ಬೆಂಗಳೂರು ದೇಶದ ನಂ.1 ವಾಣಿಜ್ಯ ಕೇಂದ್ರ
ಬೆಂಗಳೂರು, ಅ.22 : ದೇಶದ ಐಟಿ ರಾಜಧಾನಿ, ಭಾರತದ ಸಿಲಿಕಾನ್ ವ್ಯಾಲಿ ಎಂದೆಲ್ಲ ಖ್ಯಾತಿ ಗಳಿಸಿರುವ ನಮ್ಮ ಬೆಂಗಳೂರು ಈಗ ದೇಶದ ಅಚ್ಚುಮೆಚ್ಚಿನ ಉದ್ಯಮ ತಾಣವಾಗಿ ಹೊರಹೊಮ್ಮಿದೆ.
ಟಾಪ್ ಬಿಸಿನೆಸ್ ನಗರಗಳ ಪೈಕಿ ಬೆಂಗಳೂರು ಅಗ್ರಸ್ಥಾನ ಪಡೆದಿದ್ದರೆ ಚೆನ್ನೈ, ಮುಂಬೈ ಹಾಗೂ ಪುಣೆ ನಂತರದ ಸ್ಥಾನ ಪಡೆದಿವೆ. ದೇಶದ ಅಚ್ಚುಮೆಚ್ಚಿನ ಉದ್ಯಮ ತಾಣ ಸಮೀಕ್ಷೆ ನಡೆಸಿರುವ ಸಂಸ್ಥೆ ಪ್ರತಿ ನಗರದ ಮೂಲ ಸೌಕರ್ಯ, ನಾಗರಿಕರ ತಲಾ ಆದಾಯ, ನಗರ ಸಂಸ್ಕೃತಿ, ಜೀವನ ಸಾಗಿಸಲು ಬೇಕಾದ ಅಗತ್ಯ ಸೌಲಭ್ಯಗಳನ್ನು ಗಣನೆಗೆ ತೆಗೆದುಕೊಂಡು ಶ್ರೇಯಾಂಕ ಪಟ್ಟಿ ಪ್ರಕಟಿಸಿದೆ.
ರಾಜಧಾನಿ ದೆಹಲಿ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಆದರೆ, ರಾಷ್ಟ್ರ ರಾಜಧಾನಿ ಪ್ರದೇಶ(NCR) ಗೆ ಸೇರಿರುವ ನೋಯ್ಡಾ ಹಾಗೂ ಗುರ್ ಗಾಂವ್ 17 ಹಾಗೂ 19ನೇ ಸ್ಥಾನ ಪಡೆದಿವೆ.

ಗ್ಲೋಬಲ್ ಇನಿಶಿಯೇಟಿವ್ ಫಾರ್ ರಿಕಸ್ಟ್ರಕ್ಚರಿಂಗ್ ಎನ್ವಿರೊನ್ಮೆಂಟ್ ಅಂಡ್ ಮ್ಯಾನೇಜ್ಮೆಂಟ್(GIREM) ಹಾಗೂ ರಿಯಲ್ ಎಸ್ಟೇಟ್ ಸಂಸ್ಥೆ DTZ ಈ ಸಮೀಕ್ಷೆ ನಡೆಸಿದ್ದು, ಪಟ್ಟಿಯಲ್ಲಿ ಸಣ್ಣ ಪುಟ್ಟ ನಗರಗಳು ಕಾಣಿಸಿಕೊಂಡಿರುವುದು ಆಶಾದಾಯಕ ಸಂಗತಿಯಾಗಿದೆ.
ಇಂದೋರ್(5ನೇ ಸ್ಥಾನ), ಭುವನೇಶ್ವರ(6) ಹಾಗೂ ಕೊಯಮತ್ತೂರು (7) ಉನ್ನತ ಸ್ಥಾನದಲ್ಲಿದ್ದು ಮೆಟ್ರೋ ಸಿಟಿಗಳಿಗೆ ಪೈಪೋಟಿ ನೀಡುತ್ತಿವೆ. ಒಟ್ಟಾರೆ 21 ಟಾಪ್ ಉದ್ಯಮಿಗಳ ಮೆಚ್ಚಿನ ತಾಣಗಳನ್ನು ದೇಶದಲ್ಲಿ ಗುರುತಿಸಲಾಗಿದೆ. ಅಹಮದಾಬಾದ್ 8ನೇ ಶ್ರೇಯಾಂಕ ಪಡೆದರೆ ನಾಗಪುರ 9 ಹಾಗೂ ಕೊಚ್ಚಿ 10ನೇ ಸ್ಥಾನದಲ್ಲಿದೆ.
ಸಮೀಕ್ಷೆ ಫಲಿತಾಂಶದ ಬಗ್ಗೆ ವಿವರಿಸಿದ GIREM ನ ಚೇರ್ಮನ್ ಸ್ಯಾಂಕಿ ಪ್ರಸಾದ್, 'ಟಾಪ್ 21 ನಗರಗಳಲ್ಲಿ ಈಗಾಗಲೇ ಹಲವು ನಗರಗಳು ತಮ್ಮ ಅಸ್ತಿತ್ವವನ್ನು ಔದ್ಯಮಿಕ ಜಗತ್ತಿನಲ್ಲಿ ಗುರುತಿಸಿಕೊಂಡಿವೆ. ಉಳಿದಂತೆ ಸಣ್ಣ ನಗರಗಳು ಉನ್ನತ ಮಟ್ಟಕ್ಕೇರುವ ಉತ್ತಮ ಅವಕಾಶ ಹೊಂದಿವೆ' ಎಂದಿದ್ದಾರೆ.
ಶ್ರೇಯಾಂಕ ಪಟ್ಟಿ ತಯಾರಿಸುವ ಮೇಲೆ ಹೇಳಿದ ಅಂಶಗಳ ಜತೆ ನಗರದಲ್ಲಿನ ಜಲ ಸಂಪರ್ಕ, ವಿದ್ಯುತ್ ಪೂರೈಕೆ, ಸಾರಿಗೆ, ವಸತಿ, ಆರೋಗ್ಯ, ಹವಾಮಾನ, ಕಚೇರಿ ಸ್ಥಳ ಲಭ್ಯತೆ, ಆರ್ಥಿಕ ಸಾಮಾಜಿಕ ಪರಿಸರ ಸ್ನೇಹಿ ವಾತಾವರಣ ಇದೆಯೆ ಎಂದು ಪರೀಕ್ಷಿಸಿ ಸಮೀಕ್ಷೆ ನಡೆಸಲಾಗಿದೆ.
ಉಳಿದಂತೆ ಪಟ್ಟಿಯಲ್ಲಿ ಚಂದೀಗಢ 11ನೇ ಸ್ಥಾನ, ಹೈದರಾಬಾದ್(12), ವಡೋದರಾ(14), ಜೈಪುರ (15), ಕ್ಯಾಲಿಕಟ್ (16), ಕೋಲ್ಕತ್ತಾ (18), ನವಿ ಮುಂಬೈ (20) ಹಾಗೂ ವಿಶಾಖಪಟ್ಟಣಂ (21) ಸ್ಥಾನ ಪಡೆದಿವೆ. (ಪಿಟಿಐ)












Click it and Unblock the Notifications