ಬಿಬಿಎಂಪಿಗೆ ಕೋಟಿ..ಕೋಟಿ ರೂ. ಆದಾಯ ಸಂಗ್ರಹ: ಒಟಿಎಸ್, ಇ- ಖಾತಾದಿಂದ ದುಡ್ಡಿನ ಮಳೆ!
ಬಿಬಿಎಂಪಿಯು (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಗೆ ಕೋಟಿ ಕೋಟಿ ದುಡ್ಡು ಹರಿದು ಬಂದಿದೆ. ಬಿಬಿಎಂಪಿಯು ಆದಾಯ ಸಂಗ್ರಹದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ. ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಒಟಿಎಸ್ (ಒಂದು ಬಾರಿ ಪರಿಹಾರ ಯೋಜನೆ - OTS ) ಯೋಜನೆಯ ಲಾಭವನ್ನು ಪರಿಚಯಿಸಿತ್ತು. ಇದರಿಂದ ಬಿಬಿಎಂಪಿಗೆ ಕೋಟ್ಯಾಂತರ ರೂಪಾಯಿ ಆದಾಯ ಹರಿದು ಬಂದಿದೆ. ಬಿಬಿಎಂಪಿಯು ಆಸ್ತಿ ತೆರಿಗೆ ಸಂಗ್ರಹದಲ್ಲಿ ಹೊಸ ದಾಖಲೆಯನ್ನು ಬರೆದಿದ್ದು, ಇದನ್ನು ಇನ್ನಷ್ಟು ಹೆಚ್ಚಳ ಮಾಡುವುದಾಗಿ ಹೇಳಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಪ್ರಮುಖ ಆದಾಯ ಮೂಲವಾಗಿದೆ. ಬೆಂಗಳೂರಿನಲ್ಲಿ ವಿವಿಧ ಕಾಮಗಾರಿಗಳನ್ನು ಹಾಗೂ ಯೋಜನೆಗಳನ್ನು ಅನುಷ್ಠಾನ ಮಾಡುವುದು ಹಾಗೂ ಅಧಿಕಾರಿಗಳಿಗೆ ಸಂಬಳ ಸೇರಿದಂತೆ ಹಲವು ಖರ್ಚುಗಳಿಗೆ ಬೆಂಗಳೂರಿನ ಆಸ್ತಿ ತೆರಿಗೆ ಆದಾಯವೂ ಪ್ರಮುಖವಾಗಿದೆ. ಅಲ್ಲದೇ ಈಚೆಗೆ ಬೆಂಗಳೂರಿನ ಆಸ್ತಿಗಳಿಗೆ ಇ -ಖಾತಾ ಕಡ್ಡಾಯ ಮಾಡಲಾಗಿದ್ದು, ಇದರಿಂದ ಬಿಬಿಎಂಪಿಗೆ ಆದಾಯ ಸೋರಿಕೆಯಾಗುವುದು ಕಡಿಮೆಯಾಗಿದೆ. ಅದರೊಂದಿಗೆ ಆದಾಯ ಸಂಗ್ರಹವಾಗುವ ಪ್ರಮಾಣವೂ ಹೆಚ್ಚಳವಾಗಿದೆ.

ಇದೀಗ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳೇ ನೀಡಿರುವ ಮಾಹಿತಿಯ ಪ್ರಕಾರ, ಬಿಬಿಎಂಪಿ ಆಸ್ತಿ ತೆರಿಗೆಯು 30.11.24 ಕ್ಕೆ 4284 ಕೋಟಿ ರೂಪಾಯಿ ಮೊತ್ತದ ಆದಾಯ ಸಂಗ್ರಹವಾಗಿದೆ. ಅಲ್ಲದೇ ಬಿಬಿಎಂಪಿಯಲ್ಲಿ ಇದುವರೆಗೆ ಸಂಗ್ರಹವಾಗಿರು ಅತ್ಯಧಿಕ ತೆರಿಗೆ ಸಂಗ್ರಹ ಇದಾಗಿದೆ ಎಂದು ಬಿಬಿಎಂಪಿ ಹೇಳಿದೆ.
ಅಲ್ಲದೇ ಈ ವರ್ಷ ಅಂದರೆ 2024 -25ನೇ ಸಾಲಿನಲ್ಲಿ ಬಿಬಿಎಂಪಿಯು 5,200 ಕೋಟಿ ಆದಾಯ ಸಂಗ್ರಹ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳ ಆಸ್ತಿ ತೆರಿಗೆ ಸಂಗ್ರಹದಿಂದ ಆರ್ಥಿಕ ವರ್ಷ ಮಾರ್ಚ್ 2025ರ ಅಂತ್ಯಕ್ಕೆ 5200 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಸಾರ್ವಜನಿಕರಿಗೂ ಇ-ಖಾತಾವನ್ನು ಸುಗಮವಾಗಿ ಪಡೆಯಲು ಬಿಬಿಎಂಪಿ ಬದ್ಧವಾಗಿದೆ ಎಂದು ಹೇಳಲಾಗಿದೆ.

ಒಟಿಎಸ್ ಮುಕ್ತಾಯ: ನವೆಂಬರ್ 30ರ ವರೆಗೆ ಒಟಿಎಸ್ ಯೋಜನೆಯನ್ನು ನೀಡುವುದಾಗಿ ಹಾಗೂ ಇದಾದ ಮೇಲೆ ಡಿಸೆಂಬರ್ 1ರಿಂದ ಈ ಯೋಜನೆಯನ್ನು ಬಳಸಿಕೊಳ್ಳದೆ ಇದ್ದರೆ, ಬಾಕಿದಾರರು ದುಪ್ಪಟ್ಟು ಆಸ್ತಿ ತೆರಿಗೆ ಪಾವತಿ ಮಾಡಬೇಕು ಎಂದು ಬಿಬಿಎಂಪಿಯು ಹೇಳಿತ್ತು. ಅದರಂತೆ ನವೆಂಬರ್ 30 ಮುಕ್ತಾಯವಾಗಿದೆ. ಆದರೆ, ನಾಳೆಯಿಂದ ಇದು ದುಪ್ಪಟ್ಟಾಗಲಿದೆಯೇ ಅಥವಾ ಒಟಿಎಸ್ ಯೋಜನೆಯನ್ನು ಮುಂದುವರಿಸಲಾಗುವುದೇ ಇಲ್ಲ ಅಂತ್ಯವಾಗಲಿದೆಯೇ ಎನ್ನುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯಿಂದ ಇನ್ನಷ್ಟೇ ಅಧಿಕೃತ ಆದೇಶ ಬರಬೇಕಿದೆ.
ಇನ್ನು ಈಗಾಗಲೇ ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಒಟಿಎಸ್ ಯೋಜನೆಯನ್ನು ಮುಂದುವರಿಸುವ ಪ್ಲಾನ್ ಇಲ್ಲ ಎಂದೇ ಹೇಳಿದ್ದರು. ಹೀಗಾಗಿ, ಈ ಯೋಜನೆ ಮುಂದುವರಿಯುವ ಸಾಧ್ಯತೆ ಕಡಿಮೆ ಇದೆ. ಆದರೆ, ಇದೀಗ ಹೆಚ್ಚು ಆದಾಯ ಸಂಗ್ರಹವಾಗುತ್ತಿರುವುದರಿಂದ ಈ ಯೋಜನೆ ಮುಂದುವರಿಸಲಾಗುವುದೇ ಎನ್ನುವ ಕುತೂಹಲ ಜನರಲ್ಲಿ ಇದೆ.
ಇನ್ನು ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಏಳರಿಂದ ಎಂಟು ಲಕ್ಷ ಆಸ್ತಿಗಳಿಗೆ ಸಂಬಂಧಿಸಿದಂತೆ ಆಸ್ತಿ ಖಾತಾಗಳನ್ನು ಮಾಡಿಸಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದರು. ಈ ರೀತಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿರುವವರನ್ನೂ ಇದೀಗ ಆಸ್ತಿ ವ್ಯಾಪ್ತಿಗೆ ಸೇರಿಸಿರುವುದರಿಂದ ಬಿಬಿಎಂಪಿಯ ಆಸ್ತಿ ತೆರಿಗೆ ಆದಾಯ ಹೆಚ್ಚಾಗಿರುವುದಕ್ಕೆ ಕಾರಣವಾದಂತೆ ಆಗಿದೆ.












Click it and Unblock the Notifications