ನೈಸ್ ರೋಡ್‌ನಲ್ಲಿ ದ್ವಿಚಕ್ರ ವಾಹನಕ್ಕೆ ನೋ ಎಂಟ್ರಿ!
ಬೆಂಗಳೂರು, ಜ. 13: ರಾಜಧಾನಿ ಹೊರ ವಲಯದ ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರವನ್ನು ನಿರ್ಬಂಧಿಸಿ ಬೆಂಗಳೂರು ಸಂಚಾರ ಪೊಲೀಸರು ಆದೇಶಿಸಿದ್ದಾರೆ.
ಜ. 16 ರಿಂದ ಜಾರಿಗೆ ಬರುವಂತೆ ನೈಸ್ ರಸ್ತೆಯಲ್ಲಿ ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಐದು ಗಂಟೆ ವರೆಗೆ ಯಾವುದೇ ದ್ವಿಚಕ್ರ ವಾಹನ ಸಂಚಾರ ಮಾಡುವಂತಿಲ್ಲ. ಈ ಕುರಿತು ನಂದಿ ಇನ್‌ಫ್ರಾಸ್ಟ್ರಕ್ಷರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿ.(NICE) ಅಧಿಕೃತ ಪ್ರಕಟಣೆ ನೀಡಿದೆ.
ನೈಸ್ ರಸ್ತೆಯಲ್ಲಿ ಇತ್ತೀಚೆಗೆ ಅಪಘಾತಗಳು ಸಂಭವಿಸುತ್ತಿವೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿ ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಿಸಿ ಕ್ರಮ ಜರುಗಿಸಲಾಗಿದೆ.

ಈ ಕುರಿತು ಒನ್ಇಂಡಿಯಾ ಕನ್ನಡ ಜತೆ ಮಾತನಾಡಿದ ಪಶ್ಚಿಮ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್, ನೈಸ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚುತ್ತಿವೆ. ನೈಸ್ ರಸ್ತೆಯಲ್ಲಿ ಅಪಘಾತಕ್ಕೀಡಾಗುತ್ತಿರುವ ದ್ವಿಚಕ್ರ ವಾಹನ ಸವಾರರ ಜೀವ ಉಳಿಯುವುದೇ ಕಷ್ಟ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಇನ್ನು ಅನೇಕರು ಹೆಲ್ಮೆಟ್ ಇಲ್ಲದೇ ವಾಹನ ಚಾಲನೆ ಮಾಡುತ್ತಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪ್ರಾಯೋಗಿಕ ಆದೇಶದಿಂದ ಅಪಘಾತಗಳು ಕಡಿಮೆಯಾದಲ್ಲಿ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುವುದು ಎಂದು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಇನ್ನು ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ಸಾರ್ವಜನಿಕರನ್ನು ಸುಲಿಗೆ ಮಾಡುವ ಪ್ರಕರಣಗಳು ಹೆಚ್ಚಾಗಿವೆ. ಅಪಘಾತ ಮಾಡಿದಂತೆ ನಟನೆ ಮಾಡಿ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡಿರುವ ಅನೇಕ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದವು. ಅದರಲ್ಲೂ ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರನ್ನೇ ಸುಲಿಗೆಕೋರರು ಟಾರ್ಗೆಟ್ ಮಾಡುತ್ತಿದ್ದರು. ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧದಿಂದ ಈ ಎಲ್ಲಾ ಅಕ್ರಮಗಳಿಗೆ ಬ್ರೇಕ್ ಬೀಳಲಿದೆಯಾ ಕಾದು ನೋಡಬೇಕು.

ನೈಸ್‌ನಲ್ಲಿ ಫಾಸ್‌ಟ್ಯಾಗ್ ಜಾರಿ: ಇನ್ನೂ ಬಹು ದಿನಗಳ ಪ್ರಸ್ತಾವನೆಯಂತೆ ನೈಸ್ ರಸ್ತೆಯಲ್ಲಿ ಫಾಸ್‌ಟ್ಯಾಗ್ ಅಳವಡಿಸಲಾಗಿದೆ. ವಾಹನಗಳ ಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ಫಾಸ್‌ಟ್ಯಾಗ್ ಅಳವಡಿಸಿದ್ದು ಒಂದು ವಾರದಿಂದ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಆದರೆ, ಫಾಸ್‌ಟ್ಯಾಗ್ ನಿರ್ವಹಣೆಯಲ್ಲಿ ಅಡಚಣೆ ಉಂಟಾಗಿ ಗೊಂದಲ ಉಂಟಾಗಿದೆ. ಪ್ರತಿ ನಿತ್ಯ ಸಂಜೆ ವೇಳೆ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.












Click it and Unblock the Notifications