮುಗಿಸಿ ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತರಿಗೆ 200 ರೂ.ಗೆ ಗೊಬ್ಬರ
ದೊಡ್ಡಬಿದರಕಲ್ಲು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 150 ಟನ್ ಸಂಸ್ಕರಿಸುವ ಸಾಮರ್ಥ್ಯವಿದ್ದು, ಸದ್ಯ ಪ್ರತಿನಿತ್ಯ 90 ರಿಂದ 100 ಟನ್ ಹಸಿ ತ್ಯಾಜ್ಯವನ್ನು ಸ್ವೀಕರಿಸಲಾಗುತ್ತಿದೆ. ವಿವಿಧ ಹಂತಗಳಲ್ಲಿ 43 ದಿನಗಳಲ್ಲಿ ಗೊಬ್ಬರವಾಗಿ ಪರಿವರ್ತನೆಯಾಗಲಿದೆ. 1 ಮೆಟ್ರಿಕ್ ಟನ್ ಅನ್ನು ಕೃಷಿ ಇಲಾಖೆ ಮುಖಾಂತರ ರೈತರಿಗೆ 200 ರೂ. ಗೆ ಗೊಬ್ಬರವನ್ನು ನೀಡಲಾಗುವುದು.

ಚೊಕ್ಕಚಂದ್ರ ಕೆರೆ ಹಾಗೂ ರಾಜಕಾಲುವೆ ಪರಿಶೀಲನೆ:
ಚೊಕ್ಕಚಂದ್ರ ಕೆರೆಯು 27 ಎಕರೆ ಪ್ರದೇಶದಲ್ಲಿದ್ದು, ಶುದ್ಧ ನೀರು ಕೆರೆಗೆ ಸೇರುವ ಸಲುವಾಗಿ 1 ಎಂ.ಎಲ್.ಡಿ ಎಸ್.ಟಿ.ಪಿ ಅಳವಡಿಸಲಾಗಿದೆ. ಕೆರೆಯ ಬಳಿಯಿರುವ ರಾಜಕಾಲುವೆಯಲ್ಲಿ ವಾರ್ಷಿಕ ನಿರ್ವಹಣೆ ಗುತ್ತಿಗೆಯಡಿ ನಿರಂತರವಾಗಿ ಹೂಳೆತ್ತುವ ಕಾರ್ಯ ಮಾಡಬೇಕು. ಇದೇ ಸ್ಥಳದಲ್ಲಿ ಮಳೆಯಾದರೆ ರಾಜಕಾಲುವೆ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಅದನ್ನು ತಪ್ಪಿಸುವ ಸಲುವಾಗಿ ಪರ್ಯಾಯ ಕಾಲುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಂಡು ರಸ್ತೆ ಮೇಲೆ ನೀರು ಹರಿಯದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಮಾಗಡಿ ರಸ್ತೆ ಹಾಗೂ ಸುಂಕದಕಟ್ಟೆ ರಸ್ತೆ ಸಂಪರ್ಕ ಸ್ಥಳ ಪರಿಶೀಲನೆ:
ಸುಂಕದಕಟ್ಟೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ 100 ಮೀಟರ್ ಖಾಸಗಿ ಸ್ಥಳದ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ರಸ್ತೆಗೆ ಅನುವು ಮಾಡಿಕೊಟ್ಟಿರುವ ಮಾಲೀಕರಿಗೆ ಟಿಡಿಆರ್ ನೀಡಿ ರಸ್ತೆಯನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಂಡು ರಸ್ತೆಯನ್ನು ಅಭಿವೃದ್ಧಿ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನೆ ವೇಳೆ ಶಾಸಕರಾದ ಮಂಜುನಾಥ್, ವಲಯ ಆಯುಕ್ತರಾದ ಶರತ್, ವಲಯ ಜಂಟಿ ಆಯುಕ್ತರಾದ ಜಗದೀಶ್, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರಾದ ಪರಶುರಾಮ್, ಮುಖ್ಯ ಇಂಜಿನಿಯರ್ ಗಳಾದ ವಿಜಯ್ ಕುಮಾರ್, ಪ್ರಹ್ಲಾದ್, ಬಸವರಾಜ್ ಕಬಾಡೆ, ಸುಗುಣಾ, ವಿಜಯ್ ಕುಮಾರ್ ಹರಿದಾಸ್, ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.