ಆಟೋ ದರದಲ್ಲಿ ಮತ್ತೆ ಏರಿಕೆ: ಡಿಸೆಂಬರ್ 20ರಿಂದ ಹೊಸ ದರ
ಬೆಂಗಳೂರು, ಡಿ 17: ಬೆಂಗಳೂರು ನಗರ ವ್ಯಾಪ್ತಿಗೆ ಮಾತ್ರ ಅನ್ವಯಿಸುವಂತೆ ಆಟೋ ಪ್ರಯಾಣದ ದರ ಮತ್ತೆ ಏರಿಕೆಯಾಗಿದೆ. ಡಿಸೆಂಬರ್ 20, 2013ರಿಂದ ಪರಿಷ್ಕೃತ ಆಟೋ ದರ ಜಾರಿಗೆ ಬರಲಿದೆ.
ಕನಿಷ್ಠ ದರವನ್ನು ಈಗಿನ 20 ರೂಪಾಯಿಂದ 25 ರೂಪಾಯಿಗೆ ಹೆಚ್ಚಿಸಲಾಗಿದೆ. ಹಾಗೆಯೇ, ಕಿಲೋಮೀಟರ್ ದರವನ್ನು ಈಗಿನ 11 ರೂಪಾಯಿಂದ 13 ರೂಪಾಯಿಗೆ ಏರಿಸಲಾಗಿದೆ. ಕಳೆದ ವರ್ಷ ಮಾರ್ಚ್ ಹನ್ನೆರಡರಂದು ಆಟೋ ದರವನ್ನು ಏರಿಸಲಾಗಿತ್ತು.

ಕಾಯುವ ಮೊತ್ತವನ್ನು (waiting charge) ಪ್ರತಿ ಗಂಟೆಗೆ ಈಗಿನ ನಾಲ್ಕು ರೂಪಾಯಿಯಿಂದ ಇಪ್ಪತ್ತು ರೂಪಾಯಿಗೆ ಏರಿಕೆ ಮಾಡಲಾಗಿದೆ.
ಆಟೋ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದ್ದರಿಂದ ಆಟೋದರವನ್ನು ಏರಿಸಬೇಕೆಂದು ಬೆಂಗಳೂರಿನ ಆಟೋ ಚಾಲಕರ ಸಂಘ ಸರಕಾರದ ಮುಂದೆ ಬೇಡಿಕೆಯನ್ನು ಇಟ್ಟಿತ್ತು.
ಬೆಂಗಳೂರು ಜಿಲ್ಲಾಧಿಕಾರಿ ಜಿ ಸಿ ಪ್ರಕಾಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ವಿವಿಧ ಆಟೋ ಸಂಘಗಳು ಭಾಗವಹಿಸಿದ್ದ ಈ ಸಭೆಯಲ್ಲಿ ಕಿಲೋಮೀಟರಿಗೆ ಹದಿನೈದು ರೂಪಾಯಿ ನಿಗದಿ ಪಡಿಸುವಂತೆ ಸಂಘಗಳು ಬೇಡಿಕೆ ಇಟ್ಟಿದ್ದವು.
ಆಟೋ ದೂರುಗಳು : ಕರೆದಲ್ಲಿ ಬರದಿದ್ದರೆ, ಹೆಚ್ಚಿಗೆ ಹಣ ಕಿತ್ತುಕೊಂಡರೆ, ಕೆಟ್ಟದಾಗಿ ವರ್ತಿಸಿದರೆ, ಅಪರಿಚರನ್ನು ಹತ್ತಿಸಿಕೊಂಡರೆ, ಸಾರ್ವಜನಿಕರು ಆಟೋರಿಕ್ಷಾದ ನಂಬರ್ ದಾಖಲಿಸಿಕೊಂಡು, ನೇರವಾಗಿ ಮುಂದೆ ನಮೂದಿಸಿರುವ ನಂಬರಿಗೆ ದೂರು ನೀಡಿರಿ - 080-25588444, 080-25588555.












Click it and Unblock the Notifications