Bengaluru: ನಿನ್ನೆ ಸಂಜೆ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತ; ಜಲಾವೃತಗೊಂಡ ಅಂಡರ್‌ಪಾಸ್, ಹಲವೆಡೆ ಮರಗಳು ಧರೆಗೆ
ಗುರುವಾರ ಸಂಜೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿಢೀರನೆ ಸುರಿದ ಭಾರೀ ಮಳೆ ಮತ್ತು ಬಿರುಗಾಳಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಚೇರಿ ಮುಗಿಸಿ ಮನೆಗೆ ಹಿಂದಿರುಗುವ ಪೀಕ್ ಅವರ್‌ನಲ್ಲಿ ಏಕಾಏಕಿ ವರುಣನ ಆರ್ಭಟ ಶುರುವಾಗಿದ್ದರಿಂದ, ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ತೀವ್ರ ಪರದಾಡುವಂತಾಯಿತು.
ನಗರದ ಹಲವು ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶದ ಅಂಡರ್‌ಪಾಸ್‌ಗಳು ಕೆಲವೇ ಹೊತ್ತಿನಲ್ಲಿ ಜಲಾವೃತಗೊಂಡು ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಯಿತು. ಪ್ರಮುಖವಾಗಿ ಮಡಿವಾಳ ಅಂಡರ್‌ಪಾಸ್‌ನಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದರಿಂದ ವಾಹನಗಳ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಇದರಿಂದಾಗಿ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಬಂಪರ್-ಟು-ಬಂಪರ್ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಂಡಿದ್ದರು.

ಸಾರಕ್ಕಿ ಸಿಗ್ನಲ್‌ನಿಂದ ಜೆಪಿ ನಗರ 3ನೇ ಹಂತದವರೆಗಿನ ರಸ್ತೆಯಲ್ಲಿ ವಾಹನಗಳ ಸಂಚಾರ ತೀವ್ರ ವಿಳಂಬವಾಯಿತು. ಬಿಳೇಕಹಳ್ಳಿ ಬಳಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಎಚ್‌ಎಸ್‌ಬಿಸಿ ಜಂಕ್ಷನ್ ಕಡೆಗೆ ಹೋಗುವ ಮಾರ್ಗದಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿತ್ತು.
ಅದೇ ರೀತಿ ಕುಬೇರ ಜಂಕ್ಷನ್ ಮೂಲಕ ರೂಬಿ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರಿಗೂ ಮಳೆ ನೀರಿನಿಂದಾಗಿ ಭಾರಿ ಅಡಚಣೆ ಉಂಟಾಯಿತು. ರೂಪೇನ ಅಗ್ರಹಾರದಿಂದ ಬೊಮ್ಮನಹಳ್ಳಿ, ಹುಳಿಮಾವು ಗೇಟ್, ಬಿಸ್ಮಿಲ್ಲಾ ಜಂಕ್ಷನ್, ಮತ್ತು ಸಾಗರ್ ಜಂಕ್ಷನ್‌ನಿಂದ ಡೈರಿ ಸರ್ಕಲ್ ವರೆಗಿನ ರಸ್ತೆಗಳಲ್ಲೂ ನೀರು ನಿಂತು ವಾಹನಗಳು ನಿಧಾನಗತಿಯಲ್ಲಿ ಸಾಗಿದವು.
ಮಳೆಯ ಜೊತೆಗೆ ಬೀಸಿದ ಬಿರುಗಾಳಿಗೆ ನಗರದಾದ್ಯಂತ ಹಲವೆಡೆ ಮರಗಳು ಮತ್ತು ರೆಂಬೆ-ಕೊಂಬೆಗಳು ಮುರಿದು ಬಿದ್ದು ರಸ್ತೆಗಳು ಬಂದ್ ಆಗಿದ್ದವು. ಕೊಡಿಗೇಹಳ್ಳಿ ಗ್ರಾಮದ ಬಳಿ ಹಲವು ಲೇನ್‌ಗಳಿಗೆ ಅಡ್ಡಲಾಗಿ ದೊಡ್ಡ ಮರವೊಂದು ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ದೊಡ್ಡ ಅಡಚಣೆ ಉಂಟಾಯಿತು.
ಆರ್‌ವಿ ಡೆಂಟಲ್ ಕಾಲೇಜು ಬಳಿ ಅರವಿಂದ ಜಂಕ್ಷನ್ ಕಡೆಗೆ ಹೋಗುವ ರಸ್ತೆಯಲ್ಲಿ ಮರ ಬಿದ್ದಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಜಯದೇವ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ 100 ಅಡಿ ವರ್ತುಲ ರಸ್ತೆಯಲ್ಲೂ ಮರ ಬಿದ್ದು ಭಾರಿ ಟ್ರಾಫಿಕ್ ಜಾಮ್ ಆಯಿತು. ಇನ್ನು 27ನೇ ಕ್ರಾಸ್ ಜಂಕ್ಷನ್ ಬಳಿ ಮೆಟ್ರೋ ಪಿಲ್ಲರ್‌ಗಳ ಕೆಳಗೆ ಬೃಹತ್ ಮರವೊಂದು ಉರುಳಿ ಬಿದ್ದು ಸೌತ್ ಎಂಡ್ ಸರ್ಕಲ್ ಕಡೆಗೆ ಹೋಗುವ ವಾಹನಗಳಿಗೆ ತೊಂದರೆಯಾಯಿತು.
ಆಫೀಸ್ ಮುಗಿಸಿ ಮನೆಗೆ ತೆರಳುವ ಧಾವಂತದಲ್ಲಿದ್ದ ಟೆಕ್ಕಿಗಳು ಸೇರಿದಂತೆ ಸಾವಿರಾರು ಉದ್ಯೋಗಿಗಳು ಟ್ರಾಫಿಕ್‌ನಲ್ಲಿ ಸಿಲುಕಿ ಹೈರಾಣಾದರು. ರಸ್ತೆಯಲ್ಲಾದ ಅವ್ಯವಸ್ಥೆಯನ್ನು ಸರಿಪಡಿಸಲು ತಕ್ಷಣ ಕಾರ್ಯಪ್ರವೃತ್ತರಾದ ಬೆಂಗಳೂರು ಸಂಚಾರ ಪೊಲೀಸರು, ಮರ ಕೊಯ್ಯುವ ಯಂತ್ರಗಳ ಮೂಲಕ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದರು. ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು, ಕಸ ಕಡ್ಡಿಗಳಿಂದ ಮುಚ್ಚಿಹೋಗಿದ್ದ ಚರಂಡಿಗಳನ್ನು ಶುಚಿಗೊಳಿಸಿ ರಸ್ತೆಯಲ್ಲಿ ನಿಂತಿದ್ದ ನೀರು ಹರಿದುಹೋಗುವಂತೆ ಮಾಡಲು ಹರಸಾಹಸ ಪಟ್ಟರು.












Click it and Unblock the Notifications